stray dog attack in Karnataka: ಚಿಕ್ಕಬಳ್ಳಾಪುರದಲ್ಲಿ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಯ ಮೇಲೆ ನಾಯಿ ದಾಳಿ ಮಾಡಿದೆ. ಮತ್ತೊಂದೆಡೆ, ಮಂಡ್ಯದಲ್ಲಿ ಬೀದಿನಾಯಿಗಳು ಮಕ್ಕಳು ಸೇರಿದಂತೆ 18ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.

ಚಿಕ್ಕಬಳ್ಳಾಪುರ (ಸೆ.28): ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ನಡೆಸುವ ವೇಳೆ ಗಣತಿದಾರ ಶಿಕ್ಷಕಿಗೆ ನಾಯಿ ಕಡಿದು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಗರದಲ್ಲಿ ಶನಿವಾರ ನಡೆದಿದೆ. 

ಗಣತಿದಾರ ಶಿಕ್ಷಕಿಯನ್ನು ಕೂತನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ರಜನಿ ಎಂದು ಗುರ್ತಿಸಲಾಗಿದೆ. ನಗರದ ತಿಮ್ಮಕ್ಕ ಲೇಔಟ್‌ನ ಪಿಡಿಒ ನಾರಾಯಣಸ್ವಾಮಿ ಅವರ ಮನೆಯಲ್ಲಿ ಸಮೀಕ್ಷೆ ಮುಗಿಸಿ ಹೊರಬರುತ್ತಿರುವಾಗ ಮನೆಯಲ್ಲಿದ್ದ ನಾಯಿ ದಾಳಿ ಮಾಡಿ ಶಿಕ್ಷಕಿಯನ್ನು ಕಚ್ಚಿ ಗಾಯಗೊಳಿಸಿದೆ. 

ತಕ್ಷಣ ಜಿಲ್ಲಾಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದ ರಂಜನಿ ಅವರಿಗೆ ವೈದ್ಯರು ಪ್ರತಿ ದಿನ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಸೂಚಿಸಿದ್ದಾರೆ. ನಮಗೆ ಪರಿಚಯವಿಲ್ಲದ, ಗೊತ್ತಿಲ್ಲದ ಪ್ರದೇಶಗಳಲ್ಲಿ ಸಮೀಕ್ಷೆಗೆ ನಿಯೋಜನೆ ಮಾಡಿದ್ದಾರೆ. ಯಾವ ಮನೆಯಲ್ಲಿ ಅಥವಾ ಬೀದಿಯಲ್ಲಿ ನಾಯಿಗಳು ದಾಳಿ ನಡೆಯುತ್ತವೆಯೋ ಗೊತ್ತಿಲ್ಲ ಎಂದು ಗಣತಿದಾರರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಬೀದಿ ನಾಯಿಗಳಿಗೆ ಊಟ ಹಾಕಿದ್ದು ತಪ್ಪೆಂದು ಬೆಂಗಳೂರಿನಲ್ಲಿ ಮಹಿಳೆ ಮೇಲೆ ಗ್ಯಾಂಗ್ ಹಲ್ಲೆ!

ಮಂಡ್ಯದಲ್ಲಿ ಬೀದಿನಾಯಿಗಳ ದಾಳಿಗೆ 18ಕ್ಕೂ ಹೆಚ್ಚು ಮಂದಿ ಗಂಭೀರ ಗಾಯ:

ಬೀದಿ ನಾಯಿಗಳು ದಾಳಿಯಿಂದ ಎಂಟು ಮಕ್ಕಳು ಸೇರಿದಂತೆ 18 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಶುಕ್ರವಾರ ಬೆಳಗ್ಗೆ ಮತ್ತು ಶನಿವಾರ ಮುಸ್ಲಿಂ ಬ್ಲಾಕ್, ಚನ್ನಪಟ್ಟಣ ರಸ್ತೆ, ಕನಕಪುರ ರಸ್ತೆ ಸೇರಿದಂತೆ ವಿವಿಧಡೆ ಒಟ್ಟು 18 ಜನರಿಗೆ ಬೀದಿ ನಾಯಿಗಳು ಕಡಿದು ತೀವ್ರವಾಗಿ ಗಾಯಗೊಳಿಸಿವೆ. ಗಂಭೀರವಾಗಿ ಗಾಯಗೊಂಡವರನ್ನು ಹಲಗೂರಿನಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಹೆಚ್ಚಿನ ಚಿಕಿತ್ಸೆಗಾಗಿ ಮಳವಳ್ಳಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನಾಯಿಗಳ ಕಡತಕ್ಕೆ ಮಕ್ಕಳಾದ ಅದಿತ್ ಕುಮಾರ್, ಸ್ವೀಟಿ ಕುಮಾರಿ, ಮೊಹಮದ್ ನಾಸಿರ್, ಶಾಫ, ಯಾಸೀನ್, ಅಯಿಷಾ ಭಾನು, ಸಿಮ್ರಾನ್, ಹನೀಫ್, ಯುವಕರಾದ ಮುರುಗನ್, ಗಣೇಶ್, ಮಂಜು, ಮುಮಿದ್ ಅಲಂ, ಅಮರ್, ಪುಟ್ಟಸ್ವಾಮಿ, ಮಂಜು, ದಳವಾಯಿ ಕೋಡಿಹಳ್ಳಿ ಪುಟ್ಟಸ್ವಾಮಿ, ಕೊಳ್ಳೇಗಾಲ ಮಂಜು, ಮಂಡ್ಯ ಮೂಲದ ನಾಗೇಶ್ ಎಂಬುವವರು ಒಳಗಾಗಿದ್ದಾರೆ.

ಆಟವಾಡುವ ಮಕ್ಕಳ ಮೇಲೆ ಬೀದಿನಾಯಿಗಳು ದಾಳಿ

ಶುಕ್ರವಾರ ಸಂಜೆ ಮಕ್ಕಳು ಆಟವಾಡುತ್ತಿದ್ದಾಗ ಬೀದಿ ನಾಯಿಗಳು ಏಕಾಏಕಿ ದಾಳಿ ಮಾಡಿ ಹಲವು ಮಕ್ಕಳನ್ನು ಗಾಯಗೊಳಿಸಿವೆ. ನಂತರ ಮನೆ ನಿರ್ಮಾಣ ಕೆಲಸಕ್ಕೆ ಬಂದಿದ್ದ ಕೂಲಿ ಕಾರ್ಮಿಕರ ಮೇಲೂ ದಾಳಿ ಮಾಡಿವೆ. ಬೀದಿ ನಾಯಿಗಳ ಹಿಂಡು ಶನಿವಾರ ಬೆಳಗ್ಗೆಯೂ ಸಹ ದಾಳಿ ಮುಂದುವರಿಸಿವೆ.

ವೃದ್ಧರ ಮೇಲೂ ದಾಳಿ:

ಹಲಗೂರಿನ ವೃದ್ಧರ ಮೇಲೂ ದಾಳಿ ಮಾಡಿ ಗಾಯಗೊಳಿಸಿವೆ. ನಿರಂತರ ಬೀದಿ ನಾಯಿ ದಾಳಿಯಿಂದಾಗಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಹೊರಗೆ ಓಡಾಡಲು ಭಯ ಪಡುತ್ತಿದ್ದಾರೆ.

ಬೆಳಗಿನ ಜಾವ ಪತ್ರಿಕೆ ವಿತರಿಸುವ ಯುವಕರು ಹಾಗೂ ಹಾಲು ವಿತರಿಸುವವರಿಗೂ ನಾಯಿಗಳ ಹಾವಳಿಯಿಂದ ತೊಂದರೆ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಬೀದಿನಾಯಿ ಡೆಡ್ಲಿ ಅಟ್ಯಾಕ್! ಶಾಲಾ ಆವರಣದಲ್ಲಿ ಆಟವಾಡ್ತಿದ್ದ ಮಗುವಿನ ಮೇಲೆ ದಾಳಿ, ಗಂಭೀರ ಗಾಯ

ಬೀದಿನಾಯಿಗಳ ಹಾವಳಿಗೆ ಆತಂಕ:

ಹಲಗೂರು ಸೇರಿದಂತೆ ಹೋಬಳಿಯದಂತ ನಾಯಿಗಳ ಅವಳಿ ಹೆಚ್ಚಾಗಿದೆ. ಬೀದಿ ಬೀದಿಗಳಲ್ಲಿ ಹೆಚ್ಚಿರುವ ನಾಯಿಗಳಿಂದ ಜನರು, ಮಕ್ಕಳು ಓಡಾಡುವುದಕ್ಕೂ ಭಯಪಡುವ ಪರಿಸ್ಥಿತಿ ತಲೆದೂರಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಬಗ್ಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೆ.ಚೆಂದಿಲ್ ಸಂಪರ್ಕಿಸಿದಾಗ, ಹಲಗೂರು ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ನಾಯಿಗಳ ಹಾವಳಿ ಜಾಸ್ತಿಯಾಗಿರುವ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ಮುಂದಿನ ನಾಲ್ಕೈದು ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.