ಬಂಗಾರಪೇಟೆಯಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್ ಧ್ವಜ ಪ್ರದರ್ಶಿಸಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಪುರದಲ್ಲೂ ಇದೇ ರೀತಿಯ ಘಟನೆ ವರದಿಯಾಗಿದೆ.
ಬಂಗಾರಪೇಟೆ (ಸೆ.9): ಕಳೆದ ಶುಕ್ರವಾರ ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಡೆದ ಮೆರವಣಿಗೆಯಲ್ಲಿ ಪುಂಡರು ಪ್ಯಾಲೆಸ್ತೀನ್ ಬಾವುಟ ಪ್ರದರ್ಶಿಸಿ ಅಶಾಂತಿ ಉಂಟು ಮಾಡಿದ ಘಟನೆಗೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯ ಬಂಗಾರಪೇಟೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪಟ್ಟಣದ ಖಾದರ್ ಲೇಔಟ್‌ನ ಸೈಯದ್ ಗೌಸ್, ಸೋನು, ಸಿ.ರಹೀಂ ಕಾಂಪೌಂಡ್‌ನ ಸುಲ್ತಾನ್, ನಾಸೀರ್ ಮತ್ತು ಸೇಟ್ ಕಾಂಪೌಂಡ್‌ನ ಸೈಯದ್ ಬಂಧಿತ ಆರೋಪಿಗಳಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಕಳೆದ ಎರಡು ದಿನಗಳಿಂದ ಪ್ಯಾಲೆಸ್ತೀನ್ ಧ್ವಜ ಪ್ರದರ್ಶನ ಮಾಡಿ ಪುಂಡಾಟಿಕೆ ಮಾಡಿದವರನ್ನು ಬಂಧಿಸಿ ಗಡಿ ಪಾರು ಮಾಡಲು ಮಾಜಿ ಸಂಸದ ಎಸ್.ಮುನಿಸ್ವಾಮಿ, ವಿವಿಧ ಹಿಂದೂ ಪರ ಸಂಘಟನೆಗಳು ಪೊಲೀಸರ ಮೇಲೆ ಒತ್ತಡ ಹೇರಿದ್ದರು.
ವಿಜಯಪುರದಲ್ಲೂ ಪ್ಯಾಲೆಸ್ತೀನ್ ಧ್ವಜ ಪ್ರದರ್ಶನ:
ವಿಜಯಪುರದಲ್ಲೂ ಸೆಪ್ಟಂಬರ್ 8ರಂದು ಈದ್ ಮಿಲಾದ್ ಆಚರಣೆಯ ನಿಮಿತ್ತ ಸ್ಥಳೀಯ ಮುಸ್ಲಿಂ ಸಂಘಟನೆಯೊಂದು ಆಯೋಜಿಸಿದ್ದ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್ ರಾಷ್ಟ್ರಧ್ವಜವನ್ನು ಪ್ರದರ್ಶಿಸಲಾದ ಬಗ್ಗೆ ವರದಿಯಾಗಿತ್ತು. ನಗರದ ವಿವಿಧ ಭಾಗಗಳಿಂದ ಗಾಂಧಿ ಚೌಕ್ ಕಡೆಗೆ ಸಾಗಿದ ಈ ಮೆರವಣಿಗೆಯ ಸಂದರ್ಭದಲ್ಲಿ ಘಟನೆ ನಡೆದಿತ್ತು. ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
