ತುಮಕೂರು ಬಳಿ ಕಾರು ಬಸ್ ನಡುವೆ ಭೀಕರ ಅಪಘಾತ, ಸ್ಥಳದಲ್ಲೇ ಮೂವರ ಸಾವು ಸಂಭವಿಸಿದೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ತುಮಕೂರು (ಅ.04) ಕಾರು ಹಾಗೂ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ತುಕಮೂರು ಬಳಿ ನಡೆದಿದೆ. ಕೊರಟಗೆರೆ ಕಡೆಯಿಂದ ತುಮಕೂರು ಕಡೆಗೆ ಐವರು ಕಾರಿನಲ್ಲಿ ತೆರಳುತ್ತಿರುವ ವಿರುದ್ಧ ದಿಕ್ಕಿನಿಂದ ಬಂದ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿದೆ. ತುಮಕೂರು ತಾಲ್ಲೂಕಿನ ಬೆಳಧರ ಬಳಿ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಐವರ ಪೈಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಓರ್ವ ಆಸ್ಪತ್ರೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾನೆ. ಇನ್ನುಳಿದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೊರಟೆಗೆರೆ ಗ್ರಾಮಸ್ಥರ ಆಕ್ರಂದನ

ಕೊರಟೆಗೆರೆ ಮೂಲದ ಐವರು ಕಾರಿನಲ್ಲಿ ತೆರಳುವಾಗ ಅಪಘಾತ ಸಂಭವಿಸಿದೆ. ಬೈಚಾಪುರದ ಶಿವಶಂಕರ್, ಕತ್ತಿನಾಗೇನಹಳ್ಳಿ ಶಿವಕುಮಾರ್ ಕತ್ತಿನಾಗೇನಹಳ್ಳಿಯ ಗೋವಿಂದಪ್ಪ ಮೃತ ದುರ್ದೈವಿಗಳು. ರೆಡ್ಡಿಹಳ್ಳಿ ಶಂಕರ್, ಕತ್ತಿನಾಗೇನಹಳ್ಳಿ ವೇಣುಗೋಪಾಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೊರಟೆಗೆ ತಾಲೂಕಿನ ಗ್ರಾಮಸ್ಥರು ಭೀಕರ ಅಪಘಾತ ಸುದ್ದಿ ಕೇಳಿ ಬೆಚ್ಚಿ ಬಿದ್ದಿದ್ದಾರೆ. ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನಾ ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಘಟನೆ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ಬಸ್ ಹಾಗೂ ಕಾರು ನಡುವಿನ ಡಿಕ್ಕಿ ಕುರಿತು ಸ್ಥಳಿಯರಿಂದಲೂ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.

ಕಲಬುರುಗಿಯಲ್ಲಿ ಬೈಕ್ ಅಪಘಾತ

ಕಲಬುರಗಿ ಜಿಲ್ಲೆ ಶಹಾಬಾದ್ ತಾಲೂಕಿನ ಮರತುರು ಬಳಿ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅವಘಡ ಸಂಭಲಿಸಿದೆ. ವೇಗವಾಗಿ ಬರುತ್ತಿದ್ದ ಎರಡು ಬೈಕ್ ಡಿಕ್ಕಿಯಾಗಿ ಅಪಘಾತಕ್ಕೀಡಾಗಿದೆ.ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮರತೂರು ಗ್ರಾಮದವರಾದ ಮನೋಹರ್ ಕಂಠಿ (50), ಸಿದ್ರಾಮ್ ಮಸಗಲ್ (15) ಮೃತ ದುರ್ದೈವಿಗಳು. ಶಹಾಬಾದ್ ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದೆ.

ಗುಡಿಬಂಡೆಯಲ್ಲಲಿ ಬೈಕ್ ಅಪಘಾತ, ಯುವಕ ಸಾವು

ಗುಡಿಬಂಡೆ ತಾಲೂಕು ದಪ್ಪರ್ತಿ ಕ್ರಾಸ್ ಬಳಿ ಬೈಕ್ ನಡುವೆ ಅಪಘಾತ ಸಂಭವಿಸಿ 19 ವರ್ಷದ ಯುವ ಮೃತಪಟ್ಟ ಘಟನೆ ನಡೆದಿದೆ. ಗುಡಿಬಂಡೆ ಕಡೆಯಿಂದ ಕೊಂಡರೆಡ್ಡಿಹಳ್ಳಿ ಕಡೆಗೆ ಹೋಗುತಿದ್ದ ವೇಳೆ ಅಪಘಾತ ಸಂಭವಿಸಿದೆ. ಗುಡಿಬಂಡೆ ತಾಲ್ಲೂಕು ಕೊಪ್ಪಕಾಟೇನಹಳ್ಳಿ ನಿವಾಸಿ ಶ್ರೀನಿವಾಸ (19) ಮೃತಪಟ್ಟಿದ್ದಾನೆ. ಜೊತೆಯಲ್ಲಿದ್ದ ನಾರಾಯಣಸ್ವಾಮಿಗೂ ಗಂಭೀರ ಗಾಯಗೊಂಡಿದ್ದಾರೆ. ನಾರಾಯಾಣಸ್ವಾಮಿಯನ್ನು ಸ್ಥಳೀಯ ಆಸ್ಪತ್ರೆಯಿಂದ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.