ಪ್ರತಿಯೊಬ್ಬರೂ ಗಿಡ-ಮರಗಳನ್ನು ಬೆಳೆಸುವ ಜತೆಗೆ ಪರಿಸರ ಸಮತೋಲನಕ್ಕಾಗಿ ಸ್ವಚ್ಛತೆಗೆ ಆದ್ಯತೆ ನೀಡುವ ಜವಾಬ್ದಾರಿ ಇದ್ದು, ಇದರಿಂದ ಉತ್ತಮ ಆರೋಗ್ಯ, ಶುದ್ಧ ವಾತಾವರಣ ಪಡೆಯಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಹೇಳಿದರು.
ದೇವನಹಳ್ಳಿ (ಸೆ.28): ಪ್ರತಿಯೊಬ್ಬರೂ ಗಿಡ-ಮರಗಳನ್ನು ಬೆಳೆಸುವ ಜತೆಗೆ ಪರಿಸರ ಸಮತೋಲನಕ್ಕಾಗಿ ಸ್ವಚ್ಛತೆಗೆ ಆದ್ಯತೆ ನೀಡುವ ಜವಾಬ್ದಾರಿ ಇದ್ದು, ಇದರಿಂದ ಉತ್ತಮ ಆರೋಗ್ಯ, ಶುದ್ಧ ವಾತಾವರಣ ಪಡೆಯಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಹೇಳಿದರು. ತಾಲೂಕಿನ ಕುಂದಾಣ ಬೆಟ್ಟದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಪ್ರವಾಸೋದ್ಯಮ ಮತ್ತು ಸುಸ್ಥಿರ ಪರಿವರ್ತನೆ ವಾಕ್ಯದೊಂದಿಗೆ ’ಟ್ರಕ್ಕಿಂಗ್, ಸಸಿ ನೆಡುವ ಹಾಗೂ ಸ್ವಚ್ಛತಾ ಹೀ ಸೇವಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವಚ್ಛತೆ ಹಾಗೂ ಗಿಡ-ಮರಗಳು ಬೆಳೆಸೋದು ಕೇವಲ ಸರ್ಕಾರದ ಕೆಲಸ ಅ? ಅಲ್ಲ, ಸಾರ್ವಜನಿಕರ ಭಾಗವಹಿಸುವಿಕೆ ಅಗತ್ಯವಾಗಿದೆ. ಪರಿಸರ ಬೆಳೆಸುವ ಕಾರ್ಯದಿಂದ ರೋಗರುಜಿನಗಳು ತಡೆದು ಆಸ್ಪತ್ರೆಗೆ ಹೋಗುವುದರಿಂದ ದೂರ ಉಳಿಯಲು ಸಾಧ್ಯವಾಗುತ್ತದೆ ಎಂದು ಸಾರ್ವಜನಿಕರಲ್ಲಿ ಪರಿಸರ ಅರಿವು ಮೂಡಿಸಿದರು. ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಚಾರಣಕ್ಕೆ ಅನುಕೂಲಕರ ವಾತಾವರಣವನ್ನು ಜಿಲ್ಲಾಡಳಿತ ಕಲ್ಪಿಸುತ್ತಿದ್ದು, ಸಾರ್ವಜನಿಕರು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದಾಗ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು.
ಪರಿಸರ ಸಮತೋಲನ ಕಾಪಾಡಬೇಕು
ಪ್ರಕೃತಿಯ ಸೌಂದರ್ಯ ಹಾಗೂ ಶುದ್ಧ ವಾತಾವರಣವನ್ನು ಆಸ್ವಾದಿಸಬೇಕು.ಪರಿಸರ ಸಂರಕ್ಷಣೆ ಜತೆಗೆ ಪಕ್ಷಿಗಳಿಗೆ ಆಹಾರವಾಗುವಂತ ಹಣ್ಣು ಬಿಡುವ ಗಿಡ-ಮರ ಹೆಚ್ಚಾಗಿ ನೆಟ್ಟು, ಬೆಳೆಸುವ ಮೂಲಕ ಆರೋಗ್ಯಕರ ಪ್ರಕೃತಿ ನಿರ್ಮಿಸಿ ಪರಿಸರ ಸಮತೋಲನ ಕಾಪಾಡಬೇಕು ಎಂದು ಕರೆ ನೀಡಿದರು. ಜಿಲ್ಲಾಧಿಕಾರಿ ಎ.ಬಿ ಬಸವರಾಜು ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮ ದಿನಾಚರಣೆ ಹಾಗೂ ಸ್ವಚ್ಛತೆ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ಇದರ ಭಾಗವಾಗಿ ಜಿಲ್ಲಾದ್ಯಂತ ಕೆರೆ, ಕುಂಟೆ, ಕಲ್ಯಾಣಿಗಳು ಹಾಗೂ ಗ್ರಾಮದ ಸ್ವಚ್ಛತೆ ಜತೆಗೆ ಸಸಿ ನೆಡುವ ಕಾರ್ಯದಲ್ಲಿ ಜಿ.ಪಂ ಹಾಗೂ ಗ್ರಾ.ಪಂ ಪೌರಕಾರ್ಮಿಕರು ಬಹು ಉತ್ಸುಕತೆಯಿಂದ ಕಾರ್ಯಪ್ರವೃತ್ತರಾಗಿದ್ದಾರೆ. . ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ವಾತಾವರಣದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಇದಕ್ಕೂ ಮುನ್ನ ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷರಾದ ಶಾಂತಕುಮಾರ್, ದೇವನಹಳ್ಳಿ ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಸಿ.ಜಗನ್ನಾಥ, ಕುಂದಾಣ ಗ್ರಾಪಂ ಅಧ್ಯಕ್ಷೆ ವಿಜಯಮ್ಮ, ದೇವನಹಳ್ಳಿ ಪುರಸಭೆ ಅಧ್ಯಕ್ಷ ಡಿ.ಎಂ ಮುನಿಕೃಷ್ಣ, ಜಿಪಂ ಮಾಜಿ ಸದಸ್ಯ ಮಂಜುನಾಥ, ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಪ್ರೀತಿ, ದೇವನಹಳ್ಳಿ ತಹಸೀಲ್ದಾರ್ ಅನೀಲ್ ಮತ್ತಿತರರು ಪಾಲ್ಗೊಂಡಿದ್ದರು.
