ಭಿಕ್ಷಾಟನೆಯ ಬಗ್ಗೆ ಗೊತ್ತು, ಅದರಲ್ಲಿ ಹೊಸತೇನಿದೆ ಎನ್ನುವವರೂ ಓದಲೇಬೇಕಾದ ಪುಸ್ತಕವಿದು. ತಮಿಳಿನ ಪ್ರಖ್ಯಾತ ಲೇಖಕ ಜೆಯಪ್ರಕಾಶ್​ ಬರೆದಿದ್ದಾದರೂ ಇಲ್ಲಿಯದೇ ಕಥೆ ಎಂಬಂತೆ ಓದಿಸಿಕೊಂಡು ಹೋಗುವುದು ಅನುವಾದಕಿ ಶಾಂತಿ ಅಪ್ಪಣ್ಣ ಅವರ ಸಾಮರ್ಥ್ಯಕ್ಕೆ ಸಾಕ್ಷಿ.

ರಜನಿ.ಎಂ.ಜಿ. ಮೆಟ್ರೋ ಬ್ಯೂರೋ ಮುಖ್ಯಸ್ಥೆ, ಸುವರ್ಣ ನ್ಯೂಸ್​​

ತಳಾತಳ - ಪುಸ್ತಕದ ಹೆಸರೇ ಹೇಳುವಂತೆ ಅದೊಂದು ಕ್ಷುದ್ರ ಲೋಕ. ಅಲ್ಲಿ ಇರುವವರಿಗೆ ಆತ್ಮವಿಲ್ಲ. ವಿಕಲಾಂಗರು, ಕುಬ್ಜರು, ರೋಗಿಗಳು, ಸದಾ ಕೀವು, ನೋವು, ಹೇಲು ಉಚ್ಚೆ, ಹೇನು ಹೀಗೆ ಮನುಷ್ಯ ಲೋಕದ ವಿಕಾರಗಳೇ ಇಲ್ಲಿಯ ಜೀವನ. ಭಿಕ್ಷಕರು ಹಾಗೂ ಆತನ ಧಣಿಯ ಜೀವನ-ವ್ಯವಹಾರವೇ ಈ ಪುಸ್ತಕ. ಭಿಕ್ಷಾಟನಾ ಮಾಫಿಯಾ ಲೋಕವನ್ನು ತೆರೆದಿಡುತ್ತಾ ಓದುಗನನ್ನು ತೀವ್ರ ವಿಷಾಧಕ್ಕೆ ದೂಡುತ್ತದೆಯಾದರೂ ಪುಸ್ತಕ ಮುಚ್ಚಲು ಸಾಧ್ಯವಾಗುವುದಿಲ್ಲ. ಸಂಭಾಷಣೆಯ ಮೂಲಕವೇ ಅವರ ಜೀವನ ಕಟ್ಟಿಕೊಟ್ಟ ಬಗೆ ಅಪೂರ್ವ ಒಳನೋಟವನ್ನು ನೀಡುತ್ತದೆ.

ಭಿಕ್ಷಾಟನೆಯ ಬಗ್ಗೆ ಗೊತ್ತು, ಅದರಲ್ಲಿ ಹೊಸತೇನಿದೆ ಎನ್ನುವವರೂ ಓದಲೇಬೇಕಾದ ಪುಸ್ತಕವಿದು. ತಮಿಳಿನ ಪ್ರಖ್ಯಾತ ಲೇಖಕ ಜೆಯಪ್ರಕಾಶ್​ ಬರೆದಿದ್ದಾದರೂ ಇಲ್ಲಿಯದೇ ಕಥೆ ಎಂಬಂತೆ ಓದಿಸಿಕೊಂಡು ಹೋಗುವುದು ಅನುವಾದಕಿ ಶಾಂತಿ ಅಪ್ಪಣ್ಣ ಅವರ ಸಾಮರ್ಥ್ಯಕ್ಕೆ ಸಾಕ್ಷಿ. ಕಥೆಯ ಆರಂಭದಲ್ಲೇ ಭಿಕ್ಷಕಿಯೊಬ್ಬಳಿಗೆ ಹೆರಿಗೆಯಾದಾಗ ಅಲ್ಲಿ ಎಲ್ಲರೂ ಕೇಳುವುದು ‘ಅದು ಈಯ್ತಾ?’ ಎಂದು. ಈಯಿತು ಎಂಬ ಪದವೇ ಸಾಮಾಜಿಕವಾಗಿ ಅವರಿಗಿರುವ ಸ್ಥಾನಮಾನವನ್ನು ತೋರಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ‘ತಿರುಪೆಗಳು’ ಸಾಕು ಪ್ರಾಣಿಯಂತೆ. ಅವರ ಸಂಪಾದನೆಯ ಸಾಮರ್ಥ್ಯಕ್ಕೆ ತಕ್ಕಂತೆ ಅವರಿಗೆ ಡಿಮ್ಯಾಂಡ್​. ಐಟಂ, ಮಾಲುಗಳು ಎಂದೆಲ್ಲಾ ಕರೆಸಿಕೊಳ್ಳುವ ಇವರನ್ನು ಮನಸ್ಸು ಇದೆ ಎಂಬುದಿರಲಿ, ಜೀವವಿದೆ ಎಂದೂ ಪರಿಗಣಿಸದ ಲೋಕ.

ಒಂದು ತೊಟ್ಟು ಪಾಯಸಕ್ಕಾಗಿ ಪರಿತಪಿಸುವಾಗ, ಹೊಟ್ಟೆಯಲ್ಲಿ ಹುಟ್ಟಿದ ಮಗುವಿಗೆ ಹಾಲು ಕೊಡುವುದಿಲ್ಲ ಎಂದು ಪ್ರತಿಭಟನೆ ಮಾಡುವಾಗ, ಪೊಲೀಸರಿಂದ ಬಿಡಿಸಲು ತಾಳಿ ಕಟ್ಟಿದವನನ್ನು ಗಂಡನೇ ಎಂದು ಭಾವಿಸುವಾಗ, ಹೃದಯ ಹಿಂಡುತ್ತದೆ. ಮನಸು ಭಾರವಾಗುತ್ತದೆ. ಇದು ಮನುಷ್ಯನ ಮನಸ್ಸಿನ ತಳಾತಳ ಶೋಧಿಸುವ ಕಾದಂಬರಿಯಾದರೂ ಎಲ್ಲವನ್ನೂ ಕಟ್ಟಿಕೊಟ್ಟಿರುವುದು ಸಂಭಾಷಣೆಗಳ ಮೂಲಕವೇ ಎನ್ನುವುದು ವಿಶೇಷ. ಭಿಕ್ಷಕರ ಧಣಿ ಪಂಡಾರಾಂ ವ್ಯಕ್ತಿ ಚಿತ್ರಣ, ಮನುಷ್ಯನ ಮನಸ್ಸಿನ ಆಳವನ್ನು ಪಾತಾಳಗರಡಿ ಹಾಕಿ ತೋರಿಸುತ್ತದೆ. ಯಾರನ್ನು ನಾವು ನಾಗರಿಕ, ಶ್ರೀಮಂತ, ಸಂಸ್ಕಾರವಂತರೆಂದು ಗುರುತಿಸುತ್ತೇವೆಯೋ ಅಂಥವರ ಮನಸ್ಸಿನ ಆಳದಲ್ಲಿರುವ ಅಪ್ಪಟ ಅನಾಗರಿಕ ಮೃಗತ್ವ ಇಲ್ಲಿ ಬಯಲಾಗುತ್ತಾ ಹೋಗುವುದು ಓದುಗನಿಗೆ ಒಂಥರಾ ಶಾಕ್​ ಟ್ರೀಟ್ಮೆಂಟ್​.

ಬೆಟ್ಟ ಹತ್ತಿ ದೇವರನ್ನು ನೋಡಲು ಹೋಗುವಾಗ ಮೆಟ್ಟಿಲ ಮೇಲೆ ಕುಳಿತ ಮನುಷ್ಯರತ್ತ ತಿರುಗಿಯೂ ನೋಡದ ನಮ್ಮ ಬಗ್ಗೆ, ನಮ್ಮ ಆಸ್ತಿಕತೆಯ ಬಗ್ಗೆ ಜಿಗುಪ್ಸೆ ಹುಟ್ಟಿಸಿಬಿಡುತ್ತದೆ ಈ ಪುಸ್ತಕ. ಲೋಕದ ಕಣ್ಣಿಗೆ ಪ್ರಾಣಿಗಿಂತಲೂ ಕಡೆಯಾದ, ಅಂಗವೈಕಲ್ಯದಿಂದಾಗಿ ಕನಿಷ್ಠ ಸೌಲಭ್ಯಗಳೂ ದೊರಕದ ಹೀನ ವಾತಾವರಣದಲ್ಲಿ ಬದುಕುವ ಈ ಭಿಕ್ಷಕರು, ಅದರ ನಡುವೆಯೇ ಸೃಷ್ಟಿಸಿಕೊಂಡ ಸಂಬಂಧಗಳು, ಪರಸ್ಪರ ಸಹಾಯ ಮಾಡುವ ಘಳಿಗೆಗಳು, ತಿಪ್ಪೆಯ ಮೇಲೆಯೇ ಅರಳಿದ ಸೌಗಂಧಿಕಾ ಪುಷ್ಪದಂತೆ ಭಾಸವಾಗುತ್ತದೆ. ಅದರಲ್ಲೂ ಡಾರ್ಕ್​ ಕಾಮಿಡಿಯನ್ನು ಬಳಸಿಕೊಂಡ ರೀತಿ ಇದೆಯಲ್ಲ, ಅದು ಅದ್ಭುತ. ಅಂಗವಿಕಲ ಮಗುವನ್ನು ರಜನಿಕಾಂತ್​​ ಎಂದು ಮುದ್ದಿಸುವುದು, ಕುಳಿತಲ್ಲಿಂದ ಏಳಲೂ ಆಗದ ಸೊಂಟ ಮುರಿದ ಭಿಕ್ಷುಕಿಯನ್ನು ರಾಜಕುಮಾರಿ ಎಂದು ಕರೆಯುವಂಥ ಸನ್ನಿವೇಶಗಳು ಹಾಸ್ಯದ ಮೂಲಕವೇ ವಿಷಣ್ಣತೆಯನ್ನು ಹುಟ್ಟುಹಾಕುವ ಶೈಲಿ ಲೇಖಕರ ಸಾಮರ್ಥ್ಯಕ್ಕೆ ಕನ್ನಡಿ ಹಿಡಿದಿದೆ.

ತನ್ನ ಮಕ್ಕಳನ್ನು ಅಷ್ಟೊಂದು ಪ್ರೀತಿಯಿಂದ ನೋಡುವ ಮನುಷ್ಯ, ಬೇರೆ ಮಕ್ಕಳತ್ತ ಅಷ್ಟೊಂದು ಕೌರ್ಯ ತೋರುವ ವಿಪರ್ಯಾಸ ನಮ್ಮನ್ನೂ ಕನ್ನಡಿಯಲ್ಲಿ ನೋಡಿಕೊಳ್ಳುವಂತೆ ಮಾಡುತ್ತದೆ. ಅದರಲ್ಲೂ ಎಲ್ಲೆಡೆ ತಾಯ್ತನವನ್ನು ಸೆಲೆಬ್ರೇಟ್​ ಮಾಡುವವರ ನಡುವೆ, ಪ್ರಾಣಿಗಳಿಗೆ ಗರ್ಭ ಕಟ್ಟಿಸುವಂತೆ ಬೇಕೆಂದೇ ನ್ಯೂನ ಇರುವ ಗಂಡಸನ್ನು ಕರೆತಂದು ಗರ್ಭಧಾರಣೆ ಮಾಡಿಸುವ ಸನ್ನಿವೇಶವಂತೂ ವಿಷಣ್ಣತೆಯನ್ನು ಹೆಪ್ಪುಗಟ್ಟಿಸಿಬಿಡುತ್ತದೆ. ಕಾದಂಬರಿಯುದ್ದಕ್ಕೂ ಇಂಥ ಹೃದಯವಿದ್ರಾವಕ ದೃಶ್ಯಗಳೇ ತುಂಬಿದ್ದರೂ ಪುಸ್ತಕ ಕೈಬಿಡಲಾಗದು. ಪೂರ್ತಿ ಓದಿದ ನಂತರ ಖಂಡಿತಾ ಎರಡು ದಿನ ಆ ಲೋಕದಿಂದ ಹೊರಬರಲು ಸಾಧ್ಯವಿಲ್ಲ. ಅದು ಈ ಪುಸ್ತಕದ ಯಶಸ್ಸು.

ತಳಾತಳ
ತಮಿಳು ಮೂಲ: ಏಳಾಂ ಉಳಗಂ
ಮೂಲ ಲೇಖಕ: ಜೆಯಮೋಹನ್,
ಕನ್ನಡ ಅನುವಾದ: ಶಾಂತಿ ಕೆ ಅಪ್ಪಣ್ಣ
ಬೆಲೆ: 260
ಛಂದ ಪುಸ್ತಕ ಪ್ರಕಾಶನ