ಧರ್ಮಸ್ಥಳ ಎಸ್ಐಟಿ ಕಾರ್ಯಾಚರಣೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಎಸ್ಐಟ್ ಮುಖ್ಯಸ್ಥ ಪ್ರಣವ್ ಮೊಹಾಂತಿ ಹಾಗೂ ಡಿಐಜಿ ಅನುಚೇತ್ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗಿ 45 ನಿಮಿಷ ಚರ್ಚಿಸಿದ್ದಾರೆ.
ಬೆಂಗಳೂರು (ಆ.13) ಧರ್ಮಸ್ಥಳದ ಪ್ರಕರಣ ಸಂಬಂಧ ಮಹತ್ವದ ಬೆಳವಣಿಗೆ ನಡೆಯುತ್ತಿದೆ. ನೂರಾರು ಶವ ಹೂತಿಡಲಾಗಿದೆ ಅನ್ನೋ ಆರೋಪದ ಶಕ್ತಿ ಕುಂದುತ್ತಿದೆ. ಪ್ರಮುಖವಾಗಿ ಎಸ್ಐಟಿ ಶವ ಶೋಧನೆಯಲ್ಲಿ 13 ಪಾಯಿಂಟ್ ಸೇರಿದಂತೆ ಇತರ ಪಾಯಿಂಟ್ ಉತ್ಖನನ ನಡೆಸಿದರೂ ಒಂದು ಸ್ಥಳ ಬಿಟ್ಟು ಇತರ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಇಂದು 13ನೇ ಪಾಯಿಂಟ್ 2ನೇ ಭಾಗದ ಉತ್ಖನನದಲ್ಲೂ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಇದರ ಬೆನ್ನಲ್ಲೇ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೋಹಾಂತಿ, ಡಿಐಜಿ ಅನುಚೇತ್ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗಿ ಚರ್ಚಿಸಿದ್ದಾರೆ. ಬರೋಬ್ಬರಿ 45 ನಿಮಿಷಗಳ ಕಾಲ ಅಧಿಕಾರಿಗಳು ಸಿದ್ಧರಾಮಯ್ಯ ಜೊತೆ ಚರ್ಚಿಸಿದ್ದಾರೆ.
ಎಸ್ಐಟಿ ಕಾರ್ಯಾಚರಣೆ ಮಾಹಿತಿ ಪಡೆದುಕೊಂಡು ಸಿದ್ದರಾಮಯ್ಯ
ಪ್ರಣವ್ ಮೊಹಾಂತಿ ಜೊತೆ ಸಿದ್ದರಾಮಯ್ಯ ಒನ್ ಟು ಒನ್ ಚರ್ಚೆ ನಡೆಸಿದ್ದಾರೆ. ಪ್ರಣವ್ ಮೊಹಾಂತಿ ಇಂದು ಗೃಹ ಸಚಿವ ಜಿ ಪರಮೇಶ್ವರ ಭೇಟಿಯಾಗಿ ಚರ್ಚೆ ನಡೆಸಿದ್ದರು. ಇದಾದ ಬಳಿಕ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ. ತನಿಖೆಯಲ್ಲಿ ನಡೆದಿರುವ ಬೆಳವಣಿಗೆ, ಶವ ಶೋಧ ಕಾರ್ಯಾಚರಣೆ, ಇದೇ ವೇಳೆ ದಾಖಲಾದ ಇತರ ದೂರು, ದೂರುದಾರ ನೀಡಿರುವ ಮಾಹಿತಿಗಳ ಕುರಿತು ಸಿದ್ದರಾಮಯ್ಯ ಜೊತೆ ಮೊಹಾಂತಿ ಚರ್ಚಿಸಿದ್ದಾರೆ.
ಎಸ್ಐಟಿ ಶವ ಶೋಧನೆಗೆ ಬೀಳುತ್ತಾ ಬ್ರೇಕ್?
ಶಾಸಕಾಂಗ ಸಭೆಯಲ್ಲಿ ಧರ್ಮಸ್ಥಳ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚಿಸಿದ್ದರು. ಎಸ್ಐಟಿ ತನಿಖೆಗೆ ಜನರಲ್ಲಿ ವಿಶ್ವಾಸ ಮೂಡಿದೆ. ಭಾವನಾತ್ಮಕವಾಗಿ ಮಾತನಾಡುವುದು ಬೇಡ. 13ನೇ ಸ್ಥಳದಲ್ಲೂ ಯಾವುದೇ ಕಳೇಬರ ಪತ್ತೆಯಾಗದಿದ್ದರೆ, ಶವ ಶೋಧನೆ ಸ್ಥಿಗತಗೊಳಿಸುವ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಸಿದ್ದಾರಾಮಯ್ಯ ಹೇಳಿದ್ದರು. ಇದೀಗ 13ನೇ ಸ್ಥಳಧ ಎರಡನೇ ಭಾಗದಲ್ಲೂ 18 ಅಡಿ ಆಳ ಅಗೆದರೂ ಯಾವುದೇ ಕಳೇಬರ ಪತ್ತೆಯಾದ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಜೊತೆ ಪ್ರಣವ್ ಮೊಹಾಂತಿ ಭೇಟಿಯಾಗಿರುವುದು ಮಹತ್ವ ಪಡೆದುಕೊಂಡಿದೆ.
18 ಅಡಿ ಆಳ ಅಗೆದರೂ ಕಳೇಬರ ಇಲ್ಲ
ಮುಸುಕುದಾರಿ ದೂರುದಾರ ಸ್ಥಳ ಮಹಜರು ವೇಳೆ 13 ಪಾಯಿಂಟ್ ಗುರುತಿಸಿದ್ದ. ಈ ಪೈಕಿ 12 ಪಾಯಿಂಟ್ ಉತ್ಖನನ ಮಾಡಿ 13ನೇ ಪಾಯಿಂಟ್ ಬಾಕಿ ಉಳಿಸಲಾಗಿತ್ತು. 6ನೇ ಪಾಯಿಂಟ್‌ನಲ್ಲಿ ಪುರುಷನ ಕಳೇಬರ ಪತ್ತೆಯಾಗಿತ್ತು. ಇದನ್ನು ಹೊರತುಪಡಿಸಿದರೆ ಅನಾಮಿಕ ಗುರುತಿಸಿದ ಇನ್ಯಾವುದೇ ಸ್ಥಳದಲ್ಲಿ ಕಳೇಬರ ಪತ್ತೆಯಾಗಿಲ್ಲ. ಆಗಸ್ಟ್ 12 ಹಾಗೂ ಆಗಸ್ಟ್ 13ರಂದು ದೂರುದಾರ ಗುರುತಿಸಿದ 13ನೇ ಪಾಯಿಂಟ್ ಉತ್ಖನನ ನಡೆದಿತ್ತು. 13ನೇ ಪಾಯಿಂಟ್ ಹಾಗೂ 13ನೇ ಬಾಯಿಂಟ್ ಭಾಗ 2ರಲ್ಲೂ ಉತ್ಖನನ ಮಾಡಲಾಗಿತ್ತು. ಎರಡೂ ಕಡೆ ಬರೋಬ್ಬರಿ 18 ಅಡಿ ಆಳ ಅಗೆಯಾಗಿತ್ತು. ರೇಡಾರ್ ತಂತ್ರಜ್ಞಾನ ಬಳಸಲಾಗಿತ್ತು. ಎರಡು ಹಿಟಾಚಿ ಬಳಸಿ ಅಗೆದರೂ ಯಾವುದೇ ಕಳೇಬರ ಪತ್ತೆಯಾಗಿಲ್ಲ.
ದೂರುದಾರ ನೇತ್ರಾವತಿ ಸ್ನಾಘಟ್ಟದ ಬಳಿಕ 13 ಪಾಯಿಂಟ್ ಗುರುತಿಸಿದ್ದ. ಇದರ ಜೊತೆಗೆ ಉತ್ಖನನ ನಡೆದುವೆ ಕಲ್ಲೇರಿ ಸಮೀಪದ ಕಾಡು, ಬೊಳಿಯಾರ್ ಕಾಡಿನಲ್ಲೂ ಉತ್ಖನನ ಮಾಡಲಾಗಿತ್ತು. ಇಲ್ಲೂ ಕೂಡ ಯಾವುದೇ ಕಳೇಬರ ಪತ್ತೆಯಾಗಲಿಲ್ಲ. ಹೀಗಾಗಿ ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟಿದ್ದೇನೆ ಅನ್ನೋ ಆರೋಪ ಹುಸಿಯಾಗುತ್ತಿದೆ ಅನ್ನೋ ವಾದಗಳು ಕೇಳಿಬರುತ್ತಿದೆ. ಧರ್ಮಸ್ಥಳದ ಭಕ್ತರು ರಾಜ್ಯದ ಹೆಲೆವೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ದೂರುದಾರನ ತನಿಖೆಗೆ ಒಳಪಡಿಸುವಂತೆ ಆಗ್ರಹಿಸುತ್ತಿದ್ದಾರೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಅನ್ನೋ ಕೂಗು ರಾಜ್ಯದ್ಯಂತ ಕೇಳಿಬರುತ್ತಿದೆ.
