ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ನಡೆಯಲಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ನಿಖರವಾದ ಸಂಖ್ಯೆ ದಾಖಲಾಗುವಂತೆ ನೋಡಿಕೊಳ್ಳಲು  ಒತ್ತಾಯಿಸಿದೆ. ಧರ್ಮದ ಕಾಲಂನಲ್ಲಿ ‘ವೀರಶೈವ ಲಿಂಗಾಯತ’ ಮತ್ತು ಜಾತಿ ಕಾಲಂನಲ್ಲಿ 'ಲಿಂಗಾಯತ' ಎಂದು ನಮೂದಿಸುವಂತೆ ಕರೆ ನೀಡಲಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ನಡೆಯಲಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಕುರಿತು ಅಖಿಲ ಭಾರತ ವೀರಶೈವ ಮಹಾಸಭಾ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ್ ಖಂಡ್ರೆ ಹಾಗೂ ಶಂಕರ್ ಬಿದರಿ, ವೀಣಾ ಕಾಶಪ್ಪನವರ್ ಅವರು ಸುದ್ದಿಗೋಷ್ಠಿ ನಡೆಸಿ ಸಮುದಾಯದ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಬರುವ ಸೆ.೨೨ ರಿಂದ ಅಕ್ಟೋಬರ್ ೭ ರವರೆಗೆ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದೆ. ಹಿಂದುಳಿದ ವರ್ಗಗಳ ಇಲಾಖೆಯಿಂದ ಮಹತ್ವದ ಸಮೀಕ್ಷೆ ಇದು. ಪ್ರತಿಯೊಬ್ಬರೂ ತಪ್ಪದೇ ಸಮೀಕ್ಷೆಯಲ್ಲಿ ಭಾಗವಹಿಸಿ. ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸ್ಥಿತಿಗತಿಗಳು ಹೇಗಿದೆ ಎಂಬುದು ಸರ್ಕಾರಕ್ಕೆ ಗೊತ್ತಾಗಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕು ಹೀಗಾಗಿ ಇದರಲ್ಲಿ ಪಾಲ್ಗೊಳ್ಳುವುದು ಎಲ್ಲರ ಜವಾಬ್ದಾರಿ. ಈ ಸಮೀಕ್ಷೆ ಬಗ್ಗೆ ಅಖಿಲ ಭಾರತ ವೀರಶೈವ ಮಹಾಸಭಾ ಕಡೆಯಿಂದ ಹಲವು ಚರ್ಚೆ ಆಗಿದೆ. ಆಗಸ್ಟ್ 22 ರಂದು ಸಚಿವರು ಎಲ್ಲ ಪಕ್ಷದ ಶಾಸಕರು ಸಭೆ ಮಾಡಿದ್ದೇವೆ. ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಸಂಖ್ಯೆ ನಿಖರವಾಗಿ ಬರಬೇಕು ಎಂಬ ಬಗ್ಗೆ ಚರ್ಚೆ ಮಾಡಿದ್ದೇವೆ. ರಾಜ್ಯ ಮಟ್ಟದ ಪದಾಧಿಕಾರಿಗಳು ಕೂಡ ಮತ್ತೊಂದು ಸುತ್ತಿನ ಸಭೆಯಲ್ಲೂ ಪಾಲ್ಗೊಂಡಿದ್ದರು. ಶತಮಾನಕ್ಕಿಂತಲೂ ಹೆಚ್ಚು ಇತಿಹಾಸ ಇರುವ ವೀರಶೈವ ಮಹಾಸಭಾ, ಲಿಂಗಾಯತ ಸಮಾಜವನ್ನು ಒಗ್ಗೂಡಿಸುವ ಕೆಲಸ ನಾವು ಮಾಡುತ್ತಿದ್ದೇವೆ.

ಈಶ್ವರ್ ಖಂಡ್ರೆ ಮಾತನಾಡಿ

  • ಹಿಂದುಳಿದ ವರ್ಗಗಳ ಇಲಾಖೆಯಿಂದ ನಡೆಯುತ್ತಿರುವ ಈ ಸಮೀಕ್ಷೆ ಅತ್ಯಂತ ಮಹತ್ವದ್ದು.
  • ಪ್ರತಿಯೊಬ್ಬ ನಾಗರಿಕರೂ ಸಮೀಕ್ಷೆಯಲ್ಲಿ ತಪ್ಪದೇ ಪಾಲ್ಗೊಳ್ಳಬೇಕು.
  • ಸಮಾಜದ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳು ಸರ್ಕಾರಕ್ಕೆ ನಿಖರವಾಗಿ ತಿಳಿಯಬೇಕಿದೆ.
  • ಸಮಾಜದ ಅತಿ ಹಿಂದುಳಿದ ವ್ಯಕ್ತಿಗೂ ಸಾಮಾಜಿಕ ನ್ಯಾಯ ದೊರಕುವಂತೆ ಸಮೀಕ್ಷೆ ನೆರವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಮಹಾಸಭೆಯ ನಿಲುವು

  • ಈ ಸಮೀಕ್ಷೆ ಕುರಿತು ಅಖಿಲ ಭಾರತ ವೀರಶೈವ ಮಹಾಸಭಾ ಹಲವು ಚರ್ಚೆಗಳನ್ನು ನಡೆಸಿದೆ.
  • ಆಗಸ್ಟ್ 22ರಂದು ಸಚಿವರು ಹಾಗೂ ಎಲ್ಲಾ ಪಕ್ಷದ ಶಾಸಕರ ಸಭೆ ಕೂಡ ನಡೆದಿತ್ತು.
  • ಸಮೀಕ್ಷೆಯಲ್ಲಿ ವೀರಶೈವ–ಲಿಂಗಾಯತ ಸಮುದಾಯದ ಸಂಖ್ಯೆ ನಿಖರವಾಗಿ ಬರುವಂತೆ ಮಾಡಲು ಒತ್ತಾಯಿಸಲಾಗಿದೆ.
  • ರಾಜ್ಯ ಮಟ್ಟದ ಪದಾಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆಯೂ ನಡೆದಿದೆ.

ಈಶ್ವರ್ ಖಂಡ್ರೆ ಮುಂದುವರಿದು

  • ಶತಮಾನಕ್ಕಿಂತಲೂ ಹೆಚ್ಚಿನ ಇತಿಹಾಸ ಹೊಂದಿರುವ ವೀರಶೈವ ಮಹಾಸಭಾ ಸದಾ ಸಮುದಾಯವನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತಿದೆ.
  • ಸಮುದಾಯದಲ್ಲಿ ವಿಭಜನೆ ಯಾರಿಗೂ ಒಳಿತು ಮಾಡುವುದಿಲ್ಲ.
  • ಆದ್ದರಿಂದ ಸಮೀಕ್ಷೆಯ ವೇಳೆ ಧರ್ಮದ ಕಾಲಂನಲ್ಲಿ ‘ವೀರಶೈವ ಲಿಂಗಾಯತ’ ಎಂದು ಬರೆಸಬೇಕು.
  • ಜಾತಿ ಕಾಲಂನಲ್ಲಿ ತಮ್ಮ ತಮ್ಮ ಜಾತಿ ಹೆಸರು ಬರೆಯಬಹುದು ಅಥವಾ ‘ಲಿಂಗಾಯತ’ ಎಂದೂ ನಮೂದಿಸಬಹುದು.
  • ಉಪಜಾತಿಗಳ ಕಾಲಂನಲ್ಲಿ 90ಕ್ಕೂ ಹೆಚ್ಚು ಉಪಪಂಗಡಗಳಿಗೆ ಪ್ರತ್ಯೇಕ ಅಂಕ ನೀಡಲಾಗುತ್ತದೆ.
  • ಈ ಅಂಕಗಳ ಆಧಾರದ ಮೇಲೆ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ವರ್ಗಗಳ ವಿಭಾಗ ಮಾಡಲಾಗುತ್ತದೆ.
  • ಜಾತಿ ಪ್ರಮಾಣಪತ್ರ ವಿತರಣೆಗೆ ಈ ಸಮೀಕ್ಷೆಗೆ ಯಾವುದೇ ಸಂಬಂಧವಿಲ್ಲ. ಜಾತಿ ಪ್ರಮಾಣಪತ್ರವು ಶಾಲಾ ದಾಖಲಾತಿಗಳ ಆಧಾರದ ಮೇಲೆ ನೀಡಲಾಗುತ್ತದೆ.
  • ಆದ್ದರಿಂದ ಯಾರೂ ಗೊಂದಲಕ್ಕೆ ಒಳಗಾಗದೇ, ಧರ್ಮದ ದಾಖಲೆ ಮಾಡುವಾಗ ‘ವೀರಶೈವ ಲಿಂಗಾಯತ’ ಎಂದೇ ನಮೂದಿಸಬೇಕು ಎಂದು ಅವರು ಕರೆ ನೀಡಿದರು.

ಶಂಕರ್ ಬಿದರಿ ಮಾತನಾಡಿ

  • ಕಾಂತರಾಜು ವರದಿಯಲ್ಲಿ ‘ಲಿಂಗಾಯತ’ ಅನ್ನು ಜಾತಿ ಎಂದು ನಮೂದಿಸಿರುವುದು ದುರದೃಷ್ಟಕರ.
  • ವಾಸ್ತವವಾಗಿ ಲಿಂಗಾಯತ ಜಾತಿ ಅಲ್ಲ, ಅದು ಧಾರ್ಮಿಕ ಪರಂಪರೆ.
  • ಸನಾತನ ಹಿಂದೂ ಧರ್ಮದಲ್ಲಿರುವ ಎಲ್ಲ ಜಾತಿಗಳು ಲಿಂಗಾಯತ ಸಮುದಾಯದಲ್ಲಿಯೂ ಇವೆ.
  • ಆದ್ದರಿಂದ ಲಿಂಗಾಯತರಿಗೆ ಜಾತಿಯ ಬದಲಿಗೆ ಪ್ರತ್ಯೇಕ ಧರ್ಮವಾಗಿ ಮಾನ್ಯತೆ ನೀಡಬೇಕೆಂದು ಅವರು ಒತ್ತಾಯಿಸಿದರು.
  • ಪ್ರತ್ಯೇಕ ಧರ್ಮದ ಪರೋಕ್ಷ ಕರೆ
  • ವೀರಶೈವ–ಲಿಂಗಾಯತ ಸಮುದಾಯವನ್ನು ಸನಾತನ ಹಿಂದೂ ಧರ್ಮದ ಭಾಗವೆಂದು ಪರಿಗಣಿಸಬಾರದು ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು.
  • ಗಣತಿ ಪಟ್ಟಿಯಲ್ಲಿ ಅಧಿಕೃತವಾಗಿ 6 ಧರ್ಮಗಳಿಗೆ ಮಾತ್ರ ಕೋಡ್ ನೀಡಲಾಗಿದೆ.