RSS route march Chittapur: ಪ್ರಚಾರಕ್ಕಾಗಿ ಪ್ರಿಯಾಂಕ್‌ ಖರ್ಗೆ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದ್ದಾರೆ. ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ ನಡೆಸಲು ಸಿದ್ಧವಿದ್ದು, ಅದೇ ದಿನ ಭೀಮ್‌ ಆರ್ಮಿ ರ್‍ಯಾಲಿಗೂ ನಮ್ಮ ತಕರಾರಿಲ್ಲ ಎಂದರು..

ಹುಬ್ಬಳ್ಳಿ (ಅ.24): ಪ್ರಚಾರಕ್ಕಾಗಿ ಸಚಿವ ಪ್ರಿಯಾಂಕ್‌ ಖರ್ಗೆಯವರು ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಚಿತ್ತಾಪುರದಲ್ಲಿ ನ.2ರಂದು ಪಥಸಂಚಲನ ನಡೆಸಲು ಅವಕಾಶ ಕೇಳಲಾಗಿದೆ. ಭೀಮ್‌ ಆರ್ಮಿಯೂ ಅಂದೇ ಅವಕಾಶ ಕೋಡುವಂತೆ ಕೇಳಿದೆ. ಇದಕ್ಕೆ ನಮ್ಮ ತಕರಾರಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಭೀಮ್‌ ಆರ್ಮಿ ರ್‍ಯಾಲಿ ಮಾಡುವುದಕ್ಕೆ ನಮ್ಮ ತಕರಾರಿಲ್ಲ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೌಹಾರ್ದಯುತವಾಗಿ ಮೆರವಣಿಗೆ ಮಾಡಲು ಎಲ್ಲ ಸಂಘಟನೆಗಳಿಗೂ ಹಕ್ಕಿದೆ. ಭೀಮ್‌ ಆರ್ಮಿ ರ್‍ಯಾಲಿ ಮಾಡುವುದಕ್ಕೆ ನಮ್ಮ ತಕರಾರಿಲ್ಲ. ಡಾ. ಅಂಬೇಡ್ಕರ್‌ ಹೆಸರಲ್ಲಿ ರ್‍ಯಾಲಿ ಮಾಡುವುದಕ್ಕೆ ಸ್ವಾಗತವಿದೆ. ಯಾರಿಗೆ, ಯಾವತ್ತು ಅನುಮತಿ ಕೊಡಬೇಕು ಎನ್ನುವುದನ್ನು ಜಿಲ್ಲಾಡಳಿತ ನಿರ್ಧರಿಸಲಿ. ಜಿಲ್ಲಾಡಳಿತ ಅನುಮತಿ ಕೊಟ್ಟ ದಿನದಂದು ಆರ್‌ಎಸ್‌ಎಸ್ ಪಥ ಸಂಚಲನ ನಡೆಸಲಿದೆ ಎಂದು ತಿಳಿಸಿದರು. ಜಿಎಸ್‌ಟಿ ವಿಚಾರದಲ್ಲಿ ಸಿದ್ದರಾಮಯ್ಯ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಬಿಜೆಪಿ-ಜೆಡಿಎಸ್‌ ಮಧ್ಯೆ ಭಿನ್ನಾಭಿಪ್ರಾಯವಿಲ್ಲ:

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೇಂದ್ರ ಸರ್ಕಾರದ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದ ಸಚಿವ ಪ್ರಹ್ಲಾದ ಜೋಶಿ, ವಿಜಯೇಂದ್ರ ಮತ್ತು ಎಚ್‍ಡಿಕೆ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬಾರದು ಎಂದರು. ಕುಮಾರಸ್ವಾಮಿ ಅವರ ಆರೋಗ್ಯ ಸರಿ ಇರಲಿಲ್ಲ. ಆರೋಗ್ಯ ವಿಚಾರಿಸಲು ಮತ್ತು ದೀಪಾವಳಿ ಹಿನ್ನೆಲೆಯಲ್ಲಿ ಭೇಟಿಯಾಗಿದ್ದಾರೆ. ಇದೊಂದು ಸೌಹಾರ್ದಯುತ ಭೇಟಿ. ಜೆಡಿಎಸ್ ಮತ್ತು ಬಿಜೆಪಿ ನಡುವೆ ಸಮನ್ವಯದ ಕೊರತೆಯೂ ಇಲ್ಲ. ಕೇಂದ್ರದ ಜೊತೆ ಜಗಳವಿದ್ದರೆ ಕೇಂದ್ರದವರೇ ಮಾತನಾಡುತ್ತಾರೆ. ಭಿನ್ನಾಭಿಪ್ರಾಯವಿದೆ ಎನ್ನುವುದೆಲ್ಲವೂ ಊಹಾಪೋಹ. ರಾಜ್ಯ ಸರ್ಕಾರದ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕೆಂಬ ಕುಮಾರಸ್ವಾಮಿ ಹೇಳಿಕೆಗೆ ನನ್ನ ಸಹಮತವಿದೆ ಎಂದು ಜೋಶಿ ಹೇಳಿದರು.