Bigg Boss Lesbian Couple: ಬಿಗ್ ಬಾಸ್ ಮನೆಯಲ್ಲಿ ಸಲಿಂಗಕಾಮಿ ಜೋಡಿಯೊಂದು ಭಾಗವಹಿಸಿದೆ. ಇವರಿಬ್ಬರನ್ನು ಇನ್ನೋರ್ವ ಸ್ಪರ್ಧಿ ಟೀಕೆ ಮಾಡಿದ್ದು ಮೋಹನ್‌ಲಾಲ್‌ಗೆ ಸಿಟ್ಟು ತರಿಸಿದೆ. ಅವರು ದೊಡ್ಮನೆಯಲ್ಲಿ ಕೂಗಾಡಿದ್ದಾರೆ. ಮೋಹನ್‌ಲಾಲ್ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಯಾವುದೇ ಭಾಷೆಯ ಬಿಗ್ ಬಾಸ್ ತೆಗೆದುಕೊಳ್ಳಿ, ಬಿಗ್ ಬಾಸ್ ಅಂದಕೂಡಲೇ ಕಾಂಟ್ರವರ್ಸಿಗಳು ಕೂಡ ನೆನಪಾಗುತ್ತವೆ. ಈ ಬಾರಿ ಬಿಗ್ ಬಾಸ್ ಮಲಯಾಳಂ 7 ಶೋನಲ್ಲಿ ದೊಡ್ಡ ವಿವಾದಕ್ಕೆ ಮೋಹನ್ ಲಾಲ್ ಅವರು ವಿರಾಮ ಇಟ್ಟಿದ್ದಾರೆ. ಅಷ್ಟೇ ಅಲ್ಲದೆ ಅವರ ಮಾತುಗಳು lgbtq ಸಮುದಾಯಕ್ಕೆ ಸಹಾಯ ಆಗುವಂತೆ ಮಾಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಮೋಹನ್‌ಲಾಲ್ ಗರಂ ಆಗಿದ್ದು ಯಾಕೆ?
ಹೌದು, ಬಿಗ್ ಬಾಸ್ ಶೋನಲ್ಲಿ ನಿರೂಪಕ ಮೋಹನ್‌ಲಾಲ್ ಅವರು, ಸಲಿಂಗಕಾಮ ವಿರೋಧಿ ಧೋರಣೆಯ ವಿರುದ್ಧ ದಿಟ್ಟ ಹೇಳಿಕೆ ನೀಡಿದ್ದಾರೆ. ಸ್ಪರ್ಧಿ ಲಕ್ಷ್ಮಿ ಎನ್ನುವವರು ಸಹ ಸ್ಪರ್ಧಿಗಳಾದ ಅಧಿಲಾ, ನೂರಾ ಅವರನ್ನು ಟೀಕೆ ಮಾಡಿದ್ದಕ್ಕೆ ಮೋಹನ್‌ಲಾಲ್ ಅವರು ಗರಂ ಆಗಿದ್ದಾರೆ. ಲಕ್ಷ್ಮೀ ಅವರು ಟೀಕೆ ಮಾಡಿದ್ದಕ್ಕೆ ಮೋಹನ್‌ಲಾಲ್ ಸಿಕ್ಕಾಪಟ್ಟೆ ಕೂಗಾಡಿದ್ದಾರೆ.
ಬಿಗ್ ಬಾಸ್ ಮಲಯಾಳಂ 7 ಶೋನಲ್ಲಿ ಅದಿಲಾ, ನೂರಾ ಭಾಗವಹಿಸಿದ್ದಾರೆ. ನಿಮ್ಮ ಸಂಬಂಧ ಏನು? ಬೇರೆಯವರ ಮನೆಗಳಿಗೆ ನಿಮಗೆ ಎಂಟ್ರಿ ಕೊಡೋದಿಲ್ಲ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಅವರ ಹಕ್ಕನ್ನು ಪ್ರಶ್ನೆ ಮಾಡಿದ್ದರು. ಆಗ ಮೋಹನ್‌ಲಾಲ್ “ಮನೆಗೆ ಸ್ವಾಗತ ಮಾಡಲು ಆಗದ ಜನರು ಯಾರು?” ಎಂದು ಪ್ರಶ್ನಿಸಿದರು.
“ನಾನು ಅವರನ್ನು ನನ್ನ ಮನೆಗೆ ವೆಲ್‌ಕಮ್ ಮಾಡ್ತೀನಿ. ಇಲ್ಲಿ ಇದ್ದಾಗ ನೀವು ಏನು ಮಾತಾಡ್ತೀರಿ ಎನ್ನೋದು ನಿಮಗೆ ಗೊತ್ತಿರಬೇಕು. ಯಾರು ಯಾರನ್ನು ಮನೆಗೆ ವೆಲ್‌ಕಮ್ ಮಾಡೋದಿಲ್ಲ? ಅವರು ಈ ಶೋನಲ್ಲಿ ಇರೋದು ಇಷ್ಟ ಇಲ್ಲ ಅಂದ್ರೆ ಶೋನಿಂದ ಹೊರಗಡೆ ಹೋಗಿ” ಎಂದು ಹೇಳಿದರು.
ಸಲಿಂಗಕಾಮ ವಿರೋಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೆದ ಕೆಲವು ವಾರಗಳಿಂದ ಮೋಹನ್‌ಲಾಲ್ ಬಗ್ಗೆ ನನ್ನ ಗೌರವ ಹೆಚ್ಚಾಗಿದೆ ಎಂದು ಓರ್ವರು ಹೇಳಿದ್ದಾರೆ. ಇನ್ನೂ ಒಬ್ಬರು, “ನಾನು ಈ ಶೋನ ಅಭಿಮಾನಿಯಲ್ಲ, ದ್ವೇಷಿಯೂ ಅಲ್ಲ. ಆದರೆ ಇದು ಚೆನ್ನಾಗಿದೆ” ಎಂದು ಹೇಳಿದ್ದಾರೆ. ಮೋಹನ್‌ಲಾಲ್‌ರಂತಹ ಸೂಪರ್‌ಸ್ಟಾರ್ ಈ ರೀತಿ ನಿಲುವು ತೆಗೆದುಕೊಳ್ಳುವುದು ಮುಖ್ಯ ಎಂದು ಇನ್ನೋರ್ವರು ಹೇಳಿದ್ದಾರೆ.
ಅಧಿಲಾ, ನೂರಾ ಲವ್ ಶುರುವಾಗಿದ್ದು ಹೇಗೆ?
ಸೌದಿ ಅರೇಬಿಯಾದಲ್ಲಿ ಅಧಿಲಾ ಮತ್ತು ನೂರಾ ಸೆಕೆಂಡ್ ಪಿಯುಸಿ ಓದುತ್ತಿದ್ದರು. ಆ ವೇಳೆ ಅವರ ನಡುವೆ ಸ್ನೇಹ ಶುರುವಾಗಿ ಪ್ರೀತಿಯಾಗಿ ತಿರುಗಿದೆ. ಇವರಿಬ್ಬರು ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಇವರಿಬ್ಬರ ಲವ್ ಎರಡೂ ಕುಟುಂಬದವರಿಗೆ ಗೊತ್ತಾಗಿದೆ. ಆಗ ಮನೆಯವರು ಇದು ನಾರ್ಮಲ್ ಅಲ್ಲ ಎಂದು ಹೇಳಿದ್ದಾರೆ. ಒಂದೇ ಕಾಲೇಜಿನಲ್ಲಿ ಓದುವುದು ಸರಿಯಲ್ಲ ಅಂತ ಸಪರೇಟ್ ಮಾಡಿದ್ದಾರೆ. ಅಧಿಕಾ ಮೇಲೆ ದೈಹಿಕ ದೌರ್ಜನ್ಯ ಕೂಡ ಮಾಡಲಾಗಿತ್ತು. ಅಧಿಲಾ ನಮ್ಮ ಮಗಳನ್ನು ಕಿಡ್ನ್ಯಾಪ್ ಮಾಡಿದ್ದಾಳೆ ಅಂತ ನೂರಾ ಮನೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಅದಾದ ನಂತರ ಅಧಿಲಾ ಕೋರ್ಟ್ ಮೆಟ್ಟಿಲೇರಿದ್ದಾರೆ. ನಮ್ಮನ್ನು ಸಪರೇಟ್ ಮಾಡಿದ್ದಲ್ಲದೆ ಪರಿವರ್ತನೆ ಚಿಕಿತ್ಸೆ ಮಾಡಿಸುತ್ತಿದ್ದಾರೆ ಎಂದು ಅವರು ಆರೋಪ ಮಾಡಿದ್ದಾರೆ. ಆಗ ಕೇರಳ ಹೈಕೋರ್ಟ್ “ಇದು ವೈಯಕ್ತಿಕ ಸ್ವಾಂತತ್ರ್ಯದ ವಿಷಯ” ಎಂದು ಅವರ ಪರವಾಗಿ ತೀರ್ಪು ಕೊಟ್ಟಿದೆ. ಹೀಗಾಗಿ ಇವರಿಬ್ಬರು ಒಟ್ಟಿಗೆ ವಾಸ ಮಾಡಬಹುದು ಎಂದು ಹೇಳಿದೆ.
ಈಗ ಈ ಜೋಡಿ ಒಟ್ಟಿಗೆ ವಾಸ ಮಾಡುತ್ತಿದ್ದು, ಕಂಟೆಂಟ್ ಕ್ರಿಯೇಟರ್ಸ್ ಆಗಿ ಗುರುತಿಸಿಕೊಂಡಿದೆ. LGBTQ ಸಮುದಾಯಕ್ಕೆ ಅವರ ಹಕ್ಕನ್ನು ಎತ್ತಿ ಹಿಡಿಯಲು ಈ ತೀರ್ಪು ತುಂಬ ಮಹತ್ವದ್ದಾಗಿದೆ ಎನ್ನಬಹುದು.
