ನೀಟ್ ಪರೀಕ್ಷೆಗೆ ಸಲ್ಲಿಸುವ ಅರ್ಜಿಯಲ್ಲಿ ಜಾತಿ ಸೇರಿ ಇತರೆ ವಿಚಾರಗಳ ತಿದ್ದುಪಡಿಗೆ ನೀಡಿದ್ದ ನಿಗದಿತ ಕಾಲಾವಧಿಯಲ್ಲಿ ಸರಿಪಡಿಸಿಕೊಳ್ಳದೆ, ಫಲಿತಾಂಶದ ಬಳಿಕ ಬದಲಾಯಿಸುವಂತೆ ಕೋರಲು ಅವಕಾಶ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಬೆಂಗಳೂರು (ಸೆ.28): ನೀಟ್ ಪರೀಕ್ಷೆಗೆ ಸಲ್ಲಿಸುವ ಅರ್ಜಿಯಲ್ಲಿ ಜಾತಿ ಸೇರಿ ಇತರೆ ವಿಚಾರಗಳ ತಿದ್ದುಪಡಿಗೆ ನೀಡಿದ್ದ ನಿಗದಿತ ಕಾಲಾವಧಿಯಲ್ಲಿ ಸರಿಪಡಿಸಿಕೊಳ್ಳದೆ, ಫಲಿತಾಂಶದ ಬಳಿಕ ಬದಲಾಯಿಸುವಂತೆ ಕೋರಲು ಅವಕಾಶ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ತಾನು ನೇಕಾರ ಸಮುದಾಯಕ್ಕೆ ಸೇರಿದ್ದು, ಅರ್ಜಿಯಲ್ಲಿ ಸಾಮಾನ್ಯ ವರ್ಗ ಎಂದು ನಮೂದಿಸಲಾಗಿದೆ.
ಹೀಗಾಗಿ, ತನ್ನನ್ನು ಒಬಿಸಿಯಡಿ ಪರಿಗಣಿಸಬೇಕು ಎಂದು ಕೋರಿ ವೈದ್ಯಕೀಯ ಸ್ನಾತಕೋತ್ತರ ಪದವಿ ಪ್ರವೇಶ ಆಕಾಂಕ್ಷಿ ಡಾ। ಸಿ.ಎನ್.ಅನುಷಾ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್, ಮತ್ತು ವೆಂಕಟೇಶ್ ಟಿ.ನಾಯ್ಕ್ ಅವರಿದ್ದ ಪೀಠ, ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಎಂದು ವಜಾಗೊಳಿಸಿದೆ.
ಅರ್ಜಿದಾರರ ಪರ ವಕೀಲರು ಈ ಹಿಂದೆ ಹೈಕೋರ್ಟ್ನ ಮತ್ತೊಂದು ಪೀಠ ಎರಡೂ ಪ್ರಕರಣಗಳಲ್ಲಿ ಅವಕಾಶ ಕಲ್ಪಿಸಿದೆ ಎಂಬ ವಾದವನ್ನು ಒಪ್ಪದ ಹೈಕೋರ್ಟ್, ಆ ಎರಡೂ ಪ್ರಕರಣಗಳಲ್ಲಿ ಫಲಿತಾಂಶ ಪ್ರಕಟಕ್ಕೂ ಮುನ್ನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಹೀಗಾಗಿ, ಮನವಿ ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಮೊದಲೇ ಅವಕಾಶ ನೀಡಲಾಗಿತ್ತು-ಮಂಡಳಿ
ಅರ್ಜಿದಾರರ ಮನವಿಗೆ ಆಕ್ಷೇಪಿಸಿದ ರಾಷ್ಟ್ರೀಯ ಪರೀಕ್ಷಾ ಮಂಡಳಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ವೈದ್ಯಕೀಯ ಸಲಹಾ ಸಮಿತಿ ಪರ ವಕೀಲರು, ತಿದ್ದುಪಡಿ ಮಾಡಿಕೊಳ್ಳಲು ನೀಟ್ ಮತ್ತು ಪರೀಕ್ಷಾ ಪ್ರಾಧಿಕಾರದಿಂದ ಅವಕಾಶ ಕಲ್ಪಿಸಲಾಗಿತ್ತು. ಅರ್ಜಿದಾರರು ಸರಿಪಡಿಸಿಕೊಳ್ಳದೆ, ಸಾಮಾನ್ಯ ವರ್ಗದಲ್ಲೇ ಪರೀಕ್ಷೆ ಬರೆದಿದ್ದರು.
ಆಯ್ಕೆಯಾಗದ ಕಾರಣ ಜಾತಿ ವರ್ಗದ ಪಟ್ಟಿಯಲ್ಲಿ ಸರಿಪಡಿಸಲು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಪ್ರವೇಶ ಪರೀಕ್ಷೆ ಫಲಿತಾಂಶ 2025ರ ಆ.19ರಂದು ಪ್ರಕಟವಾಗಿದ್ದು, ಸೆ.8 ರಂದು ಅರ್ಜಿ ಸಲ್ಲಿಸಿದ್ದಾರೆ. ಈಗ ಅನುಮತಿ ನೀಡಿದರೆ ಇಡೀ ಫಲಿತಾಂಶ ಗೊಂದಲಮಯವಾಗುತ್ತದೆ. ಆದ್ದರಿಂದ ಅರ್ಜಿ ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.
