ಫಾರ್ಮಸಿಸ್ಟ್‌ಗಳು ವೈದ್ಯರಷ್ಟೇ ಪ್ರಮುಖರಾಗಿದ್ದು, ತಮ್ಮ ವೃತ್ತಿಯಲ್ಲಿ ಶ್ರೀಮಂತ- ಬಡವ, ಜಾತಿ-ಧರ್ಮಗಳೆಂದು ಬೇಧ ಮಾಡದೇ ಎಲ್ಲರಿಗೂ ಸಮಾನವಾಗಿ ಚಿಕಿತ್ಸೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು (ಸೆ.29): ಫಾರ್ಮಸಿಸ್ಟ್‌ಗಳು ವೈದ್ಯರಷ್ಟೇ ಪ್ರಮುಖರಾಗಿದ್ದು, ತಮ್ಮ ವೃತ್ತಿಯಲ್ಲಿ ಶ್ರೀಮಂತ- ಬಡವ, ಜಾತಿ-ಧರ್ಮಗಳೆಂದು ಬೇಧ ಮಾಡದೇ ಎಲ್ಲರಿಗೂ ಸಮಾನವಾಗಿ ಚಿಕಿತ್ಸೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಲ್ಲತ್ತಹಳ್ಳಿಯ ಲಿಟಲ್ ಫ್ಲವರ್ ಶಿಕ್ಷಣ ಸಮೂಹದ ಅಲೈಡ್‌ ಕಾಲೇಜಿನ ಕಟ್ಟಡ ಹಾಗೂ ಹೊಸ ಫಾರ್ಮಸಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಫಾರ್ಮಸಿಸ್ಟ್‌ಗಳು ವೈದ್ಯರಷ್ಟೇ ಪ್ರಮುಖರಾಗಿದ್ದು, ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಾರೆ ಎಂದರು.

ವೃತ್ತಿಯಲ್ಲಿ ಶ್ರೀಮಂತ ಬಡವ, ಜಾತಿ ಧರ್ಮಗಳೆಂದು ಬೇಧ ಮಾಡದೇ ಎಲ್ಲರಿಗೂ ಸಮಾನವಾಗಿ ಚಿಕಿತ್ಸೆ ನೀಡುವ ಕೆಲಸ ಮಾಡಬೇಕು. ಸಮಾಜದಲ್ಲಿನ ಬಡರೋಗಿಗಳಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಬೇಕು. ಖಾಸಗಿ ಚಿಕಿತ್ಸಾ ವೆಚ್ಚಗಳನ್ನು ಭರಿಸಲು ಅಶಕ್ತರಾಗಿರುವ ಬಡರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ಸರ್ಕಾರದ ಈ ಆಶಯದೊಂದಿಗೆ ಫಾರ್ಮಸಿಸ್ಟ್ ಗಳೂ ಕೈಜೋಡಿಸಿ, ಬಡರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಸಾರ್ಥಕ ಸೇವೆ ನೀಡಬೇಕೆಂದು ಹೇಳಿದರು.

ಲಿಟಲ್ ಫ್ಲವರ್ ಶಿಕ್ಷಣ ಸಮೂಹದ ಮಾಲೀಕ ಡಾ.ಕೆ. ವೆಂಟಕಗಿರಿಯವರ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಇಲ್ಲಿ ಫಾರ್ಮಸಿಸ್ಟ್ ಶಿಕ್ಷಣ ಪಡೆದು ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯಪಟ್ಟರು. ಈ ವೇಳೆ ಸಚಿವ ಡಿ. ಸುಧಾಕರ್‌, ಮಾಜಿ ಸಂಸದ ಚಂದ್ರಪ್ಪ, ಕಾಂಗ್ರಸ್‌ ಮುಖಂಡರಾದ ಕುಸುಮಾ, ಹನುಮಂತರಾಯಪ್ಪ ಮತ್ತಿತರರು ಇದ್ದರು.

ಎಲ್ರಿಗೂ ನ್ಯಾಯ ಸಿಕ್ಕಿದೆಯೇ, ಗೊತ್ತಾಗಬೇಕು

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿದ್ದು, ನಮ್ಮ ಸಮಾಜದಲ್ಲಿ ಯಾರಿಗೆ ನ್ಯಾಯ ಸಿಕ್ಕಿದೆ? ಯಾರಿಗೆ ಇನ್ನೂ ಸಿಕ್ಕಿಲ್ಲ ಎನ್ನುವುದು ಗೊತ್ತಾಗಬೇಕು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಪರಿಕಲ್ಪನೆ ಜಾರಿಯಾಗಬೇಕು ಎಂದು ಹೇಳಿದ್ದಾರೆ. ಮಾಧ್ಯಮಗಳು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಯಾವುದೇ ಒಬ್ಬ ವ್ಯಕ್ತಿ ತಪ್ಪು ಮಾಡಿದರೆ ತಪ್ಪು ಎನ್ನಬೇಕು. ತಪ್ಪಿಲ್ಲದಿದ್ದರೂ ತಪ್ಪು ಎನ್ನಬಾರದು. ಆರೋಪ ಮಾಡುವಾಗ ಸತ್ಯ, ಮಿಥ್ಯ ಪರಿಶೀಲಿಸಬೇಕು. ಸರ್ಕಾರ ಮಾಡುವುದೆಲ್ಲವೂ ಸರಿ ಎಂದು ನಾನು ಹೇಳುವುದಿಲ್ಲ. ಆದರೆ, ಜನಪರ ವಿಚಾರಗಳನ್ನು ಜನರಿಗೆ ತಿಳಿಸಬೇಕು. ಜನಪರ ಇಲ್ಲದಿದ್ದರೆ ಅದೇ ರೂಪದಲ್ಲೇ ಜನರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.