ದೆಹಲಿಯ ಕರ್ನಾಟಕ ಭವನದಲ್ಲಿ ಸಂಸದ ಈರಣ್ಣ ಕಡಾಡಿ ಅವರು ರೂಮು ಕೇಳಿದರೆ, ಅಲ್ಲಿನ ಸಿಬ್ಬಂದಿ ನೀವ್ಯಾರು ಎಂದು ಕೇಳಿದ್ದಕ್ಕೆ ಸಂಸದರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೂಲಸೌಕರ್ಯಗಳ ಕೊರತೆ, ಅಸಮರ್ಪಕ ಆಹಾರ ಮತ್ತು ವಸತಿ ವ್ಯವಸ್ಥೆಗಳ ಬಗ್ಗೆ  ಸಿಬ್ಬಂದಿಗಳ ನಿರ್ಲಕ್ಷ್ಯವನ್ನು ಟೀಕಿಸಿದ್ದಾರೆ.

ನವದೆಹಲಿ (ಸೆ.10): ಸಂಸದರ ಹಿತಾಸಕ್ತಿಯನ್ನು ಕಾಪಾಡಿ, ರಾಜ್ಯದ ಜನತೆಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ಪ್ರಮುಖ ಸೇತುವೆಯಾಗಿರಬೇಕಾದ ಕರ್ನಾಟಕ ಭವನ ಈಗ ಬಿಳಿ ಆನೆಯಂತಾಗಿದೆ. ಒಬ್ಬ ಸಂಸದನಾಗಿ ಕೊಠಡಿ ಕೇಳಿದಾಗ 'ಗ್ರೂಪ್ ಡಿ' ಸಿಬ್ಬಂದಿಯೇ 'ನೀವು ಯಾರು?' ಎಂದು ಪ್ರಶ್ನಿಸಿದ ಘಟನೆ ನಡೆದಿದೆ ಎಂದು ಬಿಜೆಪಿ ಸಂಸದ ಈರಣ್ಣ ಕಡಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿ ಕರ್ನಾಟಕ ಭವನದಲ್ಲಿ ನಡೆಯುತ್ತಿರುವ ಅವ್ಯವಸ್ಥೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, 'ಯಾವುದೇ ಪಕ್ಷದ ಶಾಸಕರು, ಅಧಿಕಾರಿಗಳು, ಮಂತ್ರಿಗಳು ಹಾಗೂ ಸಂಸದರಿಗೆ ಸಮಾನವಾಗಿ ಉಪಯೋಗವಾಗಬೇಕಾದ ಕರ್ನಾಟಕ ಭವನದಲ್ಲಿ ಇದೀಗ ಮೂಲಭೂತ ವ್ಯವಸ್ಥೆಗಳೇ ಕೊರತೆಯಾಗಿದೆ. ರೂಮ್, ಆಹಾರ, ವಾಹನ ವ್ಯವಸ್ಥೆ ಎಲ್ಲವೂ ಶೋಚನೀಯ ಸ್ಥಿತಿಯಲ್ಲಿದೆ' ಎಂದು ಗಂಭೀರ ಆರೋಪ ಮಾಡಿದ್ದಾರೆ.

ಆಹಾರ ಹಾಗೂ ವಾಹನ ವ್ಯವಸ್ಥೆ ಶೋಚನೀಯ:

'ಇತರೆ ರಾಜ್ಯಗಳ ಭವನಗಳಲ್ಲಿ ಅಲ್ಲಿನ ಸ್ಥಳೀಯ ಆಹಾರ ಲಭ್ಯವಿದೆ. ಗುಜರಾತ್ ಭವನದಲ್ಲಿ ಗುಜರಾತಿ ಫುಡ್, ಮಹಾರಾಷ್ಟ್ರ ಭವನದಲ್ಲಿ ಮಹಾರಾಷ್ಟ್ರ ಆಹಾರ ಸಿಗುತ್ತದೆ. ಆದರೆ, ಕರ್ನಾಟಕ ಭವನದಲ್ಲಿ ಮಾತ್ರ ಉತ್ತರ ಭಾರತೀಯ ಆಹಾರ ಪದ್ದತಿ ಮಾತ್ರವಿದೆ. ನಮ್ಮ ರಾಜ್ಯದ ಆಹಾರ ಪದ್ದತಿ ಇಲ್ಲದಿರುವುದು ವಿಷಾದನೀಯ. ಅಲ್ಲದೆ, ವಾಹನಗಳ ವ್ಯವಸ್ಥೆ ಸಹ ಅಸಮರ್ಪಕವಾಗಿದೆ' ಎಂದು ಟೀಕಿಸಿದರು.

ಬಿಪಿಎಲ್ ಕಾರ್ಡ್‌ಗಳ ಮೇಲೆ ಕಠಿಣ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

ರೂಮು ಕೇಳಿದರೆ ನೀವ್ಯಾರು ಎಂದು ಕೇಳಿದ ಸಿಬ್ಬಂದಿ:

ಕರ್ನಾಟಕ ಭವನದಲ್ಲಿ ರಾಜ್ಯದ ಸಂಸದರಿಗೂ ಕೊಠಡಿ ಕೊಡುತ್ತಿಲ್ಲ. ಅವರ ಜೊತೆಗಾರರಿಗೆ ಕೂಡ ರೂಮ್ ಇಲ್ಲ ಎಂದು ಹೇಳಲಾಗುತ್ತದೆ. ಯಾವಾಗ ಕೇಳಿದರೂ ರೂಮ್ ಫುಲ್ ಅಂತಾರೆ. ಅಧಿವೇಶನ ಸಮಯದಲ್ಲಿ ಸಂಸದರ ಸೆಲ್ ಕೂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಒಬ್ಬ ಸಂಸದನಾಗಿ ಕೊಠಡಿ ಕೇಳಿದಾಗ ಸ್ವಾಗತ ವೇದಿಕೆಯಲ್ಲಿದ್ದ ಗ್ರೂಪ್ ಡಿ ಸಿಬ್ಬಂದಿಯೇ 'ನೀವು ಯಾರು?' ಎಂದು ಪ್ರಶ್ನಿಸಿದ ಘಟನೆ ಅವ್ಯವಸ್ಥೆಯ ತೀವ್ರತೆಯನ್ನು ತೋರಿಸುತ್ತದೆ. ಭವನವನ್ನು ಅಧಿಕಾರಿಗಳು ಬಿಟ್ಟು ಉಳಿದ ಸಿಬ್ಬಂದಿಯೇ ಅಧಿಕಾರ ನಡೆಸುತ್ತಿದ್ದಾರೆ. ನೂರಾರು ಜನ ಸಿಬ್ಬಂದಿ ಇದ್ದರೂ ಯಾರ ಕೆಲಸ ಏನು ಅನ್ನೋದು ಸ್ಪಷ್ಟವಿಲ್ಲ. ಅಧಿವೇಶನಕ್ಕೂ ಮುನ್ನ ಸಂಸದರಿಗಾಗಿಯೇ ರಾಜ್ಯದ ಯೋಜನೆಗಳ ಮಾಹಿತಿ ಕೊಡುವ ವ್ಯವಸ್ಥೆಯೇ ಇಲ್ಲ' ಎಂದು ಅವರು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿಗಳಿಗೆ ಮನವಿ:

'ಈ ಬಗ್ಗೆ ನಾನು ನಿವಾಸಿ ಆಯುಕ್ತರಿಗೆ ಪತ್ರ ಬರೆದಿದ್ದೇನೆ. ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ಕೇವಲ ಸಿಬ್ಬಂದಿ ವಿರುದ್ಧ ಕ್ರಮ ಮಾತ್ರವಲ್ಲ, ಇಡೀ ವ್ಯವಸ್ಥೆ ಸುಧಾರಣೆ ಆಗಬೇಕು. ದೆಹಲಿಯಲ್ಲಿ ಇಬ್ಬರು ವಿಶೇಷ ಪ್ರತಿನಿಧಿಗಳು ಇದ್ದರೂ ಅವರು ಅವ್ಯವಸ್ಥೆ ಸರಿಪಡಿಸಲು ಮುಂದಾಗಿಲ್ಲ. ಸಾವಿರಾರು ಕೋಟಿ ಖರ್ಚು ಮಾಡಿ ಕಟ್ಟಿದ ಕರ್ನಾಟಕ ಭವನವು ಹೀಗೆ ನಿರುಪಯುಕ್ತವಾಗಿರುವುದು ರಾಜ್ಯಕ್ಕೆ ಲಜ್ಜಾಸ್ಪದ' ಎಂದು ಅವರು ಎಚ್ಚರಿಸಿದರು. ಕೊನೆಗೆ, ಮುಖ್ಯಮಂತ್ರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕರ್ನಾಟಕ ಭವನ ಇರುವುದೇನು ಉಪಯೋಗ? ಎಂದು ಸಂಸದ ಈರಣ್ಣ ಕಡಾಡಿ ಪ್ರಶ್ನಿಸಿದ್ದಾರೆ.