ಕಳೆದ ಆರು ವರ್ಷಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸದ 10 ರಾಜಕೀಯ ಪಕ್ಷಗಳಿಗೆ ಕೇಂದ್ರ ಚುನಾವಣಾ ಆಯೋಗವು ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಈ ಪಕ್ಷಗಳು ನೋಂದಾಯಿತವಾಗಿದ್ದರೂ ಚುನಾವಣೆಗಳಲ್ಲಿ ಭಾಗವಹಿಸದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು (ಆ.13): ಕಳೆದ ಆರು ವರ್ಷಗಳಿಂದ ಒಂದೇ ಒಂದು ಚುನಾವಣೆಯಲ್ಲಿ ಸ್ಪರ್ಧಿಸದ ರಾಜ್ಯದ 10 ರಾಜಕೀಯ ಪಕ್ಷಗಳಿಗೆ (ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳು) ಶೋಕಾಸ್‌ ನೋಟಿಸ್‌ ಜಾರಿಗೊಳಿಸುವಂತೆ ಕೇಂದ್ರ ಚುನಾವಣಾ ಆಯೋಗ(ಇಸಿಐ)ದ ಅಧೀನ ಕಾರ್ಯದರ್ಶಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದಾರೆ. 

ಸಾರ್ವಜನಿಕ ಪ್ರಾತಿನಿಧ್ಯ ಕಾಯ್ದೆ 1951ರ ಸೆಕ್ಷನ್‌ 29ಎ ಅಡಿ ರಾಜಕೀಯ ಪಕ್ಷಗಳು ಕೇಂದ್ರ ಚುನಾವಣಾ ಆಯೋಗದಲ್ಲಿ ನೋಂದಾಯಿಸಿವೆ. ಆಯೋಗದಲ್ಲಿ ನೋಂದಣಿ ಮಾಡಿದ ಬಳಿಕ ಆದಾಯ ತೆರಿಗೆ ವಿನಾಯಿತಿ, ಸ್ಟಾರ್‌ ಪ್ರಚಾರಕರ ನಾಮನಿರ್ದೇಶನ ಸೇರಿ ಅನೇಕ ಪ್ರಯೋಜನಗಳಿಗೆ ಈ ಪಕ್ಷಗಳು ಅರ್ಹವಾಗಿವೆ. ಕಾಯ್ದೆಯಡಿ ಆಯೋಗ ನಡೆಸುವ ಚುನಾವಣೆಗಳಲ್ಲಿ ಭಾಗವಹಿಸಬೇಕು. ಆದರೂ 2019ರಿಂದ ಕಳೆದ 6 ವರ್ಷಗಳಿಂದ ಈ ನೋಂದಾಯಿತ ಮಾನ್ಯತೆ ಪಡೆಯದ ಕರ್ನಾಟಕದ 10 ರಾಜಕೀಯ ಪಕ್ಷಗಳು ಒಂದೇ ಒಂದು ಚುನಾವಣೆಯಲ್ಲಿ ಸ್ಪರ್ಧಿಸದಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಈ ರಾಜಕೀಯ ಪಕ್ಷಗಳಿಗೆ ಶೋಕಾಸ್‌ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ರಾಷ್ಟ್ರೀಯ ಮತ್ತು ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತಿನ ರೂಪದಲ್ಲಿ ಪಕ್ಷಗಳ ಹೆಸರಿನೊಂದಿಗೆ ಪ್ರಕಟಣೆ ನೀಡಬೇಕು. ಜತೆಗೆ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ನೀಡಬೇಕು. ಈ ಪಕ್ಷಗಳ ಅಹವಾಲು ಆಲಿಸಲು ಆಯೋಗವು ನಿಮಗೆ ಅಧಿಕಾರ ನೀಡಿದೆ. ಅಹವಾಲು ಆಲಿಸಿದ ಬಳಿಕ ಈ ಪತ್ರ ಸ್ವೀಕರಿಸಿದ ಒಂದು ತಿಂಗಳ ಅವಧಿಯಲ್ಲಿ ವಿವರವಾದ ವರದಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಿ ಕೊಡುವಂತೆ

ಆ 10 ರಾಜಕೀಯ ಪಕ್ಷಗಳು ಯಾವುವು?

ಅಖಿಲ ಭಾರತೀಯ ರೈತ ಪಾರ್ಟಿ, ಬಡವರ ಶ್ರಮಿಕರ ರೈತರ ಕಾಂಗ್ರೆಸ್‌ ಪಾರ್ಟಿ, ಭಾರತೀಯ ಜನಶಕ್ತಿ ಕಾಂಗ್ರೆಸ್‌, ಭಾರತೀಯ ರಾಷ್ಟ್ರೀಯ ಮಹಿಳಾ ಸರ್ವೋದಯ ಕಾಂಗ್ರೆಸ್‌, ಡಾ.ಅಂಬೇಡ್ಕರ್‌ ಸಮಾಜವಾದಿ ಡೆಮಾಕ್ರಟಿಕ್‌ ಪಾರ್ಟಿ, ಜನ ಸಾಮಾನ್ಯರ ಪಾರ್ಟಿ(ಕರ್ನಾಟಕ), ಮಾನವ ಪಾರ್ಟಿ, ಪ್ರಜಾ ಪರಿವರ್ತನಾ ಪಾರ್ಟಿ, ಯಂಗ್‌ ಇಂಡಿಯಾ ಕಾಂಗ್ರೆಸ್‌ ಪಾರ್ಟಿ.