Lokikere village Diwali mystery: ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮದಲ್ಲಿ ಸುಮಾರು ಎರಡು ಶತಮಾನಗಳಿಂದ ಶೇ.70ರಷ್ಟು ಕುಟುಂಬಗಳು ದೀಪಾವಳಿಯನ್ನು ಆಚರಿಸಲ್ಲ. ಹಬ್ಬಕ್ಕಾಗಿ ಕಾಡಿಗೆ ಹೋದ ಯುವಕರು ಹಿಂತಿರುಗದ ಕಾರಣ, ಈ ಗ್ರಾಮದ ನಿರ್ದಿಷ್ಟ ಸಮುದಾಯ ದೀಪಾವಳಿಯನ್ನು ಸೂತಕವೆಂದು ಪರಿಗಣಿಸುತ್ತಾರೆ.
ದಾವಣಗೆರೆ (ಅ.22): ಇಡೀ ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದರೆ, ದಾವಣಗೆರೆಯ ಲೋಕಿಕೆರೆ ಗ್ರಾಮದಲ್ಲಿ ಬಹುತೇಕ ಕುಟುಂಬಗಳು ದೀಪಾವಳಿಯನ್ನು ಆಚರಿಸಲ್ಲ. ಆರೇಳು ತಲೆಮಾರುಗಳಿಂದ ಈ ಗ್ರಾಮದಲ್ಲಿ ಈ ಸಂಪ್ರದಾಯ ನಡೆದು ಬಂದಿದೆ.
ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮದ ಪರಿಶಿಷ್ಟ ಜಾತಿಯ ಮಾದಿಗ ಸಮಾಜ, ಪರಿಶಿಷ್ಟ ಪಂಗಡದ ವಾಲ್ಮೀಕಿ ನಾಯಕ ಸಮಾಜ ಹಾಗೂ ಹಿಂದುಳಿದ ವರ್ಗವಾದ ಕುರುಬ ಸಮಾಜದ ಬಹುತೇಕ ಕುಟುಂಬಗಳಿಗೆ ದೀಪಾವಳಿ ಎಂದರೆ ಸೂತಕ ಛಾಯೆ ಆವರಿಸುತ್ತದೆ. ಗ್ರಾಮದ ಶೇ.70ರಷ್ಟು ಕುಟುಂಬಗಳಲ್ಲಿ ದೀಪಾವಳಿ ದಿನಗಳಲ್ಲಿ ನೀರವ ಮೌನವು ಆವರಿಸಿರುತ್ತದೆ.
ಲೋಕಿಕೆರೆ ಗ್ರಾಮದಲ್ಲಿ ದೀಪಾವಳಿ ಆಚರಿಸದಿರಲು ಕಾರವೇನು?
ಲೋಕಿಕೆರೆಯಲ್ಲಿ ದೀಪಾವಳಿ ಆಚರಿಸದೇ ಇರುವುದಕ್ಕೆ ಈ ಕುಟುಂಬಗಳಿಗೆ ಒಂದು ಕಹಿನೆನಪು ಇಂದಿಗೂ ಬಾಧಿಸುತ್ತಲೇ ಇದೆ. ಸುಮಾರು 2 ಶತಮಾನಗಳ ಹಿಂದೆ ಗ್ರಾಮದ ಯುವಕರು ಹಬ್ಬಕ್ಕೆ ಬೇಕಾದ ಕಾಚಿ ಕಡ್ಡಿ, ಉತ್ತರಾಣಿ ಕಡ್ಡಿ, ಬ್ರಹ್ಮದಂಡಿ ತರಲೆಂದು ಊರ ಹೊರಗಿದ್ದ ಕಾಡಿಗೆ ಹೋಗಿದ್ದರಂತೆ. ಆದರೆ, ಈ ಯುವಕರು ಮತ್ತೆ ಮನೆಗೆ ಮರಳಲೇ ಇಲ್ಲವಂತೆ. ಇಡೀ ಗ್ರಾಮಸ್ಥರು ಎಲ್ಲೆಡೆ ಹುಡುಕಾಡಿದರೂ ಊರಿನ ಯುವಕರ ಸುಳಿವೇ ಸಿಗಲಿಲ್ಲವಂತೆ. ಅಂದಿನಿಂದ ದೀಪಾವಳಿ ಆಚರಣೆ ಕೈಬಿಟ್ಟರಂತೆ. ನಮ್ಮ ಪೂರ್ವಜರು, ಹಿರಿಯರ ಸಲಹೆಯಂತೆ ನಾವು ಇಂದಿಗೂ ದೀಪಾವಳಿ ಆಚರಿಸುತ್ತಿಲ್ಲ.
ಬೇರೆಯವರ ದೀಪಾವಳಿ ಸಂಭ್ರಮ ಕಂಡು ಖುಷಿ ಪಡ್ತಾರೆ:
ಬೇರೆ ಜಾತಿಯವರು ದೀಪಾವಳಿ ಆಚರಿಸೋದನ್ನು ನೋಡಿ ಖುಷಿಪಡುತ್ತೇವೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಇದರ ಬದಲಿಗೆ ಮಹಾಲಯ ಅಮವಾಸ್ಯೆಯಂದು ಈ ನೊಂದ ಸಮುದಾಯಗಳು, ಕುಟುಂಬಗಳು ಹಬ್ಬ ಆಚರಿಸುತ್ತಾರೆ. ಅಂದು ಆಚರಿಸುವ ಹಿರಿಯರ ಹಬ್ಬವೇ ಇವರಿಗೆ ದೀಪಾವಳಿಯ ಸಂಭ್ರಮ.


