ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಮಹಿಳೆಯರು ಚಿನ್ನಾಭರಣಗಳನ್ನು ಧರಿಸುವಾಗ ಮತ್ತು ಹೊರಗೆ ಓಡಾಡುವಾಗ ಎಚ್ಚರಿಕೆಯಿಂದಿರಬೇಕು ಎಂದು ಬೆಂಗಳೂರು ಪೊಲೀಸರು ಸೂಚಿಸಿದ್ದಾರೆ. ಅಪರಿಚಿತರನ್ನು ಮನೆಗೆ ಬಿಡದಂತೆ ಮತ್ತು ದೇವರನ್ನು ಕಿಟಕಿಯ ಪಕ್ಕದಲ್ಲಿ ಕೂರಿಸದಂತೆಯೂ ಸಲಹೆ ನೀಡಿದ್ದಾರೆ. 

ಬೆಂಗಳೂರು (ಆ.7): ನಾಳೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ರಾಜ್ಯಾದ್ಯಂತ ಮಹಿ ಳೆಯರು ಲಕ್ಷ್ಮೀ ಪೂಜೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಈ ಸಂತೋಷದ ಸಂದರ್ಭದಲ್ಲಿ ಎಚ್ಚರಿಕೆಯಿಂದಿರುವಂತೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮತ್ತು ರಾಮನಗರ ಪೊಲೀಸ್ ಇಲಾಖೆಯಿಂದ ಮಹಿಳೆಯರಿಗೆ ಎಚ್ಚರಿಕೆಯಿಂದ ಹಬ್ಬ ಆಚರಿಸುವಂತೆ ಸಲಹೆ ನೀಡಿದ್ದಾರೆ.

ಕಗಲೀಪುರ ಇನ್ಸ್‌ಪೆಕ್ಟರ್ ವೆಂಕಟೇಶ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಪೊಲೀಸರ ಪ್ರಕಾರ, ವರಮಹಾಲಕ್ಷ್ಮಿ ಪೂಜೆ ವೇಳೆ ಮಹಿಳೆಯರು ಹೆಚ್ಚಿನ ಚಿನ್ನಾಭರಣ ಧರಿಸುವುದನ್ನು ತಪ್ಪಿಸಬೇಕು. ಪೂಜೆಗೆ ಚಿನ್ನಾಭರಣ ಧರಿಸಿದರೂ, ಪೂಜೆ ಮುಗಿದ ಕೂಡಲೇ ತೆಗೆದಿಟ್ಟು ಸುರಕ್ಷಿತವಾಗಿ ಇಡಬೇಕು. ಅಪರಿಚಿತರನ್ನು ಮನೆಗೆ ಬಿಡದಂತೆ ಮತ್ತು ದೇವರನ್ನು ಕಿಟಕಿಯ ಪಕ್ಕದಲ್ಲಿ ಕೂರಿಸದಂತೆ ಸಲಹೆ ನೀಡಲಾಗಿದೆ, ಏಕೆಂದರೆ ಕಿಟಕಿಯಿಂದ ಕೈಹಾಕಿ ಚಿನ್ನಾಭರಣ ಕದಿಯುವ ಸಾಧ್ಯತೆ ಇದೆ.

ಇದೇ ವೇಳೆ, ಹಬ್ಬದ ಸಂಭ್ರಮದಲ್ಲಿ ಮಹಿಳೆಯರು ಭಾರೀ ಒಡವೆ ಧರಿಸಿ ಹೊರಗೆ ಓಡಾಡುವುದನ್ನು ತಪ್ಪಿಸಬೇಕು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಕಳವು ಮತ್ತು ದರೋಡೆಯಂತಹ ಅಪಾಯಗಳನ್ನು ತಡೆಗಟ್ಟಲು ಈ ಮುನ್ನೆಚ್ಚರಿಕೆ ಕ್ರಮಗಳು ಅಗತ್ಯವಾಗಿವೆ. ಹಬ್ಬದ ಸಂತೋಷದಲ್ಲಿ ಎಚ್ಚರ ಕಳೆದುಕೊಳ್ಳಬೇಡಿ. ಸುರಕ್ಷಿತವಾಗಿರಿ ಎಂದು ಇನ್ಸ್‌ಪೆಕ್ಟರ್ ವೆಂಕಟೇಶ್ ಹೇಳಿದ್ದಾರೆ.

ಬೆಂಗಳೂರು ಪೊಲೀಸ್ ಇಲಾಖೆಯು ಸಾರ್ವಜನಿಕರಿಗೆ ಸುರಕ್ಷಿತ ಹಬ್ಬ ಆಚರಣೆಗೆ ಸಹಕಾರ ನೀಡಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ. ಹಬ್ಬದ ಉತ್ಸಾಹದೊಂದಿಗೆ ಸುರಕ್ಷತೆಗೂ ಆದ್ಯತೆ ನೀಡಿ, ವರಮಹಾಲಕ್ಷ್ಮಿ ಹಬ್ಬವನ್ನು ಸಂತೋಷದಿಂದ ಆಚರಿಸಿ.