ಬಿಗ್‌ಬಾಸ್‌ 19ರ ಸ್ಪರ್ಧಿ ತಾನ್ಯಾ ಮಿತ್ತಲ್‌ ತಮ್ಮ ಐಷಾರಾಮಿ ಜೀವನಶೈಲಿಯ ಬಗ್ಗೆ ಬಂಡಲ್‌ಗಳನ್ನು ಬಿಟ್ಟಿದ್ದಾರೆ. 5-7 ಸ್ಟಾರ್‌ ಹೋಟೆಲ್‌ಗಳಿಗಿಂತ ತಮ್ಮ ಮನೆ ಚೆನ್ನಾಗಿದೆ, 2500 ಚದರ ಅಡಿಯ ವಾರ್ಡ್‌ರೋಬ್‌ ಇದೆ ಎಂದು ಹೇಳಿಕೊಂಡಿದ್ದಾರೆ.

ಬಿಗ್‌ಬಾಸ್‌ 19ನಲ್ಲಿ ತಾನ್ಯಾ ಮಿತ್ತಲ್‌ ಭಾಗಿಯಾದ ದಿನದಿಂದಲೂ ಆಕೆಯ ಲೈಫ್‌ಸ್ಟೈಲ್‌, ನೆಟ್ಟಿಗರ ನಡುವೆ ಚರ್ಚೆಯ ವಿಷಯವಾಗಿದೆ. ಶೋನಲ್ಲಿ ಆಕೆ ತನ್ನ ಲೈಫ್‌ಸ್ಟೈಲ್‌ ವಿಚಾರವಾಗಿ ಹೇಳುವ ಬಂಡಲ್‌ಗಳನ್ನು ಕೇಳಿ ಸ್ವತಃ ನೆಟ್ಟಿಗರೇ ಅಚ್ಚರಿ ಪಟ್ಟಿದ್ದಾರೆ. ನನ್ನೂರಿನಲ್ಲಿ ನನ್ನನ್ನು ಎಲ್ಲರೂ ಬಾಸ್‌ ಅಂತಲೇ ಕರೀತಾರೆ ಎಂದು ಹೇಳಿದ್ದ ಆಕೆ, ನಂತರ ನಾನು ಎಲ್ಲೇ ಹೋದರು ನನ್ನೊಂದಿಗೆ 5-10 ಬಾಡಿಗಾರ್ಡ್‌ಗಳು ಇರುತ್ತಾರೆ ಎಂದಿದ್ದರು. ತಾನ್ಯ ಹೇಳಿರುವ ಮಾತುಗಳನ್ನು ಕೇಳಿ ವೀಕ್ಷಕರು ಅಚ್ಚರಿ ಪಟ್ಟಿದ್ದಲ್ಲದೆ, ಇಂಥ ಬಡಾಯಿವಾಲಾಗಳೇ ಬಿಗ್‌ಬಾಸ್‌ಗೆ ಬರೋದು ಎಂದಿದ್ದರು. ಇದರ ನಡುವೆ ಇತ್ತೀಚೆಗೆ ಆಕೆಯ ಮತ್ತೊಂದು ಸ್ಟೇಟ್‌ಮೆಂಟ್‌ ವೈರಲ್‌ ಆಗಿದೆ. ಬಿಗ್‌ಬಾಸ್‌ 19ನ ಲೈವ್‌ ಸ್ಟ್ರೀಮ್‌ನಲ್ಲಿ ಆಕೆ ಈ ಮಾತು ಹೇಳಿದ್ದಾರೆ. ತನ್ನ ಮನೆಯನ್ನು 5-7 ಸ್ಟಾರ್‌ ಹೋಟೆಲ್‌ಗಳಿಗೆ ಹೋಲಿಸಿಕೊಂಡಿರುವ ಆಕೆ ತನ್ನ ಅದ್ದೂರಿ ಲೈಫ್‌ಸ್ಟೈಲ್‌ ಬಗ್ಗೆಯೂ ಮಾತನಾಡಿದ್ದಾರೆ.

ಫುಲ್‌ ಪುಂಗಿ ಊದಿದ ತಾನ್ಯಾ ಮಿತ್ತಲ್‌

ಈ ವಿಡಿಯೋದಲ್ಲಿ ಮತ್ತೊಬ್ಬ ಸ್ಪರ್ಧಿ ನೀಲಮ್‌ ಗಿರಿ, ತಾನ್ಯಾಗೆ ನಿಮ್ಮ ಮನೆ ಹೇಗಿದೆ ಎಂದು ಕೇಳಿದ್ದಾರೆ. ಸಿಕ್ಕಿದ್ದೇ ಚಾನ್ಸ್‌ ಎಂದುಕೊಂಡು ಬಂಡಲ್‌ ಬಿಡಲು ಆರಂಭಿಸಿದ ತಾನ್ಯಾ ನನ್ನ ಮನೆ ಯಾವುದೇ 5-7 ಸ್ಟಾರ್‌ ಹೋಟೆಲ್‌ಗಳಿಗಿಂತ ಕಮ್ಮಿ ಇಲ್ಲ. ಹಾಗೇನಾದರೂ ನನ್ನ ಮನೆ ನೋಡಿದರೆ, 5-7 ಸ್ಟಾರ್‌ ಹೋಟೆಲ್‌ ಕೂಡ ಲೆಕ್ಕಕ್ಕೆ ಇಲ್ಲ ಅನಿಸುತ್ತದೆ. ಮನೆಯಲ್ಲಿ ಮೇಂಟೇನ್‌ ಮಾಡಲು ದೊಡ್ಡ ಪ್ರಮಾಣದ ಸಿಬ್ಬಂದಿಗಳು ಇದ್ದಾರೆ ಎಂದು ಹೇಳಿದ್ದಾರೆ.

'ನನ್ನ ಮನೆ ಬಹಳ ಸುಂದರವಾಗಿದೆ. ಸ್ವರ್ಗ ಅಂತಾರಲ್ಲ, ಅದೇನಾದರೂ ಭೂಮಿಯ ಮೇಲಿದ್ರೆ ಹೇಗೆ ಇರುತ್ತೋ ಹಾಗೆ ಇದೆ ನನ್ನ ಮನೆ. ಕನಸಿನ ರೀತಿ ಇದೆ. ಹಾಗೇನಾದರೂ ನೀನು 5-7 ಸ್ಟಾರ್‌ಗೆ ಹೋಟೆಲ್‌ಗೆ ಹೋದರೂ, ಇದು ನನ್ನ ಮನೆಯ ಮುಂದೆ ಬಹಳ ಚೀಪ್‌ ಅನಿಸುತ್ತದೆ. ಮನೆಯ ಒಳಹೊಕ್ಕರೆ, ಅಯ್ಯೋ ದೇವರೆ ನಾನೆಲ್ಲಿ ಬಂದುಬಿಟ್ಟೆ ಅಂತಾ ಅನಿಸುತ್ತೆ' ಎಂದಿದ್ದಾರೆ.

View post on Instagram

ಬಟ್ಟೆ ಇಡೋಕೆ ಇದೆ ಒಂದು ಫ್ಲೋರ್‌

ಮತ್ತೆ ತನ್ನ ಬಂಡಲ್‌ ಮುಂದುವರಿಸಿದ ತಾನ್ಯಾ, 'ಪೂರ್ತಿ ಒಂದು ಫ್ಲೋರ್‌ನಲ್ಲಿ ನನ್ನ ಬಟ್ಟೆಗಳೇ ಇವೆ. ನನ್ನ ಬಟ್ಟೆಗಳನ್ನು ಇಡುವ ಸಲುವಾಗಿಯೇ 2500 ಚದರ ಅಡಿಯ ವಾರ್ಡ್‌ರೋಬ್‌ ನನ್ನ ಮನೆಯಲ್ಲಿದೆ' ಎಂದಿದ್ದಾರೆ. ಪ್ರತಿ ಫ್ಲೋರ್‌ನಲ್ಲಿ 5 ಸಿಬ್ಬಂದಿಗಳು ಇದ್ದಾರೆ. ಇಬ್ಬರು ಕಿಚನ್‌ ಸಿಬ್ಬಂದಿ ಇರ್ತಾರೆ. 7 ಮಂದಿ ಡ್ರೈವರ್‌ ಇದ್ದಾರೆ ಎಂದು ಕೊಚ್ಚಿಕೊಂಡಿದ್ದಾರೆ.

ತಾನ್ಯಾ ತನ್ನ ಐಷಾರಾಮಿ ಬಂಡಲ್‌ ಜೀವನಶೈಲಿಯ ಬಗ್ಗೆ ಮಾತನಾಡುತ್ತಿರುವುದು ಇದೇ ಮೊದಲಲ್ಲ. ಅವರು ಆಗಾಗ್ಗೆ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದರು, ಅದು ಎಲ್ಲಾ ನೆಟಿಜನ್‌ಗಳ ಶಾಕ್‌ಗೆ ಕಾರಣವಾಗಿದೆ.

ತಾನ್ಯಾ ಮಿತ್ತಲ್‌ ಆದಾಯ ಎಷ್ಟು?

ವರದಿಗಳ ಪ್ರಕಾರ, ತಾನ್ಯಾ ಅವರ ವೈಯಕ್ತಿಕ ಆದಾಯ ತಿಂಗಳಿಗೆ 6 ಲಕ್ಷ ರೂ.ಗಳಿಗಿಂತ ಹೆಚ್ಚು ಎಂದು ಹೇಳಲಾಗುತ್ತದೆ. ವರದಿಯ ಪ್ರಕಾರ, ಅವರ ಅಂದಾಜು ನಿವ್ವಳ ಮೌಲ್ಯ ಸುಮಾರು 2 ಕೋಟಿ ರೂ., ಇದು ಬಿಗ್ ಬಾಸ್ 19 ರಲ್ಲಿ ಸೇರ್ಪಡೆಗೊಂಡ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಅದೆಷ್ಟೇ ಶ್ರೀಮಂತರಾಗಿದ್ದರೂ, ಆಕೆ ಹೇಳುತ್ತಿರುವ ಲೈಫ್‌ಗೂ ಆಕೆಯ ಆಸ್ತಿಯ ಮೌಲ್ಯಕ್ಕೂ ತಾಳೆಯೇ ಆಗುತ್ತಿಲ್ಲ ಎಂದಿದ್ದಾರೆ. ಇನ್ನೂ ಕೆಲವರು, ಅಯ್ಯೋ ಬಿಡಮ್ಮ, ನಿನ್ನ ಮನೆಯ ಮುಂದೆ ಅಂಬಾನಿಯ ಅಂಟಾಲಿಯಾ ಕೂಡ 1 ಬಿಎಚ್‌ಕೆ ರೂಮು ಎಂದು ಕಾಲೆಳೆದಿದ್ದಾರೆ.