ಸವದತ್ತಿ ತಾಲೂಕಿನಾದ್ಯಂತ ಭಾರೀ ಮಳೆ ಹಿನ್ನೆಲೆ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೂ ಹಳ್ಳದ ನೀರು ನುಗ್ಗಿದೆ. ಗರ್ಭಗುಡಿಯಲ್ಲಿ 3 ಅಡಿಯಷ್ಟು ನೀರು ತುಂಬಿಕೊಂಡಿದೆ.
ಬೆಳಗಾವಿ (ಆ.08) ರಾಜ್ಯದ ಕೆಲ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ನಿರಂತರ ಮಳೆ ಸುರಿಯುತ್ತಿರುವ ಕಾರಣ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಬೆಳಗಾವಿಯಲ್ಲಿ ಸತತ 2 ಗಂಟೆ ಸುರಿದ ಮಳೆಗೆ ರಸ್ತೆಗಳು ಜಲಾವೃತಗೊಂಡಿದೆ. ಧಾರಾಕಾರ ಮಳೆಗೆ ಹಳ್ಳಗಳು ಉಕ್ಕಿ ಹರಿದಿದೆ. ಇದರ ಪರಿಣಾಮ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸುಪ್ರಸಿದ್ಧ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೂ ಹಳ್ಳದ ನೀರು ನುಗ್ಗಿದೆ. ಯಲ್ಲಮ್ಮ ದೇವಸ್ಥಾನದ ಪಕ್ಕದಲ್ಲೇ ಹರಿದು ಹೋಗುವ ಹಳ್ಳದ ನೀರು ಉಕ್ಕಿ ದೇವಸ್ಥಾನಕ್ಕೆ ನುಗ್ಗಿದೆ. ದೇವಸ್ಥಾನದ ಗರ್ಭಗುಡಿಯಲ್ಲಿ 3 ಅಡಿಗಳಷ್ಟು ನೀರು ತುಂಬಿಕೊಂಡಿದೆ.
ಮಳೆ ನೀರಿಗೆ ಕೊಚ್ಚಿದ ವಾಹನ
ಹಳ್ಳ ತುಂಬಿ ನೀರು ಸವದತ್ತಿ ಎಲ್ಲಮ್ಮ ದೇವಸ್ಥಾನದ ಒಳಗೆ ನುಗ್ಗಿದರೆ ರಸ್ತೆಗಳ ಮೇಲೆ ನೀರು ರಭಸವಾಗಿ ಹರಿದಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್,ಸ್ಕೂಟರ್ ನೀರಿನಲ್ಲಿ ಕೊಚ್ಚಿಹೋಗಿದೆ. ತಗ್ಗು ಪ್ರದೇಶಗಳ ರಸ್ತೆಗಳು ನದಿಯಂತಾಗಿ ಹರಿದಿದೆ. ಭಾರಿ ಪ್ರಮಾಣದ ಮಳೆಗೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕು ರಸ್ತೆಗಳು, ತಗ್ಗುಪ್ರದೇಶ ನೀರಿನಲ್ಲಿ ಮುಳುಗಿದೆ.
ಮನೆಗಳಿಗೆ ನುಗ್ಗಿದ ನೀರು
ವಿಜಯಪುರದಲ್ಲಿ ಇಂದು ಕೂಡ ಮಳೆ ಅಬ್ಬರಿಸಿದೆ. 2ಗಂಟೆಗೂ ಹೆಚ್ಚು ಕಾಲ ಮಳೆ ಸುರಿದ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿಜಯಪುರ ನಗರ ಸೇರಿದಂತೆ ಹಲವು ಭಾಗದಲ್ಲಿ ಸತತ ಮಳೆಯಾಗಿದೆ. ಸ್ಟೇಷನ್ ರಸ್ತೆ, ಶಾಪೇಟೆ, ರಾಮ ನಗರ, ಫಿರದೋಸ್ ನಗರ, ಗಣೇಶ ನಗರ, ಲಕ್ಷಣ ನಗರ ಹಾಗೂ ಇತರೆ ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಜನರು ಆತಂಕಗೊಂಡಿದ್ದಾರೆ. ಮನೆಗಳಲ್ಲಿದ್ದ ವಸ್ತುಗಳು ನೀರಿನಲ್ಲಿ ಮುಳುಗಿದೆ. ಅಗತ್ಯ ವಸ್ತುಗಳು, ಅಕ್ಕಿ ಸೇರಿದಂತೆ ಪಡಿತರ ನೀರಿನಲ್ಲಿ ಮುಳುಗಿದೆ. ಮನೆಗಳಿಗೆ ಹೊಕ್ಕ ಮಳೆ ನೀರನ್ನು ಹೊರ ಹಾಕಲು ಜನರು ಹರ ಸಾಹಸ ಪಡುತ್ತಿದ್ದಾರೆ.
ಡೋಣಿ ನದಿ ತೀರದಲ್ಲಿ ಪ್ರವಾಹದ ಆತಂಕ
ರಾತ್ರಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿಜಯಪುರದ ರಾಮನಗರ, ರಾಜಾಜಿನಗರದಲ್ಲಿ ಧಾರಾಕಾರ ಮಳೆಯಿಂದ ಮಳೆಯಿಂದ ಹೋಟೆಲ್ ಅಂಗಡಿಗಳು, ಮನೆಗಳಿಗೆ ಮಳೆ ನೀರು ನುಗ್ಗಿದೆ. ಮಳೆಯಿಂದ ಡೋಣಿ ನದಿ ತೀರದಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಈಗಾಗಲೇ ಡೋಣಿನದಿಗೆ ಕಟ್ಟಿರೋ ಕೆಲ ಸೇತುವೆ ಜಲಾವೃತವಾಗಿವೆ. ಮೋಡ ಕವಿದ ವಾತಾವರಣವಿದ್ದು ಮತ್ತಷ್ಟು ಮಳೆಯಾಗೋ ಸಾಧ್ಯತೆ ಇದೆ.
ಧಾರವಾಡ ಜಿಲ್ಲೆಯಾದ್ಯಂತ ಭಾರಿ ಮಳೆ
ಧಾರವಾಡ ಜಿಲ್ಲೆಯ ಜಿಲ್ಲೆಯ ನವಲಗುಂದ ತಾಲೂನಾದ್ಯಂತ ಭಾರಿ ಮಳೆಯಾಗಿದೆ. ಮಳೆಯಿಂದ ಎರಡು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸಂಪರ್ಕ ಕಡಿತಗೊಂಡಿದ್ದರೂ ಜನರು ಸೇತುವೆ ದಾಟುವ ಸಾಹಸ ಮಾಡುತ್ತಿದ್ದಾರೆ. ಸೇತುವೆ ಮೇಲಿನಿಂದ ನೀರು ಹರಿಯುತ್ತಿದ್ದರೂ, ಜನರು ಹುಚ್ಚು ಸಾಹಸ ಮಾಡುತ್ತಿದ್ದಾರೆ.
