ಯಾವುದೇ ಸರ್ಕಾರಿ ಕಾರ್ಯಕ್ರಮವಿರಲಿ ಅಲ್ಲಿ ಕೇಳಿ ಬರುವ ಕಂಚಿನ ಕಂಠ ಆ್ಯಂಕರ್ ಶಂಕರ್ ಪ್ರಕಾಶ್ ಅವರದ್ದು. ಇದೀಗ ಅವರು, ಸುವರ್ಣ ಪಾಡ್ಕಾಸ್ಟ್ನಲ್ಲಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ಗೆ ಯಶಸ್ಸಿನ ಪಂಚಸೂತ್ರ ಹೇಳಿಕೊಟ್ಟಿದ್ದಾರೆ. ಇಲ್ಲಿದೆ ಅವರ ಸಂದರ್ಶನ...
ಯಾವುದೇ ಸರ್ಕಾರಿ ಕಾರ್ಯಕ್ರಮವಿರಲಿ ಅಲ್ಲಿ ಕೇಳಿ ಬರುವ ಗಡಸು, ಅಂದದ, ಸೊಗಸಾದ, ಅಷ್ಟೇ ಶುದ್ಧ ಕನ್ನಡದ, ಅಷ್ಟೇ ಸುಂದರ ಇಂಗ್ಲಿಷ್ನ ದನಿ ಎಂದರೆ ಅದು ಆ್ಯಂಕರ್ ಶಂಕರ್ ಪ್ರಕಾಶ್ ಅವರದ್ದು. ಹೆಚ್ಚಾಗಿ ಬಹುತೇಕ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೆಣ್ಣಿನ ದನಿ ಕಳೆದ ವರ್ಷ ನಿಧನರಾದ ಅಪರ್ಣಾ ವಸ್ತಾರೆ ಅವರದ್ದಾಗಿದ್ದರೆ, ಪುರುಷರ ಕಂಚಿನ ಕಂಠ ಶಂಕರ್ ಪ್ರಕಾಶ್ ಅವರದ್ದೇ. ದೂರದರ್ಶನ ಚಂದನ ವಾಹಿನಿಯಲ್ಲಿ ಒಂದು ಕಾಲದ ಸೂಪರ್ಹಿಟ್ ದನಿ ಇವರದ್ದಾಗಿತ್ತು. ಹಲವು ದಶಕಗಳವರೆಗೆ ಅದೇ ಕಂಠದಿಂದ ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿರುವ ಶಂಕರ್ ಪ್ರಕಾಶ್ ಅವರು ಇದೀಗ Suvarna Podcastನಲ್ಲಿ ತಮ್ಮ ಸುದೀರ್ಘ ಅನುಭವವನ್ನು ಹಂಚಿಕೊಂಡಿದ್ದಾರೆ.
ಇದಾಗಲೇ 5 ಸಾವಿರಕ್ಕೂ ಅಧಿಕ ಕಾರ್ಯಕ್ರಮಕ್ಕೆ ದನಿಯಾಗಿರುವ ಇವರು, ಸುವರ್ಣ ಪಾಡ್ಕಾಸ್ಟ್ನಲ್ಲಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ಗೆ ಐದು ಯಶಸ್ಸಿನ ಸೂತ್ರಗಳನ್ನು ಹೇಳಿಕೊಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆ್ಯಂಕರ್ಗಳಾಗಲೀ, ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ಸ್ ಆಗಲೀ ದಿಢೀರ್ ಎಂದು ಖ್ಯಾತಿ ಗಳಿಸಬೇಕು, ರಾತ್ರೋರಾತ್ರಿ ಫೇಮಸ್ ಆಗಬೇಕು ಎಂದು ಬಯಸುವವರೇ ಹೆಚ್ಚು. ಆದರೆ ಈ ರೀತಿಯ ದಿಢೀರ್ ಖ್ಯಾತಿ, ಅಷ್ಟೇ ದಿಢೀರ್ ಆಗಿ ಕುಸಿಯುತ್ತದೆ ಎನ್ನುವುದು ಕೂಡ ಅಷ್ಟೇ ದಿಟ. ಇದೇ ಕಾರಣಕ್ಕೆ, ಎಷ್ಟೋ ಆ್ಯಂಕರ್ಗಳು ಬಂದರೂ, ಆ ಕ್ಷಣದಲ್ಲಿ, ಒಂದಿಷ್ಟು ವರ್ಷಗಳಲ್ಲಿ ಖ್ಯಾತಿ ಗಳಿಸಿದ್ದರೂ ಇಂದಿಗೂ ನಿರೂಪಕಿ ಎಂದಾಕ್ಷಣ ಬಹುತೇಕ ಎಲ್ಲರ ಮಾತು ಒಂದೇ ಅದು ಅಪರ್ಣಾ ವಸ್ತಾರೆ ಎನ್ನುವುದು. ಅದೇ ರೀತಿ ಹಲವು ದಶಕಗಳಿಂದ ಇಂದಿಗೂ ಕಂಚಿನ ಕಂಠದಿಂದಲೇ ಫೇಮಸ್ ಆಗಿರುವವರು ಶಂಕರ್ ಪ್ರಕಾಶ್.
ಇದೇ ರೀತಿಯ ಖ್ಯಾತಿ ಹೇಗೆ ಗಳಿಸಬಹುದು ಎನ್ನುವ ಬಗ್ಗೆ ಐದು ಸೂತ್ರಗಳನ್ನು ಹೇಳಿದ್ದಾರೆ ಇವರು.
ಅವರು ಹೇಳಿರುವ ಮೊಟ್ಟ ಮೊದಲ ಟಿಪ್ಸ್ ಅಥವಾ ಸಲಹೆ ಎಂದರೆ, ಕೆಲಸದ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವುದು. ಒಂದು ಆ್ಯಂಕರಿಂಗ್ಗೆ ಹೋದಾಗ ಅದು ಯಾವ ಕಾರ್ಯಕ್ರಮ, ಅದರ ಹಿನ್ನೆಲೆ ಏನು, ಬರುವುದು ಯಾರು ಇತ್ಯಾದಿಗಳನ್ನು ಸಂಪೂರ್ಣವಾಗಿ ಅರಿತುಕೊಳ್ಳುವುದು ತುಂಬಾ ಮುಖ್ಯ. ಅದೇ ರೀತಿ ಸೋಷಿಯಲ್ ಮೀಡಿಯಾಗಳಲ್ಲಿ ಒಂದು ವಿಷಯ ಹಾಕುವಾಗ ಅದರ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಿರಬೇಕು ಎನ್ನುವುದು ಶಂಕರ್ ಪ್ರಸಾದ್ ಅವರ ಈ ಮಾತಿನ ಅರ್ಥ.

ಎರಡನೆಯ ಟಿಪ್ಸ್ ಯಾವುದೇ ರೀತಿಯ ಅನಗತ್ಯ ಕಮೆಂಟ್ ಮಾಡಬಾರದು. ಅಂದರೆ ನಿಮಗೆ ಸಂಬಂಧ ಪಡದೇ ಇರೋದರ ಬಗ್ಗೆ ಕಮೆಂಟ್ ಮಾಡಲು ಹೋಗಲೇಬಾರದು ಎನ್ನುವುದು. ಬಹುಶಃ ಇದು ಸೋಷಿಯಲ್ ಮೀಡಿಯಾ ಕಟೆಂಟ್ ಕ್ರಿಯೇಟರ್ಸ್ಗೆ ಈ ದಿನಗಳಲ್ಲಿ ಹೆಚ್ಚಿನ ರೀತಿಯಲ್ಲಿ ಅನ್ವಯ ಆಗುತ್ತದೆ. ದಿಢೀರ್ ಪ್ರಚಾರ ಪಡೆಯುವುದಕ್ಕಾಗಿ ಯಾವುದೋ ವಿಷಯದ ಬಗ್ಗೆ ಹೈಪ್ ಕ್ರಿಯೇಟ್ ಮಾಡುವುದು, ಇಡೀ ಸಮಾಜವನ್ನೇ ಆ ವಿಷಯಗಳ ಬಗ್ಗೆ ಎತ್ತಿ ಕಟ್ಟುವುದು, ಆ ವಿಷಯದ ಬಗ್ಗೆ ಹಿಂದೆ ಮುಂದೆ ತಿಳಿದುಕೊಳ್ಳದೇ, ಒಂದಿಷ್ಟು ಫಾಲೋವರ್ಸ್ಗಳನ್ನು ಪಡೆಯುವುದಕ್ಕಾಗಿ ಅನಗತ್ಯ ಕಮೆಂಟ್ ಮಾಡುವುದು. ಯಾವುದೋ ಅಜೆಂಡಾ ಇಟ್ಟುಕೊಂಡು ವಿಷಯ ಹೇಳುವುದು... ಇವೆಲ್ಲ ಮಾಡಿದರೆ ಒಂದಲ್ಲ ಒಂದು ದಿನ ಯಾವ ರೀತಿ ಕುಸಿಯಬೇಕೋ ಆ ಕಾಲವೂ ಶೀಘ್ರದಲ್ಲಿಯೇ ಬಂದು ಬಿಡುತ್ತದೆ. ಆ ಸಮಯದಲ್ಲಿ ಜೈಜೈ ಎಂದವರೇ ಹತ್ತಿರ ಸುಳಿಯುವುದಿಲ್ಲ ಎನ್ನುವುದು ಈ ಮಾತಿನ ಒಳಾರ್ಥವೂ ಆಗಿದೆ.
ಶಂಕರ್ ಪ್ರಕಾಶ್ ಅವರು ಹೇಳಿರುವ 3ನೇ ಟಿಪ್ಸ್ ಫಲಿತಾಂಶದ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಇದರಿಂದ ಇಷ್ಟು ಖ್ಯಾತಿ ಸಿಗತ್ತಾ, ಎಷ್ಟು ಹಣ ಸಿಗಬಹುದು ಎನ್ನುವುದನ್ನು ಆರಂಭದಲ್ಲಿನೋಡಬಾರದು. ದುಡ್ಡು ಎಲ್ಲರಿಗೂ ಬೇಕೇ ಬೇಕು ನಿಜ. ಹಾಗೆಂದು ಆರಂಭದಲ್ಲಿಯೇ ದುಡ್ಡಿನ ಹಿಂದೆ ಬಿದ್ದರೆ ನಿರಾಸೆಯೂ ಆಗಬಹುದು. ಆದ್ದರಿಂದ ಒಳ್ಳೆಯ ವಿಷಯಗಳನ್ನು ಜನರಿಗೆ ಕೊಡುತ್ತಾ ಬಂದರೆ, ನಿಮ್ಮ ಈ ವಿಷಯದಲ್ಲಿ ಸತ್ಯಾಂಶ ಇದೆ ಎನ್ನುವುದು ಜನರಿಗೆ ತಿಳಿದರೆ, ತಂತಾನೇಯಾಗಿ ಖ್ಯಾತಿಯೂ ಬರುತ್ತದೆ, ಹಣವೂ ಬರುತ್ತದೆ ಎಂದಿದ್ದಾರೆ.
ಕೆಲಸವನ್ನು ಪ್ಯಾಷನ್ ಆಗಿ ತೆಗೆದುಕೊಳ್ಳಬೇಕು ಎನ್ನುವುದು ಅವರ 4ನೇ ಟಿಪ್ಸ್ ಹಾಗೂ ಯಾವುದೇ ಕೆಲಸವನ್ನು ನಿಮ್ಮ ಕುಟುಂಬದ ಕೆಲಸ ಎಂದು ಮಾಡಿದರೆ ಅದರಲ್ಲಿ ಯಶಸ್ಸು ಸಿಗುವುದು ಖಂಡಿತ ಎನ್ನುವ ಕಿವಿ ಮಾತುಗಳನ್ನು ಅವರು ಹೇಳಿದ್ದಾರೆ. ಇಲ್ಲಿದೆ ನೋಡಿ ಶಂಕರ್ ಪ್ರಕಾಶ್ ಅವರ ಸಂಪೂರ್ಣ ಸಂದರ್ಶನ.
