ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಿದ ಆರೋಪ ಎದುರಿಸುತ್ತಿರುವ ಸಮೀರ್ ಎಂಡಿ ಸಮೀರ್ ಬಂಧನ ಭೀತಿ ಎದುರಿಸುತ್ತಿದ್ದಾರೆ. ಪೊಲೀಸರು ಆಗಮಿಸುತ್ತಿದ್ದಂತೆ ಎಸ್ಕೇಪ್ ಆಗಿರುವ ಸಮೀರ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ.
ಮಂಗಳೂರು (ಆ.21) ಧರ್ಮಸ್ಥಳ ವಿರುದ್ಧ ಎಐ ವಿಡಿಯೋ ಸೃಷ್ಟಿ ಅಪಪ್ರಚಾರ ಮಾಡಿದ ಆರೋಪದಡಿ ಯೂಟ್ಯೂಬರ್ ಸಮೀರ್ ಎಂಡಿ ಬಂಧನ ಭೀತಿ ಎದುರಿಸುತ್ತಿದ್ದಾನೆ. ಧರ್ಮಸ್ಥಳ ವಿರುದ್ಧ ಅಪಪ್ರಚಾರ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಧರ್ಮಸ್ಥಳ ಠಾಣಾ ಪೊಲೀಸರು ಸಮೀರ್ ಬಂಧನಕ್ಕೆ ಬೆಂಗಳೂರಿಗೆ ಆಗಮಿಸಿದ್ದಾರೆ. ಆದರೆ ಸಮೀರ್ ಎಂಡಿ ಪೊಲೀಸರ ಕೈಗೆ ಸಿಗದಂತೆ ಎಸ್ಕೇಪ್ ಆಗಿದ್ದಾನೆ. ಪೊಲೀಸರ ತಪ್ಪಿಸಿಕೊಂಡಿರುವ ಸಮೀರ್ ಎಂಡಿ ತುರ್ತಾಗಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಪೊಲೀಸ್ ಬಂಧನ ತಪ್ಪಿಸಲು ಸಮೀರ್ ಎಂಡಿ ವಕೀರಲ ಮೂಲಕ ನಿರೀಕ್ಷಣಾ ಜಾಮೀನು ಸಲ್ಲಿಸಿದ್ದಾರೆ.
ಮಂಗಳೂರು ಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ
ಪೊಲೀಸರಿಂದ ಕಣ್ತಪ್ಪಿಸಿ ಓಡಾಡುತ್ತಿರುವ ಯೂಟ್ಯೂಬರ್ ಸಮೀರ್ ಎಂಡಿ ತಮ್ಮ ವಕೀಲರ ಮೂಲಕ ಮಂಗಳೂರು ಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಬಂಧನದಿಂದ ತಪ್ಪಿಸಿಕೊಳ್ಳಲು ಸಮೀರ್ ಎಂಡಿ ಹಾಗೂ ಆತನ ಪರ ವಕೀಲರು ಹೋರಾಟ ಆರಂಭಿಸಿದ್ದಾರೆ. ತನ್ನನ್ನು ಬಂಧನ ಮಾಡದಂತೆ ಸಮೀರ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಇಂದು ಸಂಜೆ ಮಂಗಳೂರು ಕೋರ್ಟ್ ಸಮೀರ್ ಎಂಡಿಗೆ ನಿರೀಕ್ಷಣಾ ಜಾಮೀನು ಆದೇಶ ನೀಡುವ ಸಾಧ್ಯತೆ ಇದೆ.
ಧರ್ಮಸ್ಥಳ ವಿರುದ್ಧ ಎಐ ವಿಡಿಯೋ ಮೂಲಕ ಸಮೀರ್ ಅಪಪ್ರಚಾರ
ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟಿದ್ದಾನೆ ಎಂದು ಮುಸುಕುದಾರಿ ದೂರುದಾರ ಪ್ರತ್ಯಕ್ಷವಾದ ಬೆನ್ನಲ್ಲೇ ಸಮೀರ್ ಎಂಡಿ ತನ್ನಯೂಟ್ಯೂಬ್ ಚಾನೆಲ್ ಮೂಲಕ ಧರ್ಮಸ್ಥಳ ವಿರುದ್ದ ಯೂಟ್ಯೂಬ್ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದ. ಈ ವಿಡಿಯೋದಲ್ಲಿ ಎಐ ಟೂಲ್ ಮೂಲಕ ಕೆಲ ವಿಡಿಯೋ ಸೃಷ್ಟಿಸಿ ಪೋಸ್ಟ್ ಮಾಡಲಾಗಿದೆ. ಧರ್ಮಸ್ಥಳದಲ್ಲಿ ಸಾವಿರಾರು ಮೃತದೇಹಗಳನ್ನು ದೂರುದಾರ ಹೂತಿಟ್ಟಿದ್ದಾನೆ. ಇವುಗಳಲ್ಲಿ ಬಹುತೇಕ ಹೆಣ್ಣುಮಕ್ಕಳು, ಮಹಿಳೆಯರ ಮೃತದೇಹವಾಗಿದೆ. ಎಲ್ಲಾ ಮಹಿಳೆ ಹಾಗೂ ಹೆಣ್ಣುಮಕ್ಕಳ ಮೇಲೆ ಅತ್ಯಾ*ರವಾಗಿದೆ. ಬಳಿಕ ಕಾನೂನು ಪ್ರಕ್ರಿಯೆ, ಪೋಸ್ಟ್‌ಮಾರ್ಟಂ ಮಾಡದೆ ಶವ ರಹಸ್ಯವಾಗಿ ಹೂತಿಡಲಾಗಿದೆ ಎಂದು ಅಪಪ್ರಚಾರ ಮಾಡಿದ್ದಾನೆ. ಇಷ್ಟೇ ಅಲ್ಲ ಈ ವಿಚಾರ ಕೇಳಿದಾಗ ನನ್ನ ರಕ್ಕ ಕುದಿಯುತ್ತಿದೆ. ನಿಮ್ಮ ರಕ್ತ ಕುದಿಯುತ್ತಿಲ್ಲವೇ, ಇದರ ವಿರುದ್ಧ ಜನ ದೊಂಬಿ ಏಳಬೇಕು, ಪ್ರತಿಭಟನೆ ಮಾಡಬೇಕು, ಬೀದಿ ಬೀದಿಯಲ್ಲಿ ಪ್ರತಿಭಟನೆಗಳು ಆಗಬೇಕು ಎಂದು ಸಾರ್ವಜನಕರನ್ನು ಪ್ರಚೋದಿಸುತ್ತಿದ್ದಾನೆ ಎಂದು ಧರ್ಮಸ್ಥಳ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿತ್ತು.
ಧರ್ಮಸ್ಥಳ ಪ್ರಕರಣದ ಕುರಿತು ಸತತವಾಗಿ ಸಮೀರ್ ಎಂಡಿ ಯೂಟ್ಯೂಬ್ ಮೂಲಕ ವಿಡಿಯೋ ಮಾಡಿದ್ದಾನೆ. ಸೌಜನ್ಯ ಪ್ರಕರಣ, ಶವ ಹೂತಿಟ್ಟ ಪ್ರಕರಣಗಳನ್ನು ವಿಡಿಯೋ ಮೂಲಕ ಸುಳ್ಳು ಮಾಹಿತಿ ಬಿಚ್ಚಿಟ್ಟಿದ್ದಾನೆ. ಜನರಲ್ಲಿ ಧರ್ಮಸ್ಥಳದ ವಿರುದ್ಧ ಅಪನಂಬಿಕೆ ಬರುವಂತೆ ವಿಡಿಯೋ ಮಾಡಿ ಪ್ರಚಾರ ಮಾಡಲಾಗಿದೆ. ಸಮೀರ್ ಬಂಧನಕ್ಕೆ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಧರ್ಮಸ್ಥಳದಿಂದ ಬೆಂಗಳೂರಿಗೆ ಆಗಮಿಸಿರುವ ಪೊಲೀಸರು ಸಮೀರ್ ಬನ್ನೇರುಘಟ್ಟ ಮನೆ ಜಾಲಾಡಿದ್ದಾರೆ. ಆದರೆ ಸಮೀರ್ ಎಂಡಿ ನಾಪತ್ತೆಯಾಗಿದ್ದಾನೆ.
