ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಕ್ರಿಕೆಟ್‌ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಯಾವುದೇ ಕಾರಣಕ್ಕೂ ಕ್ರಿಕೆಟ್ ಪಂದ್ಯ ಆಡಬಾರದು ಎಂದು ಶ್ರೀ ರಾಮ್ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.
ಬೆಳಗಾವಿ (ಸೆ.12): ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಕ್ರಿಕೆಟ್‌ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಯಾವುದೇ ಕಾರಣಕ್ಕೂ ಕ್ರಿಕೆಟ್ ಪಂದ್ಯ ಆಡಬಾರದು ಎಂದು ಶ್ರೀ ರಾಮ್ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ಘಟನೆಯಾಗಿ ಐದು ತಿಂಗಳು ಕಳೆದಿದೆ. ಇದುವರೆಗೂ 26 ಕುಟುಂಬಗಳ ದುಃಖ, ನೋವು ಮಾಸಿಲ್ಲ. ಈ ನಡುವೆ ತರಾತುರಿಯಲ್ಲಿ ಕ್ರಿಕೆಟ್ ಪಂದ್ಯ ಏರ್ಪಡಿಸಿದ್ದು ಖಂಡನೀಯ. ಹೀಗಾಗಿ ಕೇಂದ್ರ ಸರ್ಕಾರ ಇದಕ್ಕೆ ಬಹಿಷ್ಕಾರ ಹಾಕಬೇಕು ಎಂದು ಆಗ್ರಹಿಸಿದರು.
78 ವರ್ಷಗಳಿಂದ ಪಾಕಿಸ್ತಾನ ನಮ್ಮ ದೇಶಕ್ಕೆ ಏನು ಮಾಡಿದೆ ಎಂಬುದು ನಿಮಗೆ ಗೊತ್ತಿಲ್ಲವೇ? ಮೂರು ಬಾರಿ ಕೇಂದ್ರದಲ್ಲಿ ನಿಮ್ಮನ್ನು ಅಧಿಕಾರಕ್ಕೆ ತಂದಿದ್ದು ಏತಕ್ಕೆ? ಹಿಂದೂಗಳು ಇಲ್ಲಿ ಸುರಕ್ಷಿತವಾಗಿರಬೇಕು ಎಂಬ ಉದ್ದೇಶದಿಂದ ಅಲ್ಲವೇ? ನಿಮಗೆ ದುಡ್ಡೇ ಅವಶ್ಯಕವಾಗಿದ್ದರೆ 100 ಕೋಟಿ ಹಿಂದೂಗಳು ನಿಮ್ಮನ್ನು ದುಡ್ಡಿನಲ್ಲಿ ಮುಳುಗಿಸುತ್ತೇವೆ. ಆದರೆ, ಈ ರೀತಿ ಹಿಂದೂಗಳನ್ನು ಹತ್ಯೆ ಮಾಡುವ ಭಯೋತ್ಪಾದಕರ ಜೊತೆಗೆ ಆಟ ಆಡುವುದು ಸರಿಯಲ್ಲ. ಈಗಲೂ ಕಾಲ ಮಿಂಚಿಲ್ಲ. ಸೆ.15ಕ್ಕೆ ಪಂದ್ಯ ಇದೆ.
ಕ್ರಿಕೆಟ್ ಆಡುವ ಅವಶ್ಯಕತೆ ಏನಿದೆ?
ಪಾಕಿಸ್ತಾನ ಜೊತೆಗೆ ನಾವು ಆಡುವುದಿಲ್ಲ ಅಂತಾ ಘೋಷಿಸಬೇಕು ಎಂದು ಒತ್ತಾಯಿಸಿದರು. ಏಪ್ರಿಲ್ 22ರ ನಂತರ ಪಾಕ್ ಜೊತೆಗಿನ ವ್ಯಾಪಾರ, ವಹಿವಾಟು ಸೇರಿ ಎಲ್ಲ ಸಂಬಂಧವನ್ನು ಕಡಿತಗೊಳಿಸಿದಿರಿ. ಇಷ್ಟೆಲ್ಲ ಮಾಡಿದ ಮೇಲೆ ಕ್ರಿಕೆಟ್ ಆಡುವ ಅವಶ್ಯಕತೆ ಏನಿದೆ? ಈ ಪಂದ್ಯ ನೀವು ಆಡುವುದಾದರೆ ರಾಷ್ಟ್ರಕ್ಕೆ ಮಾಡಿದ ದ್ರೋಹ. ನೂರು ಕೋಟಿ ಹಿಂದೂಗಳು ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ಶಿವಮೊಗ್ಗದ ಸಾಗರದಲ್ಲಿ ಗಣೇಶನ ಮೇಲೆ ಉಗುಳಿದ್ದಾರೆ. ಮದರಸಾದಲ್ಲಿ ವಿಷ ತುಂಬುವ ಕೆಲಸ ಆಗುತ್ತಿದೆ ಎಂದು ಕಿಡಿಕಾರಿದರು.
ರಾಜ್ಯದ 5 ಕಡೆ ಪಾಕ್ ಪರ ಘೋಷಣೆ ಕೂಗಿದ್ದಾರೆ. ಮುಸ್ಲಿಂ ಓಲೈಕೆಯೇ ಇದಕ್ಕೆ ಕಾರಣ. ಪೊಲೀಸರು ರಾಜಕೀಯ ಒತ್ತಡಕ್ಕೆ ಒಳಗಾಗದೆ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ವಿಧಿಸಬೇಕು. ಬಿಜೆಪಿಯವರಿಗೆ ಈಗ ಅಧಿಕಾರ ಇಲ್ಲ. ಹೀಗಾಗಿ ಹಿಂದುತ್ವ ಎನ್ನುತ್ತಾರೆ. ಅಧಿಕಾರಕ್ಕೆ ಬಂದಾಗ ಹಿಂದೂಗಳನ್ನು ಮರೆಯುತ್ತಾರೆ ಎಂದು ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ರವಿ ಕೋಕಿತ್ಕರ್, ಶಿವಾನಂದ ಅಂಬಾರಿ, ವಿನಯ್ ಅಂಗರೋಳಿ ಇತರರು ಉಪಸ್ಥಿತರಿದ್ದರು.
