Bhumika Deshpande Mother: ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುವ ನಟಿ ಭೂಮಿಕಾ ದೇಶಪಾಂಡೆ ಅವರು ತಾಯಿ ಪ್ರೀತಿ ಏನು ಎನ್ನೋದು ಗೊತ್ತೇ ಇಲ್ಲ ಎಂದು ಹೇಳಿದ್ದಾರೆ. 

ಸೋಶಿಯಲ್‌ ಮೀಡಿಯಾದಲ್ಲಿ ಕಂಡಿದ್ದೆಲ್ಲವೂ ನಿಜವಲ್ಲ, ಪುಸ್ತಕದ ಕವರ್‌ ನೋಡಿ ಅಳೆಯೋ ಬದಲು, ಪೇಜ್‌ಗಳನ್ನು ತಿರುವು ಹಾಕಿ ಜಡ್ಜ್‌ ಮಾಡಬೇಕು ಎಂದು ಹೇಳೋದುಂಟು. ಇದಕ್ಕೆ ಭೂಮಿಕಾ ದೇಶಪಾಂಡೆ ಉದಾಹರಣೆ. ನೇರವಾಗಿ ಮಾತನಾಡೋ ಭೂಮಿಕಾ ಇಷ್ಟು ಗಟ್ಟಿ ಆಗೋ ಹಿಂದೆ, ದೊಡ್ಡ ಕಥೆಯೇ ಇದೆ. ಯುಟ್ಯೂಬರ್‌, ನಟಿ ಭೂಮಿಕಾ ದೇಶಪಾಂಡೆ ( Bhumika Deshpande ) ಸದ್ಯ ವೇಟ್‌ಲಾಸ್‌ ಕೋಚ್‌ ಆಗಿಯೂ ಕೆಲಸ ಮಾಡುತ್ತಿದ್ದಾರೆ. 'ನ್ಯೂಸೋ ನ್ಯೂಸು' ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಂದೆಯ ಪ್ರೀತಿ, ಕುಡಿತ, ಅಪ್ಪ ತೀರಿಕೊಂಡಿದ್ದು, ತಾಯಿ ಬೇರೆ ಮದುವೆ ಆಗಿರುವ ಬಗ್ಗೆಯೂ ಮಾತನಾಡಿದ್ದಾರೆ.

ಹಗಲು-ರಾತ್ರಿ ಕುಡಿಯುತ್ತಿದ್ದರು

ಭೂಮಿಕಾ ಅಪ್ಪ- ಅಮ್ಮ ಯಾವಾಗಲೂ ಜಗಳ ಆಡುತ್ತಿದ್ದರು. ಭೂಮಿಕಾ ತಂದೆಗೆ ಆರ್ಥಿಕ ಸಮಸ್ಯೆ ಕೂಡ ಇತ್ತು. ಇದನ್ನು ನೋಡಿ ಭೂಮಿಕಾಗೂ, ಅವರ ತಂಗಿಗೂ ಸಾಕಾಗಿ ಹೋಗಿತ್ತು. ಆರ್ಥಕ ಸಮಸ್ಯೆ, ತಾಯಿ ಜೊತೆ ಜಗಳ ಎಂದು ತಂದೆ ಕುಡಿಯಲು ಆರಂಭಿಸಿದ್ದರು. ಎಂದಿಗೂ ಮದ್ಯವನ್ನು ಮುಟ್ಟದ ತಂದೆ, ಹಗಲು-ರಾತ್ರಿ ಕುಡಿಯೋಕೆ ಆರಂಭಿಸಿದ್ದರು. ಈ ರೀತಿ ಕುಡಿದು, ಟಾರ್ಚರ್‌ ಕೊಡೋಕೆ ಶುರು ಮಾಡಿದ್ದರು. ಮನೆಯಲ್ಲಿ ತಂದೆ ಕುಡಿಯೋಕೆ ಆರಂಭಿಸಿದಾಗ ಸಮಾಜ ನೋಡೋ ರೀತಿಯೇ ಬೇರೆ ಆಗಿರುತ್ತದೆ. ಹೀಗಾಗಿ ಭೂಮಿಕಾ ಬೇಸತ್ತಿದ್ದರು.

ಭೂಮಿಕಾ ತಂದೆ ತೀರಿಕೊಂಡ್ರು!

ಒಮ್ಮೆ ಭೂಮಿಕಾ ಬಾಲಿ ಟ್ರಿಪ್‌ನಲ್ಲಿದ್ದರು. ಆಗ ತಂದೆ ಫೋನ್‌ ಮಾಡಿದ್ದರಂತೆ. ಆಗ ಭೂಮಿಕಾ ಅವರು ಈ ರೀತಿ ಕುಡಿದು, ಕುಡಿದು ಹಿಂಸೆ ಮಾಡೋ ಬದಲು ಎಲ್ಲಿಯಾದರೂ ಹೋಗಿ ನೇಣು ಹಾಕಿಕೋ, ನಾವು ಎಲ್ಲಾದರೂ ಹೋಗಿ ಬದುಕ್ತೀವಿ ಅಂತ ಹೇಳಿದ್ದರಂತೆ. ಅದಾಗಿ ಐದು ದಿನಕ್ಕೆ ಭೂಮಿಕಾ ತಂದೆ ತೀರಿಕೊಂಡಿದ್ದರು. ಮಗಳು ಬರುವರೆಗೂ ಅವರ ದೇಹವನ್ನು ಹಾಗೆ ಇಟ್ಟಿದ್ದರು. ಪುನೀತ್‌ ರಾಜ್‌ಕುಮಾರ್‌ ತೀರಿಕೊಂಡಾಗ ಅವರ ಮಗಳು ಧೃತಿ ಕೂಡ ಹೊರಗಡೆ ಇದ್ದರು. ಪುನೀತ್‌ ಸಾವು, ತಂದೆ ಸಾವು ಒಂದೇ ಥರ ಅನಿಸುತ್ತದೆ ಎಂದು ಭೂಮಿಕಾ ಹೇಳಿದ್ದರು.

ತಾಯಿ ಪ್ರೀತಿ ಸಿಗಲಿಲ್ಲ!

“ನನ್ನ ಜೀವನದಲ್ಲಿ ತಾಯಿ ಪ್ರೀತಿ ಏನು ಎನ್ನೋದು ಗೊತ್ತೇ ಇಲ್ಲ. ಅಪ್ಪ ತೀರಿಕೊಂಡ ಹಾಗೆ ಅಮ್ಮ ಬೇರೆ ಮದುವೆ ಆದರು. ತಾಯಿ ಜೊತೆ ನಮ್ಮ ಕಾಂಟ್ಯಾಕ್ಟ್‌ ಕೂಡ ಇಲ್ಲ. ನಾನು, ನನ್ನ ತಂಗಿ ಒಟ್ಟಿಗೆ ಬೆಳೆದವು. ಮನೆಯಲ್ಲಿ ಕೆಲಸ ಮಾಡೋಕೆ ಒಬ್ಬರಿದ್ದರು, ಅವರಿಂದಲೇ ಊಟ-ತಿಂಡಿ ವ್ಯವಸ್ಥೆ ಆಗುತ್ತಿತ್ತು. ನಾನು ತಂಗಿಯನ್ನು ಓದಿಸಿದೆ” ಎಂದು ಭೂಮಿಕಾ ಹೇಳಿದ್ದಾರೆ.

ಗಂಡಸರನ್ನು ಕಂಡರೆ ಆಗೋದಿಲ್ಲ

“ರಾತ್ರೋ ರಾತ್ರಿ ಗಂಡಸರು ಬಂದು ನೂರು ರೂಪಾಯಿ ಕೊಡ್ತೀನಿ, ಬಾ ಅಂತ ಹೇಳ್ತಿದ್ದರು. ಹೋಟೆಲ್‌ನಲ್ಲಿ ಊಟ ಕೊಡಸ್ತೀನಿ ಬಾ ಅಂತಿದ್ದರು. ಯಾರೂ ಕೂಡ ಮದುವೆ ಆಗ್ತೀನಿ, ಲವ್‌ ಮಾಡ್ತಿದ್ದೀನಿ ಅಂತ ಹೇಳುತ್ತಿರಲಿಲ್ಲ. ಹೀಗಾಗಿ ಗಂಡಸರು ಅಂದರೆ ಇಷ್ಟ ಇರುತ್ತಿರಲಿಲ್ಲ” ಎಂದು ಭೂಮಿಕಾ ಹೇಳಿದ್ದಾರೆ.

ನನ್ನ ಜೀವನ ಚೆನ್ನಾಗಿದೆ

“ಆರು ತಿಂಗಳಾಯ್ತು, ನಾನು ಯಾವುದೇ ಕೆಲಸ ಮಾಡಿಲ್ಲ. ಒಂದು ಮಾಲ್ಟ್‌ ಪೌಡರ್‌ಗೆ ಅಂಬಾಸಿಡರ್‌ ಆಗಿದ್ದೇನೆ, ಅದೊಂದು ಚೆನ್ನಾಗಿ ನಡೆಯುತ್ತಿದೆ. ದೇವರ ದಯೆಯಿಂದ ನನ್ನ ತಿಂಗಳು ಖರ್ಚು ನಿಭಾಯಿಸುವಷ್ಟರ ಮಟ್ಟಿಗೆ ಆದಾಯ ಇದೆ. ನಾನು ಖುಷಿಯಾಗಿ ಜೀವನ ಮಾಡುತ್ತಿದ್ದೇನೆ” ಎಂದು ಹೇಳಿದ್ದಾರೆ.

ನಿಂಗರಾಜ್‌ ಹಾಗೂ ಭೂಮಿಕಾ ದೇಶಪಾಂಡೆ ಅವರು ಒಂದಿಷ್ಟು ಕಿರುಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇವರ ಜೋಡಿ ತುಂಬ ಫೇಮಸ್‌ ಆಗಿತ್ತು. ಯಾರ ದೃಷ್ಟಿ ಬಿತ್ತೋ ಏನೋ ಇವರಿಬ್ಬರು ದೂರ ದೂರ ಆದರು.

YouTube video player