ಧರ್ಮಸ್ಥಳ ಪ್ರಕರಣದಲ್ಲಿ ಸುಜಾತ್ ಭಟ್ ಕೇಸ್ ಇದೀಗ ಹಲವು ತಿರುವು ಪಡೆದುಕೊಂಡಿದೆ. ಬುರುಡೆ ಪ್ರಕರಣದ ಬೆನ್ನಲ್ಲೇ ಧರ್ಮಸ್ಥಳದಲ್ಲಿ ಮಗಳ ಮಿಸ್ಸಿಂಗ್ ದೂರು ದಾಖಲಿಸುವ ಮೊದಲು ಸುಜಾತಾ ಭಟ್, ಬೆಂಗಳೂರಲ್ಲಿ ಜ್ಯೂಸ್, ಕಷಾಯ ಮಾರುತ್ತಿದ್ದ ವಿವರ ಬಹಿರಂಗವಾಗಿದೆ.

ಬೆಂಗಳೂರು (ಆ.19) ಧರ್ಮಸ್ಥಳದಲ್ಲಿ ಮುಸುಕುದಾರಿ ದೂರುದಾರ ನೂರಾರು ಶವ ಹೂತಿಟ್ಟ ಆರೋಪದ ಬೆನ್ನಲ್ಲೇ ಸುಜಾತ್ ಭಟ್ ಅನ್ನೋ ಮಹಿಳೆ ತನ್ನ ಮಗಳು ಅನನ್ಯಾ ಭಟ್ ಧರ್ಮಸ್ಥಳ ದೇವಸ್ಥಾನಕ್ಕೆ ತೆರಳಿ ಮಿಸ್ಸಿಂಗ್ ಆಗಿದ್ದಾಳೆ ಎಂದು ದೂರು ನೀಡಿ ಕೋಲಾಹಲ ಸೃಷ್ಟಿಸಿದ್ದರು. ರಾಷ್ಟ್ರೀಯ ಸುದ್ದಿ ಮಾಧ್ಯಮ ಸೇರಿದಂತೆ ದೇಶ ವಿದೇಶದ ಸುದ್ದಿ ಮಾಧ್ಯಮಗಳಲ್ಲಿ ಸುಜಾತ್ ಭಟ್ ಸಂಚಲನ ಸೃಷ್ಟಿಸಿದ್ದರು. ಆದರೆ ಸುಜಾತ್ ಭಟ್ ಕುರಿತು ಮಾಹಿತಿ ಕೆದಕುತ್ತಾ ಹೋಗುತ್ತಿರುವ ಎಸ್ಐಟಿ ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿಗಳು ಲಭ್ಯವಾಗುತ್ತಿದೆ. ಇದೀಗ ಏಷ್ಯಾನೆಟ್ ಸುವರ್ಣನ್ಯೂಸ್ ಸುಜಾತ್ ಭಟ್ ಬಹಿರಂಗಪಡಿಸಿದ ಮಗಳು ಅನನ್ಯಾ ಭಟ್ ಫೋಟೋ ಅಸಲಿಯತ್ತು ಬಹಿರಂಗಪಡಿಸಿದೆ. ಇದರ ಬೆನ್ನಲ್ಲೇ ಸುಜಾತ್ ಭಟ್ ಧರ್ಮಸ್ಥಳ ಪ್ರಕರಣಕ್ಕೆ ಎಂಟ್ರಿ ಕೊಡುವ ಮೊದಲು ಬೆಂಗಳೂರಲ್ಲಿ ಜ್ಯೂಸ್, ಕಷಾಯ ಮಾರುತ್ತಿದ್ದ ಮಹತ್ವದ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನಲ್ಲಿ ಜ್ಯೂಸ್ ಕಷಾಯ ಮಾರುತ್ತಿದ್ದ ನಿವೃತ್ತ ಸಿಬಿಐ ಸ್ಟೆನೋಗ್ರಾಫರ್

ಧರ್ಮಸ್ಥಳದ ಬುರುಡೆ ಪ್ರಕರಣದ ಬೆನ್ನಲ್ಲೇ ಸುಜಾತ್ ಭಟ್ ಮಗಳು ಅನನ್ಯಾ ಭಟ್ ಮಿಸ್ಸಿಂಗ್ ದೂರು ಹಿಡಿದುಕೊಂಡು ಧರ್ಮಸ್ಥಳಕ್ಕೆ ಎಂಟ್ರಿಯಾಗಿದ್ದರು. ಮಂಜುನಾಥ್ ಅನ್ನೋ ವಕೀಲರ ನೆರವಿನಿಂದ ಸುಜಾತ್ ಭಟ್ ದೂರು ದಾಖಲಿಸಿ ಹೋರಾಟ ಆರಂಭಿಸಿದ್ದರು. ಆದರೆ ಧರ್ಮಸ್ಥಳ ಪ್ರಕರಣಕ್ಕೆ ಎಂಟ್ರಿಕೊಡುವ ಮೊದಲು ಬೆಂಗಳೂರಿನಲ್ಲಿ ಜ್ಯೂಸ್ ಹಾಗೂ ಕಷಾಯ ಮಾರಾಟ ಮಾಡುತ್ತಿದ್ದ ಮಾಹಿತಿ ಬಹಿರಂಗವಾಗಿದೆ. ಬೆಂಗಳೂರಿನ ಪದ್ಮನಾಭನಗರದ ಪಾರ್ಕ್ ಬಳಿ ಜ್ಯೂಸ್ ಹಾಗೂ ಕಷಾಯ ಮಾರಾಟ ಮಾಡುತ್ತಿದ್ದರು. ಈ ಕುರಿತು ಇಲ್ಲಿನ ವ್ಯಾಪಾರಿಗಳು, ಸ್ಥಳೀಯರು ಸ್ಪಷ್ಟಪಡಿಸಿದ್ದಾರೆ. ಕೊರೋನಾ ಸಮಯದಲ್ಲಿ ಜ್ಯೂಸ್ , ಕಷಾಯ ಮಾರಾಟ ಆರಂಭಿಸಿದ್ದರು ಅನ್ನೋ ಮಾಹಿತಿ ಬಯಲಾಗಿದೆ. ಬಳಿಕ ಬೆಂಗಳೂರಿನ ಪಾರ್ಕ್ ಬಳಿ ಜ್ಯೂಸ್, ಕಷಾಯ ಮಾರಾಟ ಮಾಡುತ್ತಿದ್ದರು ಅನ್ನೋ ಮಾಹಿತಿ ಬಹಿರಂಗವಾಗಿದೆ.

ಟಿವಿಯಲ್ಲಿ ನೋಡಿದಾಗಲೇ ಜ್ಯೂಸ್ ಮಾರಾಟ ಮಾಡುತ್ತಿದ್ದ ಆಕೆ ಇದೀಗ ಧರ್ಮಸ್ಥಳದಲ್ಲಿ ಹೋರಾಟ ಮಾಡುತ್ತಿದ್ದಾಳೆ ಅನ್ನೋದು ಗೊತ್ತಾಯಿತು. ಆಕೆಯ ಕುರಿತು ಹೆಚ್ಚಿನ ಮಾಹಿತಿ ಗೊತ್ತಿಲ್ಲ. ಆಕೆಗೆ ಮಗಳಿರುವ ಕುರಿತು ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಸ್ಥಳೀಯ ವ್ಯಾಪಾರಿಗಳು ಹೇಳಿದ್ದಾರೆ. ಕಳೆದ 2 ತಿಂಗಳಿನಿಂದ ಸುಜಾತ್ ಭಟ್ ಕಾಣಿಸಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.ಮನೆಯಲ್ಲಿ ಸುಜಾತ್ ಭಟ್, ಆಕೆಯ ಪತಿ ಹಾಗೂ ಗೆಳೆಯರೊಬ್ಬರು ಇದ್ದಾರೆ ಎಂದು ಹೇಳಿಕೊಂಡಿದ್ದರು. ಇದಕ್ಕಿಂತ ಇನ್ಯಾವುದೇ ಮಾಹಿತಿ ಅವರು ಹೇಳಿರಲಿಲ್ಲ ಎಂದು ಸ್ಥಳೀಯ ವ್ಯಾಪಾರಿಗಳು ಹೇಳಿದ್ದಾರೆ.ಸುಜಾತ್ ಭಟ್ ಸರಿಸುಮಾರು 3 ತಿಂಗಳು ಕಾಲ ಪದ್ಮನಾಭ ನಗರ ಪಾರ್ಕ್ ಬಳಿ ಜ್ಯೂಸ್, ಕಷಾಯ ಮಾರಾಟ ಮಾಡುತ್ತಿದ್ದರು ಎಂದು ಸ್ಥಳೀಯ ವ್ಯಾಪಾರಿಗಳು ಹೇಳಿದ್ದಾರೆ.

ಅನನ್ಯಾ ಭಟ್ ಫೋಟೋ ಅಸಲಿ ಕತೆ ಬೆನ್ನಲ್ಲೋ ಸುಜಾತ್ ಭಟ್ ಸ್ಪಷ್ಟನೆ

ಸುಜಾತ್ ಭಟ್ ಮಿಸ್ಸಿಂಗ್ ಮಗಳ ಫೋಟೋ, ದಾಖಲೆಗಳು, ವಿದ್ಯಾಭ್ಯಾಸದ ಮಾಹಿತಿಗಳು ಎಲ್ಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದರ ಬೆನ್ನಲ್ಲೇ ಸುಜಾತ್ ಭಟ್ ಹಾಗೂ ವಕೀಲ ಮಂಜುನಾಥ್ ವಿಡಿಯೋ ಮೂಲಕ ಪ್ರತ್ಯಕ್ಷರಾಗಿ ಫೋಟೋ ಬಹಿರಂಗಪಡಿಸಿದ್ದರು. ನಾಪತ್ತೆಯಾಗಿರುವ ಅನನ್ಯಾ ಭಟ್ ಫೋಟೋ ಎಂದು ಸ್ವತಃ ಸುಜಾತ್ ಭಟ್ ಫೋಟೋ ಬಹಿರಂಗಪಡಿಸಿದ್ದರು. ಆದರೆ ಸುಜಾತ್ ಭಟ್ ಬಹಿರಂಗಪಡಿಸಿದ ಫೋಟೋ ಅನನ್ಯಾ ಭಟ್ ಅಲ್ಲ, ವಾಸಂತಿ ಅನ್ನೋ ಕೊಡಗು ಮೂಲದ ಮಹಿಳೆಯದ್ದು ಅನ್ನೋದು ಏಷ್ಯಾನೆಟ್ ಸುವರ್ಣನ್ಯೂಸ್ ಬಹಿರಂಗಪಡಿಸಿದೆ. ಇದರ ಬೆನ್ನಲ್ಲೇ ಸುವರ್ಣನ್ಯೂಸ್ ಜೊತೆ ಮಾತನಾಡಿದ ಸುಜಾತ್ ಭಟ್, ತಾನು ಬಹಿರಂಗಪಡಿಸಿದ ಫೋಟೋ ತನ್ನ ಮಗಳ ಫೋಟೋ. ಇದರಲ್ಲಿ ಅನುಮಾನವಿಲ್ಲ ಎಂದು ಸುಜಾತ್ ಭಟ್ ಹೇಳಿದ್ದಾರೆ. ಬೇರೆಯವರ ಫೋಟೋ ತಾನು ನೀಡಿಲ್ಲ. ಕಾಣೆಯಾಗಿರುವ ನನ್ನ ಮಗಳ ಫೋಟೋ ನೀಡಿದ್ದೇನೆ. ಹುಡುಕಾಟಿ ನನ್ನ ಮಗಳ ಫೋಟೋ ತೆಗೆದು ಬಹಿರಂಗಪಡಿಸಿದ್ದೇನೆ ಎಂದಿದ್ದಾರೆ.