ಕುರುಬ ಸಮುದಾಯವನ್ನು ಎಸ್‌ಟಿ ಸಮುದಾಯಕ್ಕೆ ಸೇರಿಸುವ ಪ್ರಸ್ತಾಪ ಹಿಂದಿನಿಂದಲೂ ಇದ್ದು, ತಮ್ಮ ಸರ್ಕಾರದ ಅವಧಿಯಲ್ಲಿ ಕುಲಶಾಸ್ತ್ರೀಯ ಅಧ್ಯಯನ ವರದಿ ಬಂದಿತ್ತು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈಗಿನ ಕಾಂಗ್ರೆಸ್ ಸರ್ಕಾರ ಅದನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ ಎಂದರು.
ಬೆಂಗಳೂರು (ಅ.10): ಕುರುಬ ಸಮುದಾಯವನ್ನು ಎಸ್‌ಟಿ ಸಮುದಾಯಕ್ಕೆ ಸೇರಿಸಲು ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಂದ್ರಕ್ಕೆ ಪ್ರಸ್ತಾಪ ಹೋಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದ ಅವಧಿಯಲ್ಲಿ ಕುಲಶಾಸ್ತ್ರಿಯ ಅಧ್ಯಯನ ವರದಿ ಬಂದಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಅದನ್ನು ಪರಿಶೀಲನೆ ಮಾಡಿ ಕಳೆದ 2023ರ ಜು.20ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ತಿಳಿಸಿದರು.
ಕುಲ ಶಾಸ್ತ್ರೀಯ ಅಧ್ಯಯನ ಮಾಡಿಸುವಂತೆ ಕೇಂದ್ರದಿಂದ ರಾಜ್ಯಕ್ಕೆ ವಾಪಸ್ ಬಂದಿತ್ತು. ಅಂದಿನ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಆದೇಶ ಮಾಡಿತ್ತು. ನಮ್ಮ ಅವಧಿಯಲ್ಲಿ ಕುಲಶಾಸ್ತ್ರಿಯ ಅಧ್ಯಯನ ವರದಿ ಬಂದಿತ್ತು. ಅದನ್ನು ನಮ್ಮ ಸರ್ಕಾರ ಒಪ್ಪಿತು. ಅಷ್ಟರಲ್ಲಿ ಚುನಾವಣೆ ಬಂದು ನಮ್ಮ ಸರ್ಕಾರದ ಅವಧಿ ಮುಗಿಯಿತು. ಈಗಿನ ಕಾಂಗ್ರೆಸ್ ಸರ್ಕಾರ ಅದನ್ನು ಪರಿಶೀಲನೆ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಸರ್ಕಾರ ದಾಖಲೆಗಳನ್ನು ತೆಗೆದು ನೋಡಲಿ ಎಂದು ವಿವರಿಸಿದರು.
ಇದನ್ನೂ ಓದಿ: ಕುರುಬರನ್ನು ಎಸ್ಟಿಗೆ ಸೇರಿಸಲು ಹೇಗೆ ಸಾಧ್ಯ?: ಮಾಜಿ ಸಂಸದ ಉಗ್ರಪ್ಪ ಆಕ್ರೋಶ
ಈಗ ವಿಷಯ ಸಿದ್ದರಾಮಯ್ಯ ಅವರ ಕೈಯಲ್ಲಿ ಇದೆ. ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬದನ್ನು ನೋಡಬೇಕು. ವಾಲ್ಮೀಕಿ ಸಮುದಾಯ ಮತ್ತು ಕುರುಬರ ನಡುವೆ ಏನೂ ಸಮಸ್ಯೆ ಆಗುವುದಿಲ್ಲ. ಅಹಿಂದ ನಾಯಕ ಸಿದ್ದರಾಮಯ್ಯ ಅವರೇ ಇದ್ದಾರೆ. ಮೀಸಲಾತಿ ಹೆಚ್ಚಳ ಮಾಡುವುದು ಅಷ್ಟು ಸುಲಭವಿಲ್ಲ ಎಂದರು.
ಇದೇ ವೇಳೆ ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾದ ಪ್ರವಾಹಕ್ಕೆ ರಾಜ್ಯ ಸರ್ಕಾರ ತಕ್ಷಣವೇ ಕೇಂದ್ರ ಸರ್ಕಾರ ನೀಡುವ ಎರಡು ಪಟ್ಟು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
