ಬಿಗ್ ಬಾಸ್ ಫೇಮ್ ಶಿಶಿರ್ ಶಾಸ್ತ್ರಿ ತೆಲುಗು ಇಂಡಸ್ಟ್ರಿಯಿಂದ ತಮಗಾದ ಸಮಸ್ಯೆಯನ್ನು ಹೇಳ್ಕೊಂಡಿದ್ದಾರೆ. ಒಂದು ಲೆಟರ್ ಏನೆಲ್ಲಾ ಸಮಸ್ಯೆ ಮಾಡ್ತು ಎಂಬುದನ್ನು ಅವರು ಅಭಿಮಾನಿಗಳ ಮುಂದಿಟ್ಟಿದ್ದಾರೆ.
ಕನ್ನಡ ಇಂಡಸ್ಟ್ರಿ (Kannada Industry) ಚೆನ್ನಾಗಿಲ್ಲ, ಇಲ್ಲಿ ಸಾಕಷ್ಟು ಮೋಸ ನಡೆಯುತ್ತೆ, ಹಿಂಸೆ ನೀಡ್ತಾರೆ ಎನ್ನುವ ಆರೋಪ ಅನೇಕರಿಂದ ಕೇಳಿ ಬರ್ತಿದೆ. ಆದ್ರೆ ಬರೀ ಕನ್ನಡ ಮಾತ್ರವಲ್ಲ ತೆಲುಗು ಇಂಡಸ್ಟ್ರಿ (Telugu Industry)ಯಲ್ಲಿ ಕನ್ನಡಿಗರಿಗೆ ಎಷ್ಟು ಹಿಂಸೆಯಾಗ್ತಿದೆ ಎಂಬುದನ್ನು ಬಿಗ್ ಬಾಸ್ ಸ್ಪರ್ಧಿ ಶಿಶಿರ್ ಶಾಸ್ತ್ರಿ ಹಂಚಿಕೊಂಡಿದ್ದಾರೆ. ತೆಲುಗು ಇಂಡಸ್ಟ್ರಿಯಲ್ಲಿ ಬಹುತೇಕ ಕನ್ನಡಿಗರಿದ್ದಾರೆ. ಕರ್ನಾಟಕದ ಕಲಾವಿದರಿಗೆ ಅಲ್ಲಿ ಅವಕಾಶ ಸಿಗ್ತಿದೆ. ಕೆಲವೊಬ್ಬರು ಈ ಅವಕಾಶದ ಜೊತೆ ಹಿಂಸೆ ಅನುಭವಿಸ್ತಿದ್ದಾರೆ. ಇದಕ್ಕೆ ಶಿಶಿರ್ ಶಾಸ್ತ್ರಿ (Shishir Shastri) ಉತ್ತಮ ನಿದರ್ಶನ.
ಶಿಶಿರ್ ಶಾಸ್ತ್ರ ಅವರಿಗೆ ತೆಲುಗು ಇಂಡಸ್ಟ್ರಿಯಲ್ಲಿ ಒಂದು ಪ್ರಾಜೆಕ್ಟ್ ಸಿಕ್ಕಿತ್ತು. ಅಗ್ರಿಮೆಂಟ್ ಪ್ರಕಾರ ಎಲ್ಲ ಕೆಲ್ಸ ಮುಗಿಸಿ, ಕೊನೆ ಆಪಿಸೋಡ್ ಶೂಟ್ ಮಾಡಿ, ಬಿಗ್ ಬಾಸ್ ವಿಷ್ಯ ಹೇಳಿ, ಬಿಗ್ ಬಾಸ್ ಮನೆಗೆ ಬಂದಿದ್ರು ಶಿಶಿರ್ ಶಾಸ್ತ್ರಿ. ಸೆಪ್ಟೆಂಬರ್ ನಲ್ಲಿ ಶಿಶಿರ್ ಬಿಗ್ ಬಾಸ್ ಮನೆ ಸೇರಿದ್ರೆ ಅಕ್ಟೋಬರ್ ನಲ್ಲಿ ತೆಲುಗು ಇಂಡಸ್ಟ್ರಿಯಿಂದ ಲೆಟರ್ ಬಂದಿದೆ. ಸೌತ್ ಇಂಡಿಯಾದ ಯಾವುದೇ ಭಾಷೆಯಲ್ಲಿ ಶಿಶಿರ್ ಪ್ರಾಜೆಕ್ಟ್ ಮಾಡ್ಬಾರದು ಅಂತ ಲೆಟರ್ ನಲ್ಲಿ ಹೇಳಲಾಗಿದೆ. ಬಿಗ್ ಬಾಸ್ ಮನೆಯಲ್ಲೇ ಈ ವಿಷ್ಯ ಗೊತ್ತಾದ್ರೂ ಶಿಶಿರ್ ಸುಮ್ಮನಿದ್ರು. ಬಿಗ್ ಬಾಸ್ ಮನೆಯಿಂದ ಹೊರಗೆ ಬರ್ತಿದ್ದಂತೆ ಈ ಲೆಟರ್ ಅವ್ರ ಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರೋಕೆ ಶುರುವಾಯ್ತು.
ಇಂಡಸ್ಟ್ರಿ, ನಟನೆ ನಂಬಿ ಬದುಕ್ತಿರುವ ಶಿಶಿರ್ ಶಾಸ್ತ್ರಿಗೆ ಮೂರು ವರ್ಷ ಖಾಲಿ ಕುಳಿತುಕೊಳ್ಳೋದು ಸಾಧ್ಯ ಇರ್ಲಿಲ್ಲ. ಲೆಟರ್ ನಲ್ಲಿದ್ದಂತೆ ನಡೆದುಕೊಳ್ಭೇಕು ಅಂದ್ರೆ ಮೂರು ವರ್ಷ ಖಾಲಿ ಇರ್ಬೇಕು. ಇದು ಸಾಧ್ಯವಿಲ್ಲದ ಮಾತು. ಹಾಗಾಗಿ ಶಿಶಿರ್ ಲೆಟರ್ ನಿರ್ಲಕ್ಷ್ಯ ಮಾಡಿ ತಮ್ಮ ಕೆಲ್ಸ ಶುರು ಮಾಡಿದ್ರು. ಆರಂಭದಲ್ಲಿ ಒಂದಿಷ್ಟು ಪ್ರಮೋಷನ್ ಅದು ಇದು ಅಂತ ಬ್ಯುಸಿಯಾಗಿದ್ದ ಶಿಶಿರ್ ಶಾಸ್ತ್ರಿಗೆ ನಾಲ್ಕೈದು ಸೀರಿಯಲ್ ಆಫರ್ ಕೂಡ ಬಂದಿತ್ತು. ಎಲ್ಲ ಫೈನಲ್ ಆಯ್ತು, ಇನ್ನೇನು ಶೂಟಿಂಗ್ ಶುರು ಆಗ್ಬೇಕು ಎನ್ನುವಾಗ ವಿಘ್ನವಾಗ್ತಿತ್ತು. ಆ ಕಡೆಯಿಂದ ರಿಟರ್ನ್ ಕಾಲ್ ಬರ್ತಿರಲಿಲ್ಲ. ಇದ್ಯಾಕೆ ಹೀಗೆ ಅನ್ನೋದನ್ನು ಸರ್ಚ್ ಮಾಡಿದಾಗ ಗೊತ್ತಾಗಿದ್ದು ಲೆಟರ್. ಪ್ರತಿಯೊಬ್ಬರಿಗೂ ಲೆಟರ್ ವಿಷ್ಯ ಗೊತ್ತಾಗಿದ್ರಿಂದ ಶಿಶಿರ್ ಜೊತೆ ಪ್ರಾಜೆಕ್ಟ್ ಮಾಡೋಕೆ ಯಾರೂ ಸಿದ್ಧ ಇರ್ಲಿಲ್ಲ.
ಬಿಗ್ ಬಾಸ್ ಮನೆಯಿಂದ ಬಂದ್ಲೇಲೆ ಶಿಶಿರ್ ಈ ಲೆಟರ್ ವಿಷ್ಯಕ್ಕೆ ಸಾಕಷ್ಟು ಸಮಸ್ಯೆ ಎದುರಿಸಿದ್ರು. ಮೂರು ತಿಂಗಳ ಸಂಬಳವನ್ನು ತೆಲುಗು ಇಂಡಸ್ಟ್ರಿ ಇನ್ನೂ ನೀಡಿಲ್ಲ. ಈ ಟೈಂನಲ್ಲಿ ಶಿಶಿರ್ ಗೆ ಬೆಂಬಲವಾಗಿ ನಿಂತಿದ್ದು ಬಿಗ್ ಬಾಸ್ ಸ್ಪರ್ಧಿ ಐಶ್ವರ್ಯ ಸಿಂಧೋಗಿ (aishwarya shindogi)
ಶಿಶಿರ್ ಜೊತೆ ನಿರ್ಮಾಪಕರನ್ನು ಭೇಟಿಯಾಗಿ, ಹಣ ನೀಡುವಂತೆ, ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಮನವಿ ಮಾಡಲು ಐಶ್ವರ್ಯ ಸಿದ್ಧರಾಗಿದ್ರು. ಸ್ನೇಹಿತ ಹಾಗೂ ಒಳ್ಳೆ ಕಲಾವಿದನಿಗೆ ಇಂಥ ಸಮಸ್ಯೆ ಆಗೋದು ಇಷ್ಟವಿರಲಿಲ್ಲ. ನಾನು ನಿಮ್ಮ ಜೊತೆ ಇರ್ತೇನೆ ಎಂದಿದ್ರು ಐಶ್ವರ್ಯ. ಶಿಶಿರ್ ಕೂಡ ಐಶ್ವರ್ಯ ಈ ಕೆಲ್ಸಕ್ಕೆ ಋಣಿಯಾಗಿದ್ದಾರೆ. ಇಂಥ ಸ್ನೇಹಿತರಿಂದಲೇ ನನ್ನ ಬಲ ಹೆಚ್ಚಾಯ್ತು ಎನ್ನುವ ಶಿಶಿರ್, ಎಲ್ಲವನ್ನೂ ಎದುರಿಸೋಕೆ ಸಿದ್ಧವಾದ್ರು. ಈ ಮಧ್ಯೆ ಅವರಿಗೆ ಕಲರ್ಸ್ ಕನ್ನಡ ಮತ್ತೊಂದು ಛಾನ್ಸ್ ನೀಡ್ತು.
ತೆಲುಗು ಇಂಡಸ್ಟ್ರಿಯಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾಗಿದ್ದು, ಅಲ್ಲಿನ ಕಲಾವಿದರಿಗೆ ಅವಕಾಶ ಕಡಿಮೆ ಆಗ್ತಿದೆ. ಅನೇಕರು ಇದನ್ನು ಪ್ರಶ್ನಿಸಿದ್ದಾರೆ. ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನ್ನಡಿಗರ ಮೇಲಿನ ಅಸಮಾಧಾನವನ್ನು ಅವ್ರು ಈ ರೀತಿ ತೀರಿಸಿಕೊಳ್ತಿದ್ದಾರೆ ಎನ್ನುವ ಅನುಮಾನ ಕೂಡ ಇದೆ. ಇದಕ್ಕೆ ಉತ್ತರ ನೀಡಿದ ಐಶ್ವರ್ಯ, ಸಾಧ್ಯತೆ ಇದೆ ಎಂದಿದ್ದಾರೆ. ಕೆಲ್ಸ ಮಾಡುವಾಗ ಏನೂ ತೊಂದ್ರೆ ಮಾಡದ ಅವ್ರು ಆ ನಂತ್ರ ಹಿಂಸೆ ನೀಡಿದ್ರು ಅಂತ ಶಿಶಿರ್ ತಮ್ಮ ದುಃಖ ತೋಡಿಕೊಂಡಿದ್ದಾರೆ.
