ಹಿರಿಯ ಪತ್ರಕರ್ತೆಯೊಂದಿಗೆ ಅವಹೇಳನಕಾರಿಯಾಗಿ ವರ್ತಿಸಿದ ಆರ್.ವಿ. ದೇಶಪಾಂಡೆ ಅವರನ್ನು 'ಪ್ರಸೂತಿ ತಜ್ಞ' ಎಂದು ಕರೆಯಬೇಕಾಗಿದೆ ಎಂದು ಸುನಿಲ್ ಹೆಗಡೆ ವ್ಯಂಗ್ಯವಾಡಿದ್ದಾರೆ. ಪತ್ರಕರ್ತೆಯ ಪ್ರಶ್ನೆಗೆ ಅನುಚಿತವಾಗಿ ಉತ್ತರಿಸುವ ಮೂಲಕ ಪತ್ರಿಕಾ ರಂಗದ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಉತ್ತರ ಕನ್ನಡ (ಸೆ.5): ಹಿರಿಯ ಶಾಸಕರಾದ ಆರ್‌ವಿ ದೇಶಪಾಂಡೆಗೆ ಇನ್ನು ಮುಂದೆ ಪ್ರಸೂತಿ, ಹೆರಿಗೆ ತಜ್ಞರು ಎಂದು ಕರೆಯಬೇಕಾಗಿದೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಹಾಗೂ ಮಾಜಿ ಶಾಸಕ ಸುನಿಲ್ ಹೆಗಡೆ ಹೇಳಿದ್ದಾರೆ.
ಹಿರಿಯ ಪತ್ರಕರ್ತೆಯ ಜೊತೆ ಅವಹೇಳನಕಾರಿ ರೀತಿಯಲ್ಲಿ ವರ್ತಿಸಿದ ಹಿನ್ನೆಲೆ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಹಳಿಯಾಳ ಪಟ್ಟಣದ ಶಿವಾಜಿ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ದೇಶಪಾಂಡೆ ಮಾಡಿರುವ ಕರ್ಮಕ್ಕೆ ಹಳಿಯಾಳ, ದಾಂಡೇಲಿ, ಜೊಯಿಡಾ ತಾಲೂಕು ತಲೆ ತಗ್ಗಿಸುವಂತಾಗಿದೆ. ಪತ್ರಕರ್ತೆಯ ಸಾಮಾಜಿಕ ಕಳಕಳಿಯ ಪ್ರಶ್ನೆಗೆ ತದ್ವಿರುದ್ಧವಾಗಿ, ಅನುಚಿತವಾಗಿ ಉತ್ತರಿಸುವ ಮೂಲಕ ಪತ್ರಿಕಾ ರಂಗದ ಸ್ವಾತಂತ್ರ್ಯ, ಗೌರವಕ್ಕೂ ದೇಶಪಾಂಡೆ ಧಕ್ಕೆ ತಂದಿದ್ದಾರೆ ಎಂದು ಕಿಡಿಕಾರಿದರು.
ಸೋನಿಯಾ, ಪ್ರಿಯಾಂಕಾ ಗಾಂಧಿಗೆ ಹೆರಿಗೆ ಮಾಡಿಸುವುದಾಗಿ ಅವರ ಬಳಿ ಹೋಗಿ ಹೇಳಲಿ. ಒಳ್ಳೆಯ ರೀತಿ ಮಾತನಾಡಿ ಮಹಿಳೆಯರಿಗೆ ಗೌರವ ನೀಡುವುದನ್ನು ಶಾಸಕರು ಕಲೆಯಲಿ ಎಂದು ಸುನೀಲ್ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದ್ದರು. ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸೀಮಗೌಡ್ರು, ಬಿಜೆಪಿ ಹಳಿಯಾಳ ಅಧ್ಯಕ್ಷ ವಿಠ್ಠಲ ಸಿದ್ದನ್ನವರ, ದಾಂಡೇಲಿ ಅಧ್ಯಕ್ಷ ಬುದ್ದವಂತ ಪಾಟೀಲ ಮತ್ತಿತರರು ಭಾಗವಹಿಸಿದ್ದರು.
