Milana Serial Actress Vinutha: ‘ಮಿಲನ’ ಧಾರಾವಾಹಿ ನಟಿ ವಿನುತಾ ಅವರು ಹತ್ತು ವರ್ಷದ ನಂತರ ಕ್ಯಾಮರಾ ಮುಂದೆ ಬಂದು ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ಮಿಲನ ಧಾರಾವಾಹಿ ಬಿಡಲು ಕಾರಣವನ್ನು ಕೂಡ ನೀಡಿದ್ದಾರೆ. 

2012ರಲ್ಲಿ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ‘ಮಿಲನ’ ಧಾರಾವಾಹಿ ಪ್ರಸಾರ ಆಗುತ್ತಿತ್ತು. ಈ ಧಾರಾವಾಹಿಯಲ್ಲಿ ಎರಡು ವರ್ಷಗಳ ಕಾಲ ಪ್ರಾರ್ಥನಾ ಪಾತ್ರಕ್ಕೆ ಬಣ್ಣ ಹಚ್ಚಿದ್ದ ನಟಿ ವಿನುತಾ ಆನಂತರ ಯಾವುದೇ ಸೀರಿಯಲ್, ಸಿನಿಮಾದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಹತ್ತು ವರ್ಷಗಳ ಬಳಿಕ ಅವರು ಕ್ಯಾಮರಾ ಮುಂದೆ ಬಂದು ಇಷ್ಟು ವರ್ಷಗಳ ಜರ್ನಿ ಬಗ್ಗೆ ಮಾತನಾಡಿದ್ದಾರೆ. Asianet Suvarna News ಜೊತೆ ಅವರು ಮಾತನಾಡಿದ್ದಾರೆ.

ಹಾಯ್‌, ಹೇಗಿದ್ದೀರಿ?

ಚೆನ್ನಾಗಿದ್ದೀನಿ, ಹತ್ತು ವರ್ಷದ ಬಳಿಕ ಕ್ಯಾಮರಾ ಮುಂದೆ ಬಂದಿರೋದು ಖುಷಿ ಕೊಟ್ಟಿದೆ.

ಮಿಲನ ಧಾರಾವಾಹಿಗೆ ಆಯ್ಕೆಯಾಗಿದ್ದು ಹೇಗೆ?

ನನ್ನ ತಾಯಿ ಧಾರಾವಾಹಿ ನಟಿ, ಅವರ ಜೊತೆ ಆಡಿಷನ್‌ಗೆ ಹೋಗಿದ್ದಾಗ ಅಲ್ಲಿ ನೋಡಿದವರು ನನಗೆ ನಟಿಸು ಎಂದರು. ಐಶ್ವರ್ಯಾ ಪಾತ್ರಕ್ಕೆ ಆಡಿಷನ್‌ ಕೊಟ್ಟೆ, ಪ್ರಾರ್ಥನಾ ಪಾತ್ರಕ್ಕೆ ಬೇರೆಯವರು ಆಯ್ಕೆಯಾಗಿದ್ದರು. ನನ್ನ ನೋಡಿ ನಿರ್ಧಾರ ಬದಲಾಯಿಸಿ, ನನ್ನನ್ನೇ ಪ್ರಾರ್ಥನಾ ಆಗಿ ಆಯ್ಕೆ ಮಾಡಿದರು. ಇದು ನನ್ನ ಜೀವನದ ಪವಾಡಗಳಲ್ಲೊಂದು.

ಆಗಿನ ಮಿಲನ ಧಾರಾವಾಹಿ ದಿನಗಳು ಹೇಗಿದ್ದವು?

ಸೀರಿಯಲ್‌ ಕಥೆ, ತಾರಾಗಣ ಎಲ್ಲವೂ ಚೆನ್ನಾಗಿತ್ತು. ಮಧುಸೂದನ್‌ ಸರ್‌ ಚೆನ್ನಾಗಿ ನಟನೆ ಹೇಳಿಕೊಡುತ್ತಿದ್ದರು. ನಿಜಕ್ಕೂ ಮಿಲನ ಧಾರಾವಾಹಿಯನ್ನು ಮಿಸ್‌ ಮಾಡಿಕೊಳ್ತೀನಿ, ಅಂದು ಫೇಸ್‌ಬುಕ್‌ ಮಾತ್ರ ಚಾಲ್ತಿಯಲ್ಲಿತ್ತು, ಈಗಿನ ರೀತಿ ಸೋಶಿಯಲ್‌ ಮೀಡಿಯಾ ಸ್ಟ್ರಾಂಗ್‌ ಇದ್ದಿದ್ದರೆ ಅದರ ರೀಚ್‌ ಜಾಸ್ತಿ ಇರುತ್ತಿತ್ತು.

ಮಿಲನ ಧಾರಾವಾಹಿ ಯಾಕೆ ಬಿಟ್ರಿ?

ಮಿಲನ ಧಾರಾವಾಹಿಯಲ್ಲಿ ನಟಿಸುವಾಗ ನನಗೆ ವೈಯಕ್ತಿಕ ಜೀವನ, ವೃತ್ತಿಜೀವನ ಬ್ಯಾಲೆನ್ಸ್‌ ಮಾಡಲು ಆಗಿರಲಿಲ್ಲ. ಹೀಗಾಗಿ ನಾನು ತುಂಬ ಯೋಚನೆ ಮಾಡಿ ಸೀರಿಯಲ್‌ ಬಿಟ್ಟೆ

ನಿಮ್ಮ ಪಾತ್ರಕ್ಕೆ ಬೇರೆಯವರು ಬಂದರು..

ಹೌದು, ನಾನೇ ನಿರ್ಧಾರ ತಗೊಂಡು ಮಿಲನ ಧಾರಾವಾಹಿಯನ್ನು ಬಿಟ್ಟೆ. ನನ್ನ ಪಾತ್ರದಲ್ಲಿ ಬೇರೆಯವರನ್ನು ನೋಡಿದಾಗ ಬೇಸರ ಆಗತ್ತೆ, ನನಗೆ ಬೇಸರ ಆಯ್ತು. ವೀಕ್ಷಕರು ಕೂಡ ನೀವು ಬಿಟ್ಮೇಲೆ ಸೀರಿಯಲ್‌ ನೋಡಲಿಲ್ಲ, ನೀವು ನಮಗೆ ಇಷ್ಟ ಆಗಿದ್ರಿ ಅಂತ ಹೇಳಿದ್ರು. ಅದು ಬೇಸರ ಆಯ್ತು.

ಸೀರಿಯಲ್‌ ಆದ್ಮೇಲೆ ಏನು ಮಾಡಿದ್ರಿ?

ನಾನು ಸೀರಿಯಲ್‌ ಬಿಟ್ಮೇಲೆ ಮೇಕಪ್‌ ಆರ್ಟಿಸ್ಟ್‌ ಕೋರ್ಸ್ ಮಾಡಿದೆ. ನಾನೇ ಹೀರೋಯಿನ್‌ ಆಗಿ ಮೇಕಪ್‌ ಮಾಡಿಸಿಕೊಳ್ತಿದ್ದೆ, ಆಮೇಲೆ ಬೇರೆಯವರಿಗೆ ನಾನು ಮೇಕಪ್‌ ಮಾಡೋಕೆ ಆರಂಭಿಸಿದೆ, ಚೌಟ್ರಿಗೆಲ್ಲ ಹೋಗಿ ಮೇಕಪ್‌ ಮಾಡೋದು ಸುಲಭ ಇರಲಿಲ್ಲ, ನನ್ನ ಸ್ನೇಹಿತರು ನೆಗೆಟಿವ್‌ ಮಾತನಾಡಿದ್ದುಂಟು. ಇದಾದ ಬಳಿಕ ನನ್ನ ತಾಯಿ ಮಾತ್ರ ಧೈರ್ಯ ತುಂಬಿದರು. ನಾನು ಇಂದು ಏನಾಗಿದ್ದೆನೋ ಅದಕ್ಕೆ ತಾಯಿಯೇ ಕಾರಣ.

ತಾಯಿಯನ್ನು ಕಳೆದುಕೊಂಡ್ರಿ..

ಸ್ಟುಡಿಯೋ ಆರಂಭಿಸೋದು ನನ್ನ ತಾಯಿ ಕನಸು. ನಾನು ಕಷ್ಟಪಟ್ಟು ಸ್ಟುಡಿಯೋ ಆರಂಭಿಸೋಕೆ ಎಲ್ಲವನ್ನು ರೆಡಿ ಮಾಡಿಕೊಂಡಿದ್ದೆ. ಇನ್ನೇನು ಒಪನ್‌ ಮಾಡೋಕೆ ಹತ್ತು ದಿನ ಇತ್ತು ಎನ್ನುವಾಗ ಅಮ್ಮ ಹೃದಯಾಘಾತದಿಂದ ತೀರಿಕೊಂಡರು, ಇದಾಗಿ ಆರು ತಿಂಗಳಕಾಲ ನಾನು ಡಿಪ್ರೆಶನ್‌ನಲ್ಲಿದ್ದೆ. ಅದಾದ ಬಳಿಕ ಹೀಗಿದ್ರೆ ಅಮ್ಮನಿಗೂ ಇಷ್ಟ ಆಗೋದಿಲ್ಲ ಅಂತ ಅನಿಸಿ ಸಿಂಪಲ್‌ ಆಗಿ ಪೂಜೆ ಮಾಡಿ ಸ್ಟುಡಿಯೋ ಆರಂಭಿಸಿದೆ. ತಾಯಿಯನ್ನು ತುಂಬ ಮಿಸ್‌ ಮಾಡಿಕೊಳ್ತೀನಿ.

ದುಡ್ಡು ಯಾವಾಗ ಮುಖ್ಯ ಅಂತ ಅನಿಸ್ತು?

ನಾನು ಸ್ಟುಡಿಯೋ ಆರಂಭಿಸುವಾಗ ಎರಡು ಲಕ್ಷ ರೂಪಾಯಿ ಕಡಿಮೆ ಬಿತ್ತು. ಆಗ ದುಡ್ಡಿನ ಮಹತ್ವ ಗೊತ್ತಾಯ್ತು. ನಿಜಕ್ಕೂ ಮನುಷ್ಯನಿಗೆ ಸಾಲ ಇರಬೇಕು, ಅದೇ ಮನುಷ್ಯನನ್ನು ಎಬ್ಬಿಸಿ, ಓಡಿಸೋದು.

ಮೇಕಪ್‌ ಆರ್ಟಿಸ್ಟ್‌ ಲೈಫ್‌ ಬಗ್ಗೆ ಹೇಳಿ

ಮೇಕಪ್‌ ಆರ್ಟಿಸ್ಟ್‌ ಆದರೆ ದುಡ್ಡು ಸಿಗತ್ತೆ ಅಂತ ಅಂದುಕೊಳ್ಳೋದು ತಪ್ಪು. ನಮಗೆ ಯಾವಾಗ ಮೇಕಪ್‌ ಮಾಡೋಕೆ ಬುಕ್ಕಿಂಗ್‌ ಆಗತ್ತೆ ಅಂತ ಹೇಳೋಕೆ ಆಗೋದಿಲ್ಲ. ಹೀಗಾಗಿ ಮೇಕಪ್‌ ಆರ್ಟಿಸ್ಟ್‌ ಆಗಿರೋರು ಒಂದು ವರ್ಷ ತಾಳ್ಮೆಯಿಂದ ಕೆಲಸ ಮಾಡುತ್ತಿರಬೇಕು. ನಾವು ಚೌಟ್ರಿಗೆ ಹೋದಾಗ ಕೆಲವರು ನಮ್ಮ ಊಟ, ತಿಂಡಿ ಆಯ್ತಾ ಅಂತ ಕೂಡ ಕೇಳೋದಿಲ್ಲ, ಇದು ಬೇಸರ ಆಗುತ್ತದೆ. ಆದರೆ ಒಳ್ಳೆಯ ಮದುಮಕ್ಕಳು ಕೂಡ ಇರುತ್ತಾರೆ ಎನ್ನೋದು ಕೂಡ ಖುಷಿ.

ಮತ್ತೆ ತೆರೆ ಮೇಲೆ ಕಾಣಿಸೋದು ಯಾವಾಗ?

ನಾನು ಇನ್ನೊಂದು ಮೇಕಪ್‌ ಸ್ಟುಡಿಯೋ ಬ್ರ್ಯಾಂಚ್‌ ಆರಂಭಿಸೋ ಪ್ಲ್ಯಾನ್‌ ಅಲ್ಲಿದ್ದೇನೆ.

YouTube video player