Madikeri Dasara 2025: ಮಡಿಕೇರಿ ದಸರಾ ಮಂಟಪ ಪ್ರಶಸ್ತಿ ವಿಚಾರವಾಗಿ ಗಲಾಟೆ ನಡೆದಿದೆ. ತೀರ್ಪಿನ ಬಗ್ಗೆ ಅಸಮಾಧಾನಗೊಂಡ ಕರವಲೆ ಭಗವತಿ ದೇವಾಲಯ ಸಮಿತಿ ವೇದಿಕೆ ಏರಿ ದಾಂಧಲೆ ನಡೆಸಿದೆ. ಈ ವೇಳೆ ಗಲಾಟೆ ನಿಯಂತ್ರಿಸಲು ಹೋದ ಡಿವೈಎಸ್ಪಿ ಸೂರಜ್ ಅವರ ಮೇಲೆ ಹಲ್ಲೆ. ವೈಭವದ ದಸರಾಕ್ಕೆ ಕಪ್ಪುಚುಕ್ಕಿ ಇಟ್ಟಿದೆ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ ಕೊಡಗು
ಕೊಡಗು (ಅ.3): ಪ್ರತೀ ವರ್ಷ ಸುರಾಸುರರೇ ಭೂಲೋಕಕ್ಕೆ ಇಳಿದಿದ್ದಾರೇನು ಎನ್ನುವಂತೆ ಭಾಸವಾಗುವ ಮಡಿಕೇರಿ ದಸರೆ ಲಕ್ಷಾಂತರ ನೋಡುಗರನ್ನು ತನ್ನತ್ತ ಸೆಳೆಯುವ ಮೂಲಕ ಪ್ರಸಿದ್ಧವಾಗುತ್ತದೆ. ಎಲ್ಲವೂ ಅಂದುಕೊಂಡಂತೆ ಇನ್ನೊಂದೇ ಗಂಟೆ ಕಳೆದಿದ್ದರೆ ಮಡಿಕೇರಿ ದಸರಾಕ್ಕೆ ತೆರೆ ಬೀಳುವುದರಲ್ಲಿತ್ತು. ಆದರೆ ಪ್ರಶಸ್ತಿಗಾಗಿ ನಡೆದ ಗಲಾಟೆ ಮಡಿಕೇರಿ ದಸರಾಕ್ಕೆ ಕಪ್ಪುಚುಕ್ಕೆ ಇಟ್ಟಿದೆ.
ಮಂಜಿನ ನಗರಿ ಮಡಿಕೇರಿ ದಸರೆಯಲ್ಲಿ ಸುರಾಸರರ ನಡುವೆ ಕಾಳವೇ ನಡೆಯುತ್ತದೆ. ಇದು ಮಡಿಕೇರಿಯ ಹತ್ತು ದೇವಾಲಯಗಳು ನಿರ್ಮಿಸುವ ಮಂಟಪಗಳ ಮೆರವಣಿಗೆ ದೃಶ್ಯ. ಆದರೆ ಪ್ರಶಸ್ತಿಗಾಗಿ ಮಂಟಪ ಸಮಿತಿ ಮತ್ತು ಪೊಲೀಸರ ನಡುವೆ ಗಲಾಟೆಗೆ ಕಾರಣವಾಗಿದೆ. ಹೌದು ಮಡಿಕೇರಿ ದಸರಾ ಶೋಭಾಯಾತ್ರೆಯಲ್ಲಿ ಪ್ರದರ್ಶನ ನೀಡಿದ ಮಂಟಪಗಳ ನಡುವೆ ಪ್ರಶಸ್ತಿ ವಿಷಯಕ್ಕೆ ಶುರುವಾದ ಗಲಾಟೆ ಪೊಲೀಸರ ಮೇಲೆ ಹಲ್ಲೆಯಾಗುವುದರಲ್ಲಿ ಸಮಾಪ್ತಿಯಾಗಿದೆ.
ಇದನ್ನೂ ಓದಿ: ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣದಲ್ಲಿ ಆರೋಪಿಗಳು ಖುಲಾಸೆ, ತೀರ್ಪಿನ ವಿಷಯ ತಿಳಿದು ತಾಯಿ ಕಣ್ಣೀರು!
ಗಲಾಟೆಗೆ ಕಾರಣವೇನು?
ರಾತ್ರಿ ಪೂರ್ತಿ ಮಡಿಕೇರಿಯಲ್ಲಿ ಹತ್ತು ದೇವಾಲಯಗಳಿಂದ ನಿರ್ಮಿಸುವ ಚಲನವಲನಗಳು ಇರುವ ಮಂಟಪಗಳು ಪ್ರದರ್ಶನ ನೀಡುತ್ತವೆ. ಕೂಡ ಪ್ರಥಮ ಸ್ಥಾನ ಪಡೆಯುವ ಮಂಟಪಕ್ಕೆ 8 ಗ್ರಾಂ ತೂಕದ ಚಿನ್ನದ ನಾಣ್ಯ ನೀಡಿದರೆ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 4 ಗ್ರಾಂ ತೂಕದ ಚಿನ್ನದ ನಾಣ್ಯ ನೀಡಲಾಗುತ್ತದೆ. ಇನ್ನು ಮೂರನೇ ಸ್ಥಾನ ಪಡೆಯುವ ಮಂಟಪಕ್ಕೆ ಬೆಳ್ಳಿ ನಾಣ್ಯ ನೀಡಲಾಗುತ್ತದೆ. ಸ್ಥಾನಗಳನ್ನು ಪಡೆಯುವುದು ಪ್ರತಿಷ್ಠೆಯಾಗಿರುತ್ತದೆ. ಇದೇ ಸ್ಪರ್ಧೆಯಿಂದ ನಡೆದ ಪ್ರದರ್ಶನದಲ್ಲಿ ತೀರ್ಪನ್ನು ಸರಿಯಾಗಿ ನೀಡದೆ ಮೋಸ ಮಾಡಲಾಗಿದೆ ಎಂದು ಆರೋಪಿ ಕರವಲೆ ಭಗವತಿ ದೇವಾಲಯದ ಮಂಟಪ ಸಮಿತಿ ಗಲಾಟೆ ಮಾಡಿದೆ. ನಮಗೆ ಬರಬೇಕಾಗಿದ್ದ ಪ್ರಶಸ್ತಿ ಕೈತಪ್ಪಿದೆ ಎಂದು ಮಂಟಪ ಸಮಿತಿಯ ಸದಸ್ಯರು ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆ ಮಡಿಕೇರಿ ಗಾಂಧಿ ಮೈದಾನದಲ್ಲಿನ ವೇದಿಕೆ ಮೇಲೇರಿ ಗಲಾಟೆ ಮಾಡಿದ್ದಾರೆ. ಈ ಗಲಾಟೆ ವಿಕೋಪಕ್ಕೆ ತಿರುಗಿ ಅಲ್ಲಿದ್ದ ಪೋಡಿಯಂ, ಪ್ರಶಸ್ತಿ ಫಲಕಗಳನ್ನು ಕಿತ್ತೆಸುದು ಚೂರು ಚೂರು ಮಾಡಿದ್ದಾರೆ. ಒಂದೇ ವೇದಿಕೆಯಲ್ಲಿ ಒಂದೆಡೆ ಪ್ರಶಸ್ತಿ ಪಡೆದ ಕೋಟೆ ಮಾರಿಯಮ್ಮ ಮತ್ತು ಕೋಟೆ ಗಣಪತಿ ದೇವಾಲಯ ಮಂಟಪದ ಸಮಿತಿಯವರು ಸಂಭ್ರಮಿಸುತ್ತಿದ್ದರೆ, ಮತ್ತೊಂದೆಡೆ ಕರವಲೆ ಭಗವತಿ ದೇವಾಲಯ ಮಂಟಪ ಸಮಿತಿ ಸದಸ್ಯರು ಗಲಾಟೆ ಮಾಡುತ್ತಿದ್ದರು.
ಡಿವೈಎಸ್ಪಿ ಸೂರಜ್ ಮೇಲೆ ಹಲ್ಲೆ:
ಗಲಾಟೆಯನ್ನು ನಿಯಂತ್ರಿಸಲು ಹೋದ ಮಡಿಕೇರಿ ಡಿವೈಎಸ್ಪಿ ಸೂರಜ್ ಅವರ ಮೇಲೆ ಹಲ್ಲೆ ಮಾಡಲಾಗಿದೆ. ನೂಕಾಟ, ತಳ್ಳಾಟ ನಡೆಸಿದ ಯುವಕ ಯಕ್ಷಿತ್ ಎಂಬಾತ ಡಿವೈಎಸ್ಪಿ ಸೂರಜ್ ಅವರನ್ನು ಹಿಡಿದು ತಳ್ಳಿದ್ದಾನೆ. ಡಿವೈಎಸ್ಪಿ ಸೂರಜ್ ಅವರು ವೇದಿಕೆ ಮೇಲಿಂದ ಬಿದ್ದಿದ್ದಾರೆ. ಈ ವೇಳೆ ಅವರ ತಲೆ ಹಾಗೂ ಕಾಲಿಗೆ ಪೆಟ್ಟಾಗಿದೆ. ಜೊತೆಗೆ ಪಿಎಸ್ಐ ಒಬ್ಬರಿಗೂ ಪೆಟ್ಟಾಗಿದೆ. ಪೊಲೀಸರ ಮೇಲೆಯೇ ಹಲ್ಲೆಯಾಗುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಹಲ್ಲೆ ನಡೆಸಿದ ಯಕ್ಷಿತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಿಎನ್ಎಸ್ ಸೆಕ್ಷನ್ 132 ಹಾಗೂ 355 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಮಲೆ ಮಹದೇಶ್ವರ ಕಾಡಲ್ಲಿ ಮತ್ತೊಂದು ಹುಲಿ ಬಲಿ, ಹತ್ಯೆಗೆ ಕಾರಣ ನಿಗೂಢ!
ಕೊಡಗು ಎಸ್ಪಿ ರಾಮರಾಜನ್ ಹೇಳಿದ್ದೇನು?
ಈ ಕುರಿತು ಮಾತನಾಡಿರುವ ಕೊಡಗು ಎಸ್ಪಿ ರಾಮರಾಜನ್ ಕೆ. ಅವರು ದಸರೆಗೂ ಮೊದಲೇ ಮೆರವಣಿಗೆಯಲ್ಲಿ ಸಾಗುವ ಮಂಟಪಗಳ ಜಡ್ಜ್ಮೆಂಟ್ ಮಾಡಿ ಪ್ರಶಸ್ತಿ ಘೋಷಿಸುವುದು ಬೇಡ. ಎಲ್ಲಾ ಮಂಟಗಳವರು ತುಂಬಾ ಶ್ರಮ ವಹಿಸಿ ಮಂಟಪ ನಿರ್ಮಿಸಿ ಪ್ರದರ್ಶನ ಮಾಡುತ್ತಾರೆ. ದೇವರ ಕಾರ್ಯಗಳಲ್ಲಿ ಜಡ್ಜ್ಮೆಂಟ್ ಏಕೆ ಎಂದು ಹೇಳಿದ್ದೆ. ಆದರೂ ಜಡ್ಜ್ಮೆಂಟ್ ಮಾಡಿ ಪ್ರಶಸ್ತಿ ಘೋಷಿಸಿದ್ದಾರೆ. ಇದರಿಂದ ಪ್ರಶಸ್ತಿ ಸಿಗದ ಕರವಲೆ ಭಗವತಿ ದೇವಾಲಯ ಮಂಟಪ ಸಮಿತಿಯವರು ವೇದಿಕೆ ಮೇಲೆ ಹೋಗಿ ಗಲಾಟೆ ಮಾಡಿದ್ದಾರೆ. ಇದನ್ನು ನಿಯಂತ್ರಿಸಲು ಹೋದ ಡಿವೈಎಸ್ಪಿ ಸೇರಿದಂತೆ ಇತರೆ ಸಿಬ್ಬಂದಿ ಮೇಲೆಯೂ ಹಲ್ಲೆ ಮಾಡಲಾಗಿದೆ. ಹೀಗಾಗಿ ಯಕ್ಷಿತ್ ಎಂಬಾತನನ್ನು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದೇವೆ. ಅಲ್ಲದೆ ಮಂಟಪ ಸಮಿತಿಯ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಎಲ್ಲವೂ ಶಾಂತಿಯುತವಾಗಿ ಮಡಿಕೇರಿ ದಸರಾ ನಡೆದಿದ್ದರೂ ಪ್ರಶಸ್ತಿ ವಿಷಯದಲ್ಲಿ ಮಂಟಪ ಸಮಿತಿಯೇ ಗಲಾಟೆ ಮಾಡಿದ್ದು ಮಡಿಕೇರಿ ದಸರಾಕ್ಕೆ ಕಪ್ಪುಚುಕ್ಕೆ ಇಟ್ಟಂತೆ ಆಗಿದೆ.
