ನಟ ಕಿಚ್ಚ ಸುದೀಪ್ ಅವರನ್ನು ಗುರಿಯಾಗಿಸಿ ರಾಜ್ಯ ಸರ್ಕಾರವು ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಜಡಿದು 'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದೆ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಆರೋಪಿಸಿದ್ದಾರೆ. ಜನಾಂಗೀಯ ಮತ್ತು ರಾಜಕೀಯ ಪ್ರೇರಿತ ಟಾರ್ಗೆಟ್ ಎಂದಿದ್ದಾರೆ.

ಬೆಂಗಳೂರು (ಅ.08): ನಟ ಕಿಚ್ಚ ಸುದೀಪ್ ಅವರನ್ನು ಗುರಿಯಾಗಿಸಿಕೊಂಡು ಮಾಡಿದ ಜನಾಂಗೀಯ ಟಾರ್ಗೆಟ್ ಮಾಡಿರುವ ರಾಜ್ಯ ಸರ್ಕಾರ, ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಜಡಿದು 'ಬಿಗ್ ಬಾಸ್ ಕನ್ನಡ ಸೀಸನ್ 12' ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನಾರಾಯಣ ಸ್ವಾಮಿ ಅವರು, 'ಇದೇನು ಕೈಗಾರಿಕೆಯಾ? ಇಲ್ಲೇನು ಅನಾರೋಗ್ಯ ತರುವಂಥ ಹೊಗೆ ಬರ್ತಿದೆಯಾ? ಮಾಲಿನ್ಯಕಾರಕ ದೊಡ್ಡ ದೊಡ್ಡ ಕೈಗಾರಿಕೆಗಳನ್ನು ಮುಚ್ಚೋಕೆ ಇವರಿಗೆ ಆಗಿಲ್ಲ. ಅಂತಹ ಫ್ಯಾಕ್ಟರಿಗಳನ್ನು ಬಿಟ್ಟು ಇಲ್ಲಿಗೆ ಬಂದು ಬೀಗ ಹಾಕಿಸಿದ್ದಾರೆ' ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ.

ಇದು ನೇರವಾಗಿ ಸುದೀಪ್ ಟಾರ್ಗೆಟ್:

ಕೇವಲ ಪರಿಸರ ನಿಯಮದ ನೆಪವಿದು ಎಂದು ಆರೋಪಿಸಿದ ಅವರು, ಈ ಕ್ರಮದ ಹಿಂದಿನ ಉದ್ದೇಶ ಬೇರೆಯೇ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 'ಇದು ಸರ್ಕಾರ ನೇರವಾಗಿ ನಟ ಸುದೀಪ್ ಅವರನ್ನು ಟಾರ್ಗೆಟ್ ಮಾಡಿರೋದು. ಇದು ಜನಾಂಗೀಯ ಟಾರ್ಗೆಟ್ ಕೂಡ ಹೌದು' ಎಂದು ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಅವಧಿಯಲ್ಲಿ ಸ್ಯಾಂಡಲ್‌ವುಡ್‌ನ ಇತರೆ ಗಣ್ಯರನ್ನು ಟಾರ್ಗೆಟ್ ಮಾಡಿದ ಪ್ರಸಂಗಗಳನ್ನು ನೆನಪಿಸಿದ ನಾರಾಯಣ ಸ್ವಾಮಿ, 'ರಾಜಣ್ಣ (ಡಾ. ರಾಜ್‌ಕುಮಾರ್ ಕುಟುಂಬ), ನಾಗೇಂದ್ರ ಬಳಿಕ ಈಗ ಸುದೀಪ್ ಟಾರ್ಗೆಟ್. ಇದು ಸ್ಪಷ್ಟವಾಗಿ ಜನಾಂಗೀಯ ಟಾರ್ಗೆಟ್' ಎಂದು ಪುನರುಚ್ಚರಿಸಿದರು.

ಜನ ಸರ್ಕಾರದ ನಟ್ಟುಬೋಲ್ಟ್ ಟೈಟ್ ಮಾಡ್ತಾರೆ:

ಇಂತಹ ರಾಜಕೀಯ ಪ್ರೇರಿತ ಕ್ರಮಗಳಿಗೆ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಛಲವಾದಿ ನಾರಾಯಣ ಸ್ವಾಮಿ, 'ಸರ್ಕಾರಕ್ಕೆ ನಟ್ಟುಬೋಲ್ಟ್ ಟೈಟ್ ಮಾಡುವ ಕಾಲ ಹತ್ತಿರ ಬಂದಿದೆ. ಇಂತಹ ಕೆಲಸಗಳನ್ನು ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ಜನ ಸರ್ಕಾರದ ನಟ್ಟುಬೋಲ್ಟ್ ಟೈಟ್ ಮಾಡುತ್ತಾರೆ' ಎಂದು ಗುಡುಗಿದ್ದಾರೆ. ಒಟ್ಟಾರೆಯಾಗಿ, ಬಿಗ್ ಬಾಸ್ ಕಾರ್ಯಕ್ರಮದ ಸ್ಥಗಿತದ ಹಿಂದಿರುವ ಕಾರಣಗಳು ಪರಿಸರ ನಿಯಮಗಳ ಉಲ್ಲಂಘನೆಗಿಂತ ಹೆಚ್ಚಾಗಿ ರಾಜಕೀಯ ಪ್ರೇರಿತವಾಗಿದ್ದು, ನಟ ಸುದೀಪ್ ಅವರನ್ನು ಗುರಿಯಾಗಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬುದು ವಿಪಕ್ಷ ನಾಯಕರ ಬಲವಾದ ಆರೋಪವಾಗಿದೆ.