ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಕಾನೂನು ಸುವ್ಯವಸ್ಥೆ ತೀರ ಹದಗೆಟ್ಟಿದ್ದು, ಪೊಲೀಸರಿಗೇ ರಕ್ಷಣೆ ಇಲ್ಲದಂತಾಗಿ ಜನಸಾಮಾನ್ಯರು ಆತಂಕದಲ್ಲಿದ್ದಾರೆ ಎಂದು ಮಾಜಿ ಸಚಿವ ನರಸಿಂಹ ನಾಯಕ್‌ (ರಾಜೂಗೌಡ) ಆರೋಪಿಸಿದ್ದಾರೆ.

ಯಾದಗಿರಿ (ಅ.15): ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಕಾನೂನು ಸುವ್ಯವಸ್ಥೆ ತೀರ ಹದಗೆಟ್ಟಿದ್ದು, ಪೊಲೀಸರಿಗೇ ರಕ್ಷಣೆ ಇಲ್ಲದಂತಾಗಿ ಜನಸಾಮಾನ್ಯರು ಆತಂಕದಲ್ಲಿದ್ದಾರೆ ಎಂದು ಮಾಜಿ ಸಚಿವ ನರಸಿಂಹ ನಾಯಕ್‌ (ರಾಜೂಗೌಡ) ಆರೋಪಿಸಿದ್ದಾರೆ. ಸುರಪುರದ ಕೃಷ್ಣಾ ನದಿಯಲ್ಲಿ ಅವ್ಯಾಹತವಾಗಿ ನಡೆದಿರುವ ಅಕ್ರಮ ಮರಳು ದಂಧೆಯ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರಪುರದಲ್ಲಿ ಕಾನೂನುಬಾಹಿರ ಕೃತ್ಯಗಳು ನಡೆಯುತ್ತಿವೆ. ಇದನ್ನು ತಡೆಯಲು ಮುಂದಾಗುವ ಪೊಲೀಸರ ಮೇಲೆಯೇ ಹಲ್ಲೆಗಳು ನಡೆಯುತ್ತಿದ್ದು, ಖಾಕಿಪಡೆಯೇ ಆತಂಕದಲ್ಲಿದೆ ಎಂದು ದೂರಿದರು.

‘ಸುರಪುರ ತಾಲೂಕಿನ ಕೃಷ್ಣಾ ನದಿ ಪ್ರದೇಶದಲ್ಲಿ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಟ ಎಗ್ಗಿಲ್ಲದೆ ನಡೆಯುತ್ತಿದೆ. 10-12 ದಿನಗಳ ಹಿಂದೆ ಎಎಸ್‌ಐ ನಿಂಗಣ್ಣ ಎಂಬುವವರು ಅಕ್ರಮ ಮರಳು ಸಾಗಾಟದ ಲಾರಿಯೊಂದನ್ನು ತಡೆದಿದ್ದಾರೆ. ಆಗ ದಂಧೆಕೋರರು ಪೊಲೀಸ್‌ ಅಧಿಕಾರಿಯನ್ನೇ ಹೆಡೆಮುರಿ ಕಟ್ಟಿ, ರಾಜಕೀಯ ಪ್ರಭಾವಿಯೊಬ್ಬರ ಫಾರ್ಮ್‌ಹೌಸ್‌ವೊಂದಕ್ಕೆ ಎತ್ತಾಕಿಕೊಂಡು ಹೋಗಿದ್ದಾರೆ. ಅಲ್ಲವರಿಗೆ ಥಳಿಸಿದ್ದಲ್ಲದೆ, ಮದ್ಯ ಕುಡಿಸಿ ಸಿನಿಮೀಯ ರೀತಿ ವಿಕೃತಿ ಮೆರೆದಿದ್ದಾರೆ.

ನಂತರ, ಸಹೋದ್ಯೋಗಿ ಒತ್ತೆಯಾಳಾಗಿರುವ ಸುದ್ದಿ ತಿಳಿದ ಪೊಲೀಸರು, ರಾತೋರಾತ್ರಿ ಫಾರ್ಮ್‌ಹೌಸಿಗೆ ತೆರಳಿ ರಾಜಕೀಯ ಪ್ರಭಾವಿಗಳೆದುರು ಮಂಡಿಯೂರಿ ಎಎಸ್‌ಐ ಅವರನ್ನು ಬಿಡುಗಡೆ ಮಾಡಿಸಿಕೊಂಡು ಬಂದಿದ್ದಾರೆ. ರಾಜಕೀಯ ಪ್ರಭಾವ ಹಾಗೂ ಪ್ರಾಣಭೀತಿಯಿಂದ ಎಎಸ್‌ಐ ದೂರಲು ಹಿಂದೇಟು ಹಾಕಿದ್ದಾರೆ’ ಎಂದು ರಾಜೂಗೌಡ ಗಂಭೀರ ಆರೋಪ ಮಾಡಿದ್ದಾರೆ. ಸುರಪುರ ಭಾಗದಲ್ಲಿ ಖಾಕಿಪಡೆಯೇ ರಕ್ಷಣೆಯಿಲ್ಲದೆ ಪರದಾಡುತ್ತಿರುವಾಗ, ಜನಸಾಮಾನ್ಯರ ಗತಿಯೇನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿದೆ ಎಂದು ರಾಜೂಗೌಡ ಹೇಳಿದರು.

ಸಹೋದ್ಯೋಗಿ ಒತ್ತೆಯಾಳಾಗಿರುವ ಸುದ್ದಿ ತಿಳಿದ ಪೊಲೀಸರು, ರಾತೋರಾತ್ರಿ ಫಾರ್ಮ್‌ಹೌಸಿಗೆ ತೆರಳಿ ರಾಜಕೀಯ ಪ್ರಭಾವಿಗಳೆದುರು ಮಂಡಿಯೂರಿ ಎಎಸ್‌ಐ ಅವರನ್ನು ಬಿಡುಗಡೆ ಮಾಡಿಸಿಕೊಂಡು ಬಂದಿದ್ದಾರೆ. ರಾಜಕೀಯ ಪ್ರಭಾವ ಹಾಗೂ ಪ್ರಾಣಭೀತಿಯಿಂದ ಎಎಸ್‌ಐ ದೂರಲು ಹಿಂದೇಟು ಹಾಕಿದ್ದಾರೆ.
- ನರಸಿಂಹ ನಾಯಕ್‌ (ರಾಜೂಗೌಡ), ಮಾಜಿ ಸಚಿವ.

ಎಎಸ್‌ಐ ಮೇಲೆ ಇಂತಹ ದೌರ್ಜನ್ಯ ಬಗ್ಗೆ ಸಮಗ್ರ ವರದಿ ನೀಡುವಂತೆ ಸಂಬಂಧಿತ ಠಾಣೆಗೆ ಸೂಚನೆ ನೀಡಿದ್ದೇನೆ. ಹಾಗೇನಾದರೂ ಆಗಿದ್ದಲ್ಲಿ, ಆರೋಪಿಗಳು ಎಷ್ಟೇ ಪ್ರಭಾವಿಯಾಗಿದ್ದರೂ ಅವರ ವಿರುದ್ಧ ಕ್ರಮಕ್ಕೆ ಹಿಂದೇಟು ಹಾಕುವುದಿಲ್ಲ.
-ಪೃಥ್ವಿಕ್ ಶಂಕರ್‌, ಎಸ್ಪಿ, ಯಾದಗಿರಿ.