ಧರ್ಮಸ್ಥಳದ ಬಗ್ಗೆ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಆ.16ರಂದು ಯಲಹಂಕದಿಂದ ಧರ್ಮಸ್ಥಳಕ್ಕೆ ಬೃಹತ್ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಇನ್ನೂರಕ್ಕೂ ಹೆಚ್ಚು ಕಾರುಗಳಲ್ಲಿ ಭಕ್ತರು ಧರ್ಮಸ್ಥಳಕ್ಕೆ ತೆರಳಿ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲಿದ್ದಾರೆ.
ಬೆಂಗಳೂರು (ಆ.13): ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಆ.16ರಂದು ಧರ್ಮಸ್ಥಳಕ್ಕೆ ಇನ್ನೂರಕ್ಕೂ ಅಧಿಕ ಕಾರುಗಳಲ್ಲಿ ತೆರಳಲು ತೀರ್ಮಾನಿಸಲಾಗಿದೆ.
ಧರ್ಮಸ್ಥಳದ ಬಗ್ಗೆ ದೊಡ್ಡ ಮಟ್ಟದ ಅಪಪ್ರಚಾರ ನಡೆಯುತ್ತಿದೆ. ಎಸ್‌ಐಟಿ ತನಿಖೆ ಸ್ವಾಗತಿಸುತ್ತೇವೆ. ಆದರೆ, ಇದರ ನೆಪದಲ್ಲಿ ಕೆಲ ಕಿಡಿಗೇಡಿಗಳು ಧರ್ಮಸ್ಥಳದ ಪಾವಿತ್ರ್ಯತೆ, ಮಂಜುನಾಥಸ್ವಾಮಿಯ ಪ್ರಭಾವ ಕುಂದಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಯಲಹಂಕ ಕ್ಷೇತ್ರದಿಂದ ನಮ್ಮ ಮುಖಂಡರು ಹಾಗೂ ನಾಗರಿಕರು ಆ.16ರಂದು ಇನ್ನೂರಕ್ಕೂ ಅಧಿಕ ಕಾರುಗಳಲ್ಲಿ ಧರ್ಮಸ್ಥಳಕ್ಕೆ ತೆರಳಲು ನಿರ್ಧರಿಸಿದ್ದೇವೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.
ಅಂದು ಬೆಳಗ್ಗೆ 6 ಗಂಟೆಗೆ ತಮ್ಮ ಸ್ವಗ್ರಾಮ ಸಿಂಗನಾಯಕನಹಳ್ಳಿಯಿಂದ ಧರ್ಮಸ್ಥಳದತ್ತ ಪ್ರಯಾಣ ಬೆಳೆಸಲಿದ್ದೇವೆ. ಬಳಿಕ ಮಂಜುನಾಥಸ್ವಾಮಿಯ ದರ್ಶನ ಪಡೆದು ಕ್ಷೇತ್ರದ ಪಾವಿತ್ರ್ಯಕ್ಕೆ ಭಂಗ ತರುವ ದುಷ್ಟರಿಗೆ ಶಿಕ್ಷೆ ನೀಡುವಂತೆ ಪ್ರಾರ್ಥಿಸುತ್ತೇವೆ. ಮಾರನೇ ದಿನ ಅಲ್ಲಿಂದ ವಾಪಾಸ್ ಆಗಲಿದ್ದೇವೆ. ಹೀಗಾಗಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ವಿಶ್ವನಾಥ್ ಮನವಿ ಮಾಡಿದ್ದಾರೆ.
