ವಿಜಯನಗರ ಜಿಲ್ಲೆಯ ಗಾದಿಗನೂರು ಗ್ರಾಮದಲ್ಲಿ ನವರಾತ್ರಿ ಪೂಜೆಯ ಆತುರದಲ್ಲಿ ಸಿಲಿಂಡರ್ ಸ್ಫೋಟಗೊಂಡು ಮನೆ ಛಿದ್ರವಾಗಿದೆ. ಘಟನೆಯಲ್ಲಿ ಒಂದೇ ಕುಟುಂಬದ ಎಂಟು ಮಂದಿ ಗಾಯಗೊಂಡಿದ್ದು, ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಅನಿಲ ಸೋರಿಕೆಯ ಅರಿವಿಲ್ಲದೆ ಬೆಂಕಿ ಹಚ್ಚಿದ್ದೇ ದುರಂತಕ್ಕೆ ಕಾರಣವಾಗಿದೆ.

ವಿಜಯನಗರ (ಸೆ.27): ಬೆಳ್ಳಂಬೆಳಗ್ಗೆ ಸಿಲಿಂಡರ್ ಸ್ಫೋಟಗೊಂಡು ಮನೆಯ ಛಿದ್ರವಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ, ಗಾದಿಗನೂರು ಗ್ರಾಮದಲ್ಲಿ ನಡೆದಿದ್ದು, ದುರ್ಘಟನೆಯಲ್ಲಿ ಕುಟುಂಬದ ಎಲ್ಲ ಸದಸ್ಯರೂ ಗಾಯಗೊಂಡಿದ್ದಾರೆ, ಕೆಲವರ ಸ್ಥಿತಿ ಗಂಭೀರವಾಗಿದೆ.

ಹಾಲಪ್ಪ (42), ಕವಿತಾ (32), ಗಂಗಮ್ಮ (63), ಮೈಲಾರಪ್ಪ (48), ಮಲ್ಲಮ್ಮ (40), ಕಾವೇರಿ (18), ಕಾವ್ಯ (15), ಮತ್ತು ನಿಖಿಲ್ (13) ಗಾಯಗೊಂಡಿದ್ದಾರೆ. ಇವರಲ್ಲಿ ಕವಿತಾ (32) ಅವರ ಸ್ಥಿತಿ ಗಂಭೀರವಾಗಿದೆ

ಸಿಲಿಂಡರ್ ಸ್ಫೋಟವಾಗಿದ್ದು ಹೇಗೆ?

ಗಾದಿ ಗನೂರು ಗ್ರಾಮದ ಹಾಲಪ್ಪ ವಕೀಲರ ಮನೆಯಲ್ಲಿ ಇಂದು ಭೀಕರ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಮನೆಯ ಗೋಡೆಯೇ ಕುಸಿದು ಬಿದ್ದಿದೆ. ನವರಾತ್ರಿ ಪೂಜೆಗೆ ತೆರಳುವ ಆತುರದಲ್ಲಿ ಕವಿತಾ ಅವರು ಸಿಲಿಂಡರ್ ಆನ್ ಮಾಡಿದ್ದು, ಬಹಳ ಹೊತ್ತಿನ ನಂತರ ಒಲೆಯನ್ನು ಹಚ್ಚಲು ಬೆಂಕಿಕಡ್ಡಿಯನ್ನು ಉರಿಸಿದಾಗ, ಅಷ್ಟೊತ್ತಿಗಾಗಲೇ ಸಿಲಿಂಡರ್ ಅನಿಲ ಮನೆ ತುಂಬಾ ವ್ಯಾಪಿಸಿದೆ. ಆದರೆ ವಾಸನೆಯನ್ನು ಗ್ರಹಿಸಿ ಅಪಾಯ ತಿಳಿಯದೇ ಗ್ಯಾಸ್ ಹಚ್ಚಲು ಬೆಂಕಿಕಡ್ಡಿ ಗೀರಿದ್ದಾರೆ. ಇದರಿಂದಾಗಿ ಭೀಕರ ಸ್ಫೋಟ ಸಂಭವಿಸಿದೆ. ಇದರ ಪರಿಣಾಮ ಮನೆ ಸಂಪೂರ್ಣ ಛಿದ್ರಗೊಂಡಿದೆ.

ಸದ್ಯ ಗಾಯಗೊಂಡವರನ್ನು ತಕ್ಷಣ ತೋರಣಗಲ್ಲು ಗ್ರಾಮದ ಸಂಜೀವಿನಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಪೊಲೀಸರು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಮುಂದಿನ ವಿವರಗಳಿಗಾಗಿ ಕಾಯಿರಿ…