ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಗ್ಯುದ್ಧ ನಡೆಯಿತು. ಆರ್‌ಸಿಬಿ ಕಾರ್ಯಕ್ರಮ, ಲೋಗೋ ವಿವಾದ, ಸ್ಟೇಡಿಯಂ ಸುರಕ್ಷತೆ ಮತ್ತು ಆಂಬ್ಯುಲೆನ್ಸ್ ಸೌಲಭ್ಯದ ಕೊರತೆ ಕುರಿತು ಆರೋಪ-ಪ್ರತ್ಯಾರೋಪಗಳು ಕೇಳಿಬಂದವು.
ಕಾಲ್ತುಳಿತದ ಘಟನೆ ಪ್ರಸ್ತಾಪ ಮಾಡ್ತಾ ಇದ್ದ ವೇಳೆ, ಅಶೋಕ್ ಗೆ ನೀನು ವಿಪಕ್ಷ ನಾಯಕ ಆಗಿದ್ದರ ಬಗ್ಗೆ ನಿಮ್ಮಲ್ಲಿ ವಿರೋಧ ಇದೆ ಎಂದು ಸಿದ್ದರಾಮಯ್ಯ ಹೇಳಿದರು. ಈ ವೇಳೆ ಸಿದ್ದರಾಮಯ್ಯ ಅವರೆ ನಿನ್ನೆಯಿಂದ ನೀವು ಸಪ್ಪೆ ಇದ್ದೀರಿ ನಿಮ್ಮ ಆಪ್ತ ರಾಜಣ್ಣ ಡಿಸ್ ಮಿಸ್ ಮಾಡಿದ್ರಿ ಎಂದು ಅಶೋಕ್ ಹೇಳಿದ್ರು ಇದಕ್ಕೆ ಸಿಎಂ ಉತ್ತರಿಸಿ ನನಗೆ ಬೇಸರ ಆಗೋದೆ ಇಲ್ಲ. ನನಗೆ ಯಾಕೆ ಬೇಜಾರು ಎಂದು ಸಿಎಂ ಉತ್ತರಿಸಿದರು. ಇದೇ ವೇಳೆ ನಾನು ವಿಪಕ್ಷ ನಾಯಕನಾಗಿ ಕಲಿಯೋದು ಇದೆ ಎಂದ ಅಶೋಕ್ ಗೆ, ಜೀವನ ಪೂರ್ತಿ ಕಲಿಯೋದು ಇದೆ. ಇಲ್ಲಿ ಯಾರು ಬೃಹಸ್ಪತಿ ಅಲ್ಲ ಅಂದ ಸಿದ್ದರಾಮಯ್ಯ.
RCB ಕಾರ್ಯಕ್ರಮ ಮತ್ತು ಲೋಗೋ ವಿವಾದ:
ಡಿಸಿಎಂ ಡಿಕೆ ಶಿವಕುಮಾರ್ RCB ಬಾವುಟ ಹಿಡಿದಿದ್ದರ ಕುರಿತು ಅಶೋಕ್ ಪ್ರಶ್ನೆ ಎತ್ತಿದರು."ಡಿಸಿಎಂ ಗಿಂತ ಆಟಗಾರರು ದೊಡ್ಡವರಾ? ಡಿಸಿಎಂ ಸ್ವತಃ ರಿಸೀವ್ ಮಾಡುತ್ತಿದ್ದಾರೆ. ಅದು RCB ವಿಸ್ಕಿ ಲೋಗೋ. ಸಿಎಂ, ಡಿಸಿಎಂ ಕುರ್ಚಿಗಳ ಮುಂದೆ RCB ಲೋಗೋ ಇಡಲಾಗಿದೆ. ರಾಜ್ಯಪಾಲ, ಸಿಎಂ, ಡಿಸಿಎಂ ಕುರ್ಚಿಗಳ ಮುಂದೆ ಯಾವ ಲೋಗೋ ಇರಬೇಕು ಎಂಬುದು ಗೊತ್ತಿರಲಿಲ್ಲವೇ? ಅಧಿಕಾರಿಗಳು ಗಮನ ಕೊಡಲಿಲ್ಲವೇ? ಎಂದು ವ್ಯಂಗ್ಯವಾಡಿದರು.
ಅಶೋಕ್ ಆರೋಪಿಸಿದಂತೆ, ಆಟಗಾರರು ಬರುವ ಮೊದಲು ಸಿಎಂ, ರಾಜ್ಯಪಾಲರು ಕಾಯಬೇಕಾಯಿತು. ಆಟಗಾರರ ಆಗಮನಕ್ಕೂ ಮುನ್ನ ರಾಜ್ಯಪಾಲರನ್ನು ಕರೆತರುವ ಬದಲು ಕಾರ್ಯಕ್ರಮ ತಡವಾಯಿತು. ಜಮೀರ್ ಅಹಮ್ಮದ್ ತಮ್ಮ ಮಗನನ್ನು ಕರೆದುಕೊಂಡು ಬಂದು ಆಟಗಾರರ ಹಿಂದೆ ಕೂರಿಸಿದರು. ಆದರೆ ಸಿಎಂ ಮೊಮ್ಮಗನಿಗೆ ಜಾಗ ಇರಲಿಲ್ಲ. ನಂತರ ಗೋವಿಂದರಾಜ್ ಅವರು ಜಾಗ ಕಲ್ಪಿಸಿದರು. ಇದು "ಸೆಲ್ಫಿ ಹುಚ್ಚು" ಎಂದು ಅಶೋಕ್ ಟೀಕಿಸಿದರು.
ಸ್ಟೇಡಿಯಂ ಸುರಕ್ಷತಾ ಅವ್ಯವಸ್ಥೆಗ್ಗೆ ಗಂಭೀರ ಆರೋಪ
ಅಶೋಕ್ ಮತ್ತಷ್ಟು ಗಂಭೀರ ಆರೋಪಗಳನ್ನು ಹೊರ ಹಾಕಿದರು. ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಕ್ಕಾಗಿ ಯಾವುದೇ ಅನುಮತಿ ಪಡೆಯಲಾಗಿಲ್ಲ. KCA ಅಧಿಕಾರಿಗಳು ಪೊಲೀಸ್‌ಗಳಿಗೆ ಮೈದಾನದ ಕೀಲಿಗಳನ್ನು ನೀಡಿದ್ದು, ಪಂದ್ಯ ಮುಗಿಯುವವರೆಗೂ ಯಾರನ್ನೂ ಒಳ ಬಿಡಬಾರದು ಎಂದು ವಾಕಿ-ಟಾಕಿಯಲ್ಲಿ ಸೂಚಿಸಿದ್ದರು. ಆದರೂ ಒಳಗೆ ಜನರನ್ನು ಬಿಡಲಾಯಿತು. ವಿಧಾನಸೌಧದ ಕಾರ್ಯಕ್ರಮ ಇನ್ನೂ ಪ್ರಾರಂಭವಾಗುವ ಮುನ್ನವೇ ಪ್ರಜ್ವಲ್ ಎಂಬ ಇಂಜಿನಿಯರ್ ಮೃತಪಟ್ಟರು. ನಂತರ 3.55ಕ್ಕೆ ಪೂರ್ಣಚಂದ್ರ ಸಾವನ್ನಪ್ಪಿದರು. 19 ವರ್ಷದ ಮನೋಜ್ 4.25ಕ್ಕೆ ಪ್ರಾಣ ಕಳೆದುಕೊಂಡರು. 13 ವರ್ಷದ ದಿವ್ಯಾಂಶಿ 4.38ಕ್ಕೆ ಮೃತಪಟ್ಟರು. ಆ ಮಗುವಿನ ಕಿವಿಯೋಲೆ ಕಾಣೆಯಾಗಿದ್ದು, ತಾಯಿ ತನ್ನ ಮಗಳ ಇಷ್ಟದ ಆಭರಣವನ್ನು ಹಿಂತಿರುಗಿಸಲು ಕೇಳುತ್ತಿದ್ದಾರೆ ಎಂದು ಭಾವುಕರಾಗಿ ಅಶೋಕ್ ಹೇಳಿದರು.
ಆಂಬ್ಯುಲೆನ್ಸ್ ಸೌಲಭ್ಯಕ್ಕೂ ಟೀಕೆ
ಆಂಬ್ಯುಲೆನ್ಸ್ ಇದ್ದದ್ದು ಹೆಣ ಸಾಗಿಸಲು ಮಾತ್ರವೋ? ಸೂಕ್ತ ವ್ಯವಸ್ಥೆ ಇದ್ದಿದ್ದರೆ ಇಂತಹ ದುರ್ಘಟನೆಗಳು ಸಂಭವಿಸುವುದೇ ಇಲ್ಲ. ಕೇವಲ 15 ಗೇಟ್‌ಗಳನ್ನು ಮಾತ್ರ ತೆರೆಯಲಾಗಿದೆ. 21 ಗೇಟ್‌ಗಳನ್ನು ತೆರೆಯಿದ್ದರೆ ಏನೂ ಆಗುತ್ತಿರಲಿಲ್ಲ ಎಂದು ಅಶೋಕ್ ಕಿಡಿಕಾರಿದರು. ಯಾವುದೇ ತನಿಖೆ ಬಂದರೂ ಸಿಎಂಗೆ ನಿಕಟವಾಗಿರುವ ಇಬ್ಬರು ಖುನ್ನಾ ಮತ್ತು ನಾಗಮೋಹನ್ ದಾಸ್ ಮಾತ್ರ ತೊಡಗಿಸಿಕೊಂಡಿದ್ದಾರೆ. ಇದನ್ನು ಅಶೋಕ್ "ಆಸ್ಥಾನ ಕಲಾವಿದರು" ಎಂದು ವ್ಯಂಗ್ಯವಾಡಿದರು.
