ಸಚಿವ ರಾಮಲಿಂಗಾ ರೆಡ್ಡಿ ಖಾಸಗಿ ಆಸ್ಪತ್ರೆ ಉದ್ಘಾಟನೆಗೆ ತೆರಳಿದ್ದ ಸಚಿವ ರಾಮಲಿಂಗಾ ರೆಡ್ಡಿ ಲಿಫ್ಟ್‌ನಲ್ಲಿ ಸಿಲುಕಿದ ಘಟನೆ ನಡೆದಿದೆ.
ಆನೇಕಲ್ (ಆ.10) : ಖಾಸಗಿ ಆಸ್ಪತ್ರೆ ಉದ್ಘಾಟನೆಗೆ ಸಚಿವ ರಾಮಲಿಂಗಾ ರೆಡ್ಡಿಯನ್ನು ಆಹ್ವಾನಿಸಲಾಗಿತ್ತು. ಕಾರ್ಯಕ್ರಮಕ್ಕೆ ತೆರಳಿದ ರಾಮಲಿಂಗಾ ರೆಡ್ಡಿಗೆ ಅದ್ಧೂರಿ ಸ್ವಾಗತ ನೀಡಿದ್ದಾರೆ. ಬಳಿಕ ಲಿಫ್ಟ್ ಮೂಲಕ ಮೊಹಲ ಮಹಡಿಗೆ ಕರೆದೊಯ್ದಿದ್ದಾರೆ. ಆದರೆ ಲಿಫ್ಟ್ ಅರ್ಧದಲ್ಲಿ ಬಾಕಿಯಾಗಿದೆ. ಹೀಗಾಗಿ ಕೆಲ ಹೊತ್ತು ರಾಮಲಿಂಗಾ ರೆಡ್ಡಿ ಲಿಫ್ಟ್‌ನಲ್ಲಿ ಸಿಲುಕಿ ಪರದಾಡಬೇಕಾಯಿತು. ಬಳಿಕ ತಾಂತ್ರಿಕ ಸಿಬ್ಬಂದಿಗಳು ಆಗಮಿಸಿ ಲಿಫ್ಟ್ ಬಾಗಿಲು ತೆರೆದು ಸಚಿವರು ಹಾಗೂ ಇತರರನ್ನು ಹೊರ ತಂದ ಘಟನೆ ಹೊಸೂರಿನಲ್ಲಿ ನಡೆದಿದೆ.
ಹೊಸೂರು ಖಾಸಗಿ ಆಸ್ಪತ್ರೆ ಉದ್ಘಾಟನೆಗೆ ತೆರಳಿದಾಗ ಘಟನೆ
ಕರ್ನಾಟಕ ತಮಿಳುನಾಡು ಗಡಿ ಭಾಗದಲ್ಲಿರುವ ಹೊಸೂರಿನಲ್ಲಿ ಖಾಸಗಿ ಆಸ್ಪತ್ರೆ ಉದ್ಘಾಟನೆಗೆ ಸಚಿವ ರಾಮಲಿಂಗಾ ರೆಡ್ಡಿ ತೆರಳಿದ್ದರು. ಹೊಸೂರು ಶಾಸಕ ಪ್ರಕಾಶ್ ರಾಮಲಿಂಗಾ ರೆಡ್ಡಿಯನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಮೊದಲ ಮಹಡಿಯಲ್ಲಿ ರಿಬ್ಬನ್ ಕತ್ತರಿಸಿ ಆಸ್ಪತ್ರೆ ಉದ್ಘಾಟಿಸಲು ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು. ಸಚಿವ ರಾಮಲಿಂಗಾ ರೆಡ್ಡಿ ಶಾಸಕ ಪ್ರಕಾಶ್ ಸೇರಿದಂತೆ ಆಸ್ಪತ್ರೆ ಪ್ರಮುಖರು ನೆಲಮಹಡಿಯಿಂದ ಮೊದಲ ಮಹಡಿಗೆ ಲಿಫ್ಟ್ ಮೂಲಕ ತೆರಳಿದ್ದಾರೆ. ಹೆಚ್ಚಿನ ಜನರು ಸಚಿವರು, ಶಾಸಕರ ಜೊತೆ ತೆರಳಿದ ಕಾರಣ ಲಿಫ್ಟ್ ಅರ್ಧಕ್ಕೆ ಓವರ್ ಲೋಡ್ ಕಾರಣ ನಿಂತಿದೆ.
10 ನಿಮಿಷ ಲಿಫ್ಟ್‌ನಲ್ಲೇ ಸಚಿವರು ಬಾಕಿ
ಲಿಫ್ಟ್ ಓವರ್ ಲೋಡ್ ಕಾರಣದಿಂದ ನಿಂತಿದೆ. ಇತ್ತ 10 ನಿಮಿಷಗಳ ಕಾಲ ಲಿಫ್ಟ್ ಅದೇನೆ ಮಾಡಿದರೂ ಮುಂದೆ ಸಾಗುತ್ತಿಲ್ಲ, ಬಾಗಿಲು ತೆರೆಯುತ್ತಿಲ್ಲ. ಇತ್ತ ತಾಂತ್ರಿಕ ಸಿಬ್ಬಂದಿಗಳಿಗೆ ಕರೆ ಮಾಡಲಾಗಿತ್ತು. ಸಿಬ್ಬಂದಿಗಳು ಆಗಮಿಸಿ ಲಿಫ್ಟ್ ಬಾಗಿಲು ತೆರೆದಿದ್ದಾರೆ. ಬಳಿಕ ಎಲ್ಲರನ್ನೂ ಲಿಫ್ಟ್‌ನಿಂದ ಸುರಕ್ಷಿತವಾಗಿ ಹೊರಗೆ ತಂದಿದ್ದಾರೆ.
ಮೆಟ್ಟಿಲು ಹತ್ತಿ ತೆರಳಿದ ರಾಮಲಿಂಗಾ ರೆಡ್ಡಿ
ಲಿಫ್ಟ್‌ನಿಂದ ಹೊರಬಂದ ಶಾಸಕ ರಾಮಲಿಂಗಾ ರೆಡ್ಡಿ ಬಳಿಕ ಮೆಟ್ಟಿಲು ಹತ್ತಿ ಮೊದಲ ಮಹಡಿಗೆ ತೆರಳಿದ್ದಾರೆ. ಬಳಿಕ ಆಸ್ಪತ್ರೆ ಉದ್ಘಾಟಿಸಿದ್ದಾರೆ. ಆಸ್ಪತ್ರೆ ಮುಖ್ಯಸ್ಥರು, ಸೇರಿದಂತೆ ಹಲವರು ರಾಮಲಿಂಗಾ ರೆಡ್ಡಿ ಬಳಿ ಅಡಚಣೆಗೆ ಕ್ಷಮಿಸಲು ಕೋರಿದ್ದಾರೆ. ಎಲ್ಲರೊಂದಿಗೆ ಆತ್ಮೀಯವಾಗಿ ಮಾತನಾಡಿದ ರಾಮಲಿಂಗಾ ರೆಡ್ಡಿ ಆಸ್ಪತ್ರೆ ಉದ್ಘಾಟಿಸಿ ತೆರಳಿದ್ದಾರೆ.
