ವಿಧಾನಮಂಡಲ ಅಧಿವೇಶನದಲ್ಲಿ ಸಚಿವರಿಬ್ಬರ ನಡುವಿನ 'ಜುಗಲ್‌ಬಂದಿ' ಪ್ರತಿಪಕ್ಷ ಶಾಸಕರಿಗೆ ಹಾಸ್ಯದ ರಸದೌತಣ ಉಣಬಡಿಸಿತು. ರಸ್ತೆ ಗುಂಡಿಗಳ ಚರ್ಚೆಯೂ ನಗೆಯ ಹೊನಲು ಹರಿಸಿತು. ಟನಲ್ ರಸ್ತೆ ನಿರ್ಮಾಣದ ಪ್ರಸ್ತಾಪದ ಜೊತೆಗೆ ಭೂಲೋಕ, ಆಕಾಶ, ಪಾತಾಳದಲ್ಲೂ ರಸ್ತೆ ನಿರ್ಮಾಣದ ಬಗ್ಗೆ ಚರ್ಚೆ ನಡೆಯಿತು.

ಸಾಮಾನ್ಯವಾಗಿ ಸಿನಿಮಾಗಳಲ್ಲಿ ಶೂಟಿಂಗ್‌ ವೇಳೆ ಧ್ವನಿ ನೀಡಲು ಸಾಧ್ಯವಾಗದಿದ್ದರೆ ಡಬ್ಬಿಂಗ್‌ ಮಾಡಲಾಗುತ್ತದೆ. ಹಾಗೆಯೇ, ಹಾಡುಗಳನ್ನು ಮೊದಲು ಚಿತ್ರೀಕರಿಸಿ ನಂತರ ಹಿನ್ನೆಲೆ ಗಾಯನವನ್ನು ಅದಕ್ಕೆ ಸೇರಿಸಲಾಗುತ್ತದೆ. ಈ ಬಾರಿಯ ವಿಧಾನಮಂಡಲ ಅಧಿವೇಶನದಲ್ಲೂ ಸಚಿವರಿಬ್ಬರ ಜುಗಲ್‌ಬಂದಿ ಸಿನೆಮಾ ಮೇಕಿಂಗ್‌ ರೀತಿಯಲ್ಲೇ ಇತ್ತು. ಅದಕ್ಕೆ ವಿರೋಧ ಪಕ್ಷದ ಶಾಸಕರು ಮಾತ್ರ ಹಾಸ್ಯಭರಿತವಾಗಿ ಆಕ್ಷೇಪ ವ್ಯಕ್ತಪಡಿಸಿ ಸಚಿವದ್ವಯರ ಕಾಲೆಳೆದಿದ್ದು ಮಜವಾಗಿತ್ತು.

ಪೌರಾಡಳಿತ ಇಲಾಖೆಗೆ ಸಂಬಂಧಿಸಿದ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆಯಲು ಇಬ್ಬರು ಸಚಿವರು ನಡೆಸಿದ ಕಸರತ್ತು ಪ್ರತಿಪಕ್ಷಕ್ಕೆ ಜುಗಲ್‌ ಬಂದಿ ರೀತಿ ಕಾಣಿಸಿತ್ತು.

ಏನಾಯ್ತು ಅಂದ್ರೆ, ಕರ್ನಾಟಕ ಮುನಿಸಿಪಾಲಿಟಿಗಳ ತಿದ್ದುಪಡಿ ವಿಧೇಯಕ ಮಂಡಿಸಿದ ಪೌರಾಡಳಿತ ಸಚಿವ ರಹೀಂಖಾನ್‌ ಅದರ ಬಗ್ಗೆ ವಿವರಣೆ ನೀಡಲು ತಡಬಡಾಯಿಸಿದರು. ಆಗ ಅವರ ಪಕ್ಕದಲ್ಲೇ ಕೂತಿದ್ದ ಮತ್ತೊಬ್ಬ ಸಚಿವ ಬಿ.ಎಸ್.ಸುರೇಶ್‌, ವಿಧೇಯಕದ ಅಂಶಗಳನ್ನು ಮೆಲುಧ್ವನಿಯಲ್ಲಿ ರಹೀಂಖಾನ್‌ ಅವರಿಗೆ ಹೇಳುತ್ತಿದ್ದರು. ಆದರೆ ಸುರೇಶ್‌ ಸಣ್ಣ ಧ್ವನಿಯಲ್ಲಿ ಹೇಳುತ್ತಿದ್ದದ್ದು ವಿರೋಧ ಪಕ್ಷದ ಶಾಸಕರಿಗೆ ಕೇಳಿಸಿಬಿಟ್ಟಿತ್ತು.

ಆಗ ಎದ್ದು ನಿಂತ ಬಿಜೆಪಿ ಶಾಸಕ ಸುರೇಶ್‌ ಕುಮಾರ್‌, ರಹೀಂಖಾನ್‌ ಮತ್ತು ಬಿ.ಎಸ್.ಸುರೇಶ್‌ ಅವರ ಜುಗಲ್‌ಬಂದಿ ನೋಡುತ್ತಿದ್ದರೆ ಹಿಂದಿಯ ಪಡೋಸನ್‌ ಸಿನೆಮಾ ನೆನಪಾಗುವಂತಿದೆ. ಆ ಸಿನೆಮಾದಲ್ಲಿ ಕಿಶೋರ್‌ ಕುಮಾರ್‌ ಅವರು ಹಿಂದೆ ಹಾಡುತ್ತಿದ್ದರೆ ಸುನೀಲ್‌ ದತ್‌ ಲಿಪ್‌ ಸಿಂಕ್‌ ಮಾಡುತ್ತಿದ್ದರು. ಇದೂ ಹಾಗೆಯೇ ಆಗಿದೆ ಎಂದು ಕಾಲೆಳೆದರು.

ಆಗ ಮಧ್ಯಪ್ರವೇಶಿಸಿದ ಸ್ಪೀಕರ್‌ ಯು.ಟಿ.ಖಾದರ್‌, ಆ ಫಿಲ್ಮ್‌ ಹಿಟ್ ಆಯಿತಲ್ಲವೇ ಎಂದು ಪ್ರಶ್ನಿಸಿದರು. ಅದಕ್ಕೆ ಸುರೇಶ್‌ಕುಮಾರ್‌, ಭರ್ಜರಿ ಹಿಟ್‌ ಆಯಿತು ಎಂದು ಮಾರುತ್ತರ ನೀಡಿದರು. ಅದಕ್ಕೆ ಖಾದರ್‌ ಸಾಹೇಬ್ರು, ಈ ಜೋಡಿಯೂ (ರಹೀಂಖಾನ್‌-ಬಿ.ಎಸ್‌.ಸುರೇಶ್‌) ಹಿಟ್‌ ಆಗುತ್ತದೆ, ಸುಮ್ಮನೆ ಕುಳಿತುಕೊಳ್ಳಿ ಎಂದು ಸಚಿವದ್ವಯರ ಕಾಲೆಳೆಯುವ ಕಾಯಕಕ್ಕೆ ತೆರೆ ಎಳೆದರು.

ಮೊದಲು ಭೂ ಲೋಕದ ರಸ್ತೆಗಳನ್ನು ಸರಿ ಮಾಡಿ...

ಕೆಲ ದಿನಗಳ ಹಿಂದೆಯಷ್ಟೇ ಮುಕ್ತಾಯವಾದ ವಿಧಾನ ಮಂಡಲ ಅಧಿವೇಶನದಲ್ಲಿ ಆಕಾಶ, ಭೂಲೋಕ, ಪಾತಾಳ ಲೋಕ, ರಸಾತಳದಲ್ಲಿ ರಸ್ತೆ ನಿರ್ಮಾಣದ ಬಗ್ಗೆಯೂ ಚರ್ಚೆಯಾಯಿತು! ವಿಧಾನಸಭೆ ಕಲಾಪದ ವೇಳೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಬೆಂಗಳೂರು ಅಭಿವೃದ್ಧಿ ಬಗ್ಗೆ ಮಾತನಾಡುವಾಗ, ಬೆಂಗಳೂರು ನಗರದಲ್ಲಿ 16.5 ಕಿ.ಮೀ. ಟನಲ್‌ ರಸ್ತೆ ನಿರ್ಮಾಣದ ವಿಚಾರ ಪ್ರಸ್ತಾಪಿಸಿದರು. ನಗರದ ಸಂಚಾರ ಸಮಸ್ಯೆಗೆ ಟನಲ್‌ ರಸ್ತೆಯೂ ಒಂದು ಪ್ರಮುಖ ಪರಿಹಾರವಾಗಲಿದೆ ಎಂದು ಒತ್ತಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ನಾವು ಅಭಿವೃದ್ಧಿ ವಿರೋಧಿಗಳಲ್ಲ. ವಿಧಾನಸೌಧದ ಸುತ್ತಮುತ್ತಲ ರಸ್ತೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಗುಂಡಿಗಳು ಕಾಣಸಿಗುತ್ತವೆ. ಹಳ್ಳ ಬಿದ್ದಿರುವ ರಸ್ತೆಗಳಿಂದ ಬೆಂಗಳೂರು ‘ಸ್ಲೋ ಬೆಂಗಳೂರು’ ಆಗಿದೆ. ಬೆಂಗಳೂರು ನಗರಕ್ಕೆ ರಸ್ತೆಗಳೇ ಶಾಪವಾಗುತ್ತಿವೆ. ನೀವು ಟನಲ್‌ ರಸ್ತೆಯನ್ನಾದರೂ ಮಾಡಿ ಅಥವಾ ಆಕಾಶ, ಪಾತಾಳಲೋಕ, ರಸಾತಳದಲ್ಲಿಯೂ ರಸ್ತೆ ನಿರ್ಮಾಣ ಮಾಡಿ. ಇದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಮೊದಲು ಬೆಂಗಳೂರು ನಗರದ ರಸ್ತೆ ಗುಂಡಿಗಳಿಗೆ ಮುಕ್ತಿ ಕೊಡಿ. ಈ ರಸ್ತೆ ಗುಂಡಿಗಳನ್ನು ಮುಚ್ಚುವ ಮುಖಾಂತರ ಬೆಂಗಳೂರು ನಗರಕ್ಕೆ ನಿಮ್ಮದೊಂದು ಸಾಕ್ಷಿ ಕೊಡಿ ಎಂದು ಆಗ್ರಹಿಸಿದರು.

ಈ ವೇಳೆ ಮಧ್ಯೆ ಪ್ರವೇಶಿಸಿದ ಡೆಪ್ಯುಟಿ ಸ್ಪೀಕರ್‌ ರುದ್ರಪ್ಪ ಲಮಾಣಿ ಅವರು, ಉಳಿದ ವಿಚಾರ ಏನೇ ಇದ್ದರೂ ಮೊದಲು ಭೂ ಲೋಕದ ರಸ್ತೆಗಳಲ್ಲಿ ಜನ ಓಡಾಡುವಂತೆ ಸರಿ ಮಾಡಿಸಿ ಕೊಡಿ ಎಂದು ಡಿ.ಕೆ.ಶಿವಕುಮಾರ್‌ಗೆ ಸಲಹೆ ನೀಡಿದರು. ಈ ಮಾತಿಗೆ ಇಡೀ ಸದನ ಕೆಲ ಕಾಲ ನಗೆಗಡಲಲ್ಲಿ ತೇಲಿತು.

  • -ಗಿರೀಶ್‌ ಗರಗ
  • -ಮೋಹನ್‌ ಹಂಡ್ರಂಗಿ