ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಇಂದು ಬೆಂಗಳೂರಿನಲ್ಲಿ ನಡೆಯಿತು. ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ 14 ಆರೋಪಿಗಳು ಕೋರ್ಟ್‌ಗೆ ಹಾಜರಾದರು. ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಲಾಗಿದೆ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿ ನಟ ದರ್ಶನ್‌ ಮತ್ತು ಪವಿತ್ರಾ ಗೌಡ ಸೇರಿ 17 ಆರೋಪಿಗಳ ವಿಚಾರಣೆ ಇಂದು ಸೆಷನ್ಸ್ ಕೋರ್ಟ್‌ನಲ್ಲಿ ನಡೆಯಿತು. ಇಂದು ಮೂವರು ಆರೋಪಿಗಳಾದ ಕಾರ್ತೀಕ್, ಕೇಶವ್ ಮತ್ತು ನಿಖಿಲ್ ಗೈರಾಗಿದ್ದು, ಉಳಿದ 14 ಮಂದಿ ಆರೋಪಿಗಳು ಕೋರ್ಟ್‌ಗೆ ಹಾಜರಾದರು. ಎ-1 ಆರೋಪಿಯಾದ ಪವಿತ್ರಾಗೌಡ ಮತ್ತು ನಟ ದರ್ಶನ್ ಕೋರ್ಟ್‌ಗೆ ಹಾಜರಾಗಿ ತಮ್ಮ ಹಾಜರಾತಿ ಖಚಿತಪಡಿಸಿದರು. 57ನೇ ಸೆಷನ್ಸ್ ಕೋರ್ಟ್ ನ್ಯಾಯಾಧೀಶರ ವರ್ಗಾವಣೆಯ ಹಿನ್ನೆಲೆ, ವಿಚಾರಣೆ 64ನೇ ಸೆಷನ್ಸ್ ಕೋರ್ಟ್‌ನಲ್ಲಿ ನ್ಯಾಯಾಧೀಶ ಐ.ಪಿ. ನಾಯ್ಕ್ ಅವರ ಮುಂದೆ ನಡೆಯಿತು. ಹಾಜರಾತಿ ಖಚಿತ ಪಡಿಸಿದ ಬಳಿಕ ಮುಂದಿನ ವಿಚಾರಣೆಯನ್ನು ಸೆ.09 ಕ್ಕೆ ಮುಂದೂಡಿಕೆ ಮಾಡಲಾಯ್ತು.

ಮುಂದಿನ ವಿಚಾರಣೆಯಲ್ಲಿ ಚಾರ್ಜ್ ಫ್ರೇಮ್ (ಆರೋಪ ನಿಗದಿ) ಪ್ರಕ್ರಿಯೆ ಕೈಗೊಳ್ಳಲು ಕೋರ್ಟ್ ಮುಂದಾಗಿದೆ. ಆದರೆ, ದರ್ಶನ್ ಪರ ವಕೀಲ ಸುನಿಲ್ ಕುಮಾರ್, “ನಾವು ಡಿಶ್ಚಾರ್ಜ್ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದೇವೆ. ಆದ್ದರಿಂದ ಈ ಹಂತದಲ್ಲಿ ಚಾರ್ಜ್ ಫ್ರೇಮ್ ಕೈಗೊಳ್ಳಬಾರದು” ಎಂದು ಮನವಿ ಸಲ್ಲಿಸಿದರು. ಕೋರ್ಟ್, ಈ ಮನವಿಯನ್ನು ಪರಿಗಣಿಸಿ, ಚಾರ್ಜ್ ಫ್ರೇಮ್ ದಿನಾಂಕವನ್ನು ನಿಗದಿ ಮಾಡದೆ, ಮುಂದಿನ ವಿಚಾರಣೆಯನ್ನೂ HBC (Hear Before Charge) ಹಂತದಲ್ಲಿ ಮುಂದುವರಿಸಲು ತೀರ್ಮಾನಿಸಿದೆ. ದರ್ಶನ್ ಪರ ವಕೀಲ ಸುನಿಲ್ ಕುಮಾರ್ ಸುಪ್ರೀಂ ಕೋರ್ಟ್ ಜಾಮೀನು ಆದೇಶವನ್ನು ಪರಿಶೀಲಿಸಿದ ಬಳಿಕ ಡಿಶ್ಚಾರ್ಜ್ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.