ರಾಜ್ಯದ ಹಲವು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಈಗಾಗಲೇ ಸೋಮವಾರ ಹಲವು ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಇದೀಗ ಮಳೆ ಮುಂದುವರಿದ ಕಾರಣದಿಂದ ಕೊಡುಗು ಜಿಲ್ಲೆಯಲ್ಲಿ ನಾಳೆಯೂ ಶಾಲಾ ಕಾಲೇಜಿಗೆ ರಜೆ ಘೋಷಿಸಿದೆ.
ಬೆಂಗಳೂರು (ಆ.18) ಕರ್ನಾಟಕದ ಹೆಲೆವೆಡೆ ಭಾರಿ ಮಳೆಯಾಗುತ್ತಿದೆ. ಕರಾವಳಿ, ಮಲೆನಾಡು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ. ಇದೀಗ ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದೆ. ರೆಡ್ ಅಲರ್ಟ್ ಕಾರಣ ಸೋಮವಾರ (ಆ.18) ಶಾಲಾ ಕಾಲೇಜಿಗೆ ರಜೆ ನೀಡಲಾಗಿತ್ತು. ಇದೀಗ ಮಳೆ ಮುಂದುವರಿದ ಕಾರಣ ನಾಳೆಯೂ (ಆಗಸ್ಟ್ 19) ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಕೊಡುಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ರಜೆ ಘೋಷಿಸಿದ್ದಾರೆ.
ಕೊಡಗಿನಲ್ಲಿ ಭಾರಿ ಮಳೆ ಗಾಳಿ
ಮಳೆ ಹಾಗೂ ಗಾಳಿ ಮುಂದುವರಿದಿದೆ. ಕಾವೇರಿ ನದಿ ತುಂಬಿ ಹರಿಯುತ್ತಿದೆ. ಹಲವು ತಗ್ಗು ಪ್ರದೇಶಗಳಲ್ಲಿ ಆತಂಕ ಸೃಷ್ಟಿಯಾಗಿದೆ. ರೆಡ್ ಅಲರ್ಟ್ ಹಿನ್ನಲೆಯಲ್ಲಿ ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಕೊಡಗು ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ರಜೆ ಘೋಷಿಸಲಾಗಿದೆ.ಮುನ್ನೆಚ್ಚರಿಕಾ ಕ್ರಮವಾಗಿ ರಜೆ ನೀಡಲಾಗಿದೆ.
ತುಂಬಿ ಹರಿಯುತ್ತಿದ್ದೆ ಕೊಡಗಿನ ಕಾವೇರಿ, ಕೆಆರ್‌ಎಸ್ ಸುತ್ತ ಮುತ್ತ ಪ್ರವಾಹದ ಎಚ್ಚರಿಕೆ
ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಪ್ರಮುಖವಾಗಿ ಕೊಡಗಿನಲ್ಲಿ ಮಳೆ ತೀವ್ರಗೊಂಡಿರುವ ಪರಿಣಾಮ ಕೆಆರ್‌ಎಸ್ ಡ್ಯಾಮ್‌ಗೆ ಒಳ ಹರಿವು ಹೆಚ್ಚಾಗಿದೆ. ನೀರು ಪ್ರಮಾಣ ಹೆಚ್ಚಾಗುತ್ತಿರುವ ಕಾರಣ ಕೆಆರ್‌ಎಸ್ ಡ್ಯಾಂನಿಂದ 1 ಲಕ್ಷದ 2 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಕಾವೇರಿ ನದಿ ಪಾತ್ರದದಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ. ಬೆಳಗ್ಗೆ 50 ಸಾವಿರ ಕ್ಯೂಸೆಕ್ ಇದ್ದ ಒಳಹರಿವು ಮಧ್ಯಾಹ್ನದ ವೇಳೆಗೆ 80,000 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಸಂಜೆ ವೇಳೆಗೆ 1.20 ಲಕ್ಷ ಕ್ಯೂಸೆಕ್‌ಗೆ ಒಳಹರಿವು ಹೆಚ್ಚಾಗಿದೆ. ನದಿ ಪಾತ್ರದ ಜನರು ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ. ಶ್ರೀರಂಗಪಟ್ಟಣ, ಮಳವಳ್ಳಿಯ ನದಿ ಪಾತ್ರದ ಪ್ರವಾಸಿ ಸ್ಥಳಗಳಿಗೂ ನಿರ್ಬಂಧ ವಿಧಿಸಲಾಗಿದೆ. ವೆಲ್ಲೆಸ್ಲಿ ಸೇತುವೆ ಮೇಲೆ ಸಂಚಾರಕ್ಕೆ ನಿರ್ಬಂಧಿಸಲಾಗಿದೆ.
ರಾಜ್ಯದ ಹಲವು ಭಾಗದಲ್ಲಿ ಮಳೆಯಾಗುತ್ತಿದ.ಬೀದರ್‌ಲ್ಲಿ ನಿರಂತರ ಮಳೆಯಾಗುತ್ತಿರುವ ಪರಿಣಾಮ ಕೆರೆ ಒಡೆದು ನೀರು ಜಮೀನುಗಳಿಗೆ ನುಗ್ಗಿದೆ. ನಿನ್ನೆ (ಆ.17) ರಾತ್ರಿ ಔರಾದ್ ತಾಲೂಕಿನ ಭೋಂತಿ ನಾಮಾನಾಯಕ್ ತಾಂಡಾದ ಕೆರೆ ಒಡೆದು ಅವಾಂತರ ಸೃಷ್ಟಿಯಾಗಿದೆ. ಅಪಾರ ಪ್ರಮಾಣದಲ್ಲಿ ನೀರು ಪ್ರವಾಹದ ರೀತಿಯಲ್ಲಿ ಹರಿದು ಬಂದಿದೆ. ಹೀಗಾಗಿ 40ಕ್ಕೂ ಹೆಚ್ಚು ಎಮ್ಮೆಗಳು ಕೊಚ್ಚಿ ಹೋಗಿದೆ. ಕೃಷಿ, ಬೆಳಗಳು ನಾಶವಾಗಿದೆ. ನಂದಿಬಿಜಲಗಾಂವ್, ಬಾವಲಗಾಂವ್, ಚಿಕ್ಲಿ(ಯು), ದಾಬಕಾ ಹಾಗೂ ಗಂಗನಬೀಡ ಗ್ರಾಮದ ಅನ್ನದಾತರ ಜಮೀನುಗಳಿಗೆ ನೀರು ನುಗ್ಗಿದೆ. ಹಂಗರಗಾ- ಸಾವರಗಾಂವ್ ನಡುವಿನ ರಸ್ತೆಯ ಸೇತುವೆ ಕೊಚ್ಚಿ ಹೋಗಿದೆ.
