ನನ್ನಿಂದ ತಪ್ಪಾಗಿದೆ. ದಯವಿಟ್ಟು ಇದರಿಂದ ನನಗೆ ಮುಕ್ತಿ ಕೊಡಿಸಿ, ಇಲ್ಲಿಗೆ ಸಾಕು. ಧರ್ಮಸ್ಥಳ ಕ್ಷೇತ್ರಕ್ಕೆ, ಸಮಗ್ರ ಜನತೆಗೆ,ಕರ್ನಾಟಕ ಜನತೆಗೆ ನಾನು ಕ್ಷಮೆ ಕೇಳುತ್ತಿದ್ದೇನೆ ಎಂದು ಸುಜಾತ್ ಭಟ್ ಹೇಳಿದ್ದಾರೆ.
ಬೆಂಗಳೂರು (ಆ.22) ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣದ ಜೊತೆ ಸುಜಾತಾ ಭಟ್ ದೂರು ಕೋಲಾಹಲ ಸೃಷ್ಟಿಸಿತ್ತು. ತನ್ನ ಮಗಳು ಅನನ್ಯಾ ಭಟ್ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ ಸುಜಾತಾ ಭಟ್ ಪ್ರಕರಣ ದೇಶಾದ್ಯಂತ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಈ ಪ್ರಕರಣ ಎಸ್ಐಟಿಗೆ ಹಸ್ತಾಂರವಾಗುತ್ತಿದ್ದಂತೆ ಒಂದೊಂದೆ ನಾಟಕ ಬಯಲಾಗುತ್ತಿದೆ. ಇದರ ಹಿಂದಿನ ಒಬ್ಬೊಬ್ಬ ಸೂತ್ರಧಾರರು ಜೈಲು ಸೇರುತ್ತಿದ್ದಾರೆ. ಇದೀಗ ಸುಜಾತಾ ಭಟ್, ತಾನು ಹೇಳಿದ ಮಗಳು ಅನನ್ಯಾ ಭಟ್ ಕತೆ ಸಂಪೂರ್ಣ ಸುಳ್ಳು ಎಂದಿದ್ದಾರೆ. ಗಿರೀಶ್ ಮಟ್ಟಣ್ಣನವರ್ ಹಾಗೂ ಟಿ ಜಯಂತ್ ಹೇಳಿದ ರೀತಿ ನಾನು ಸುಳ್ಳು ಹೇಳಿದೆ. ದಯವಿಟ್ಟು ಕ್ಷಮಿಸಿ, ನನ್ನಿಂದ ತಪ್ಪಾಗಿದೆ. ಧರ್ಮಸ್ಥಳ ಕ್ಷೇತ್ರಕ್ಕೆ, ಕರ್ನಾಟಕ ಜನತೆಗೆ, ದೇಶದ ಜನತೆಯಲ್ಲಿ ಕ್ಷಮೆಯಾಚಿಸುತ್ತಿದ್ದೇನೆ ಎಂದು ಸುಜಾತಾ ಭಟ್ ಇನ್‌ಸೈಟ್ ರಶ್ ಎಂಬ ಖಾಸಗಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಜನರ ಭಾವನೆಗೆ ಧಕ್ಕೆ ತಂದಿದ್ದೇನೆ, ದಯವಿಟ್ಟುಕ್ಷಮಿಸಿ
ಕರ್ನಾಟಕ ಜನತೆಗೆ ಸುಳ್ಳು ಹೇಳಿದ್ದೇನೆ. ನಾನು ಕ್ಷಮೆ ಕೋರುತ್ತಿದ್ದೇನೆ. ಧರ್ಮಸ್ಥಳಕ್ಕೆ, ಇಲ್ಲಿಗೆ ನನ್ನನ್ನು ಮುಕ್ತಿಗೊಳಿಸಿ. ನನ್ನ ಜೀವನವನ್ನು ನಾನು ರೂಢಿಸಿಕೊಂಡು ಹೋಗುತ್ತಿದ್ದೇನೆ. ದಯವಿಟ್ಟು ಕ್ಷಮಿಸಿ ಎಂದು ಸುಜಾತಾ ಭಟ್ ಸಂದರ್ಶನದಲ್ಲಿ ಹೇಳಿದ್ದಾರೆ. ಈ ವಯಸ್ಸಿನಲ್ಲಿ ನನಗೆ ಬೇಡವಾಗಿತ್ತು. ಇಲ್ಲಿಗೆ ಸಾಕು ಎಂದು ಸುಜಾತಾ ಭಟ್ ಹೇಳಿದ್ದಾರೆ.
ಅನನ್ಯಾ ಭಟ್ ಕತೆ ಹೇಳುವಂತೆ ಗಿರೀಶ್ ಮಟ್ಟಣ್ಣನವರ್ ಹೇಳಿಕೊಟ್ಟರು
ಅನನ್ಯಾ ಭಟ್ ಕಾಲ್ಪನಿಕ ಮಗಳನ್ನು ಸೃಷ್ಟಿಸುವಂತೆ ಗಿರೀಶ್ ಮಟ್ಟಣ್ಣನವರ್ ಹೇಳಿಕೊಟ್ಟರು. ಅವರು ಹೇಳಿದಂತೆ ನಾನು ಹೇಳಿದೆ. ಆದರೆ ಈ ಪ್ರಕರಣ ಈ ರೀತಿ ಪ್ರೊಪಗಾಂಡ ಮಾಡಲಾಗಿದೆ ಅನ್ನೋದು ಗೊತ್ತಿರಲಿಲ್ಲ. ನನ್ನನ್ನು ಕ್ಷಮಿಸಿ ಎಂದು ಇನ್‌ಸೈಟ್‌ರಶ್ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದಾರೆ.
ಧರ್ಮಸ್ಥಳ ವಿರುದ್ಧದ ಷಡ್ಯಂತ್ರ ಬಯಲು
ಧರ್ಮಸ್ಥಳ ವಿರುದ್ಧ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಷಡ್ಯಂತ್ರ ಒಂದೊಂದಾಗಿ ಬಯಲಾಗುತ್ತಿದೆ. ನೂರಾರು ಶವ ಹೂತಿಟ್ಟ ಪ್ರಕರಣದ ಉತ್ಖನನದಲ್ಲಿ ಬುರುಡೆ ಕತೆ ಬಯಲಾಗಿತ್ತು. ಇದರಿಂದ ಶವ ಉತ್ಖನನ ಕಾರ್ಯಾಚರಣೆಯನ್ನು ಸರ್ಕಾರ ಸ್ಥಗಿತಗೊಳಿಸಿದೆ. ಇತ್ತ ಧರ್ಮಸ್ಥಳ ವಿರುದ್ಧ ನಡೆಯುತ್ತಿರುವ ಷ್ಯಡಂತ್ರದಲ್ಲಿ ಪ್ರಮುಖವಾದ ಸುಜಾತಾ ಭಟ್ ಪುತ್ರಿ ಅನನ್ಯಾ ಭಟ್ ನಾಪತ್ತೆ ಪ್ರಕರಣದ ಅಸಲಿ ಕತೆಯನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಇಂಚಿಂಚು ಬಿಚ್ಚಿಟ್ಟಿತು. ಇದೀಗ ಸ್ವತಃ ಸುಜಾತಾ ಭಟ್ ತಾನು ಹೇಳಿದ್ದೆಲ್ಲಾ ಸುಳ್ಳು, ಅನನ್ಯಾ ಭಟ್ ಅನ್ನೋ ಮಗಳೇ ಇಲ್ಲ ಎಂದು ಸುಜಾತಾ ಭಟ್ ಸ್ಪಷ್ಟಪಡಿಸಿದ್ದಾರೆ.

