ರಾಜ್ಯ ಮತ್ತು ಜಿಲ್ಲಾಮಟ್ಟದ ಸರ್ಕಾರಿ ಕಾರ್ಯಕ್ರಮಗಳಲ್ಲಿ ವೇದಿಕೆ ಮೇಲಿನ ಅತಿಥಿಗಳ ಸಂಖ್ಯೆಯನ್ನು 9ಕ್ಕೆ ಸೀಮಿತಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಅನಿವಾರ್ಯ ಸಂದರ್ಭಗಳಲ್ಲಿ 13 ಮಂದಿಗೆ ಅವಕಾಶ ನೀಡಬಹುದು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಬಗ್ಗೆ ಅಂತಿಮ ನಿರ್ಧಾರದ ಅಧಿಕಾರ ನೀಡಲಾಗಿದೆ.

 ಬೆಂಗಳೂರು (ಸೆ.12): ರಾಜ್ಯ ಹಾಗೂ ಜಿಲ್ಲಾಮಟ್ಟದ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಸ್ತು ತರುವ ಸಲುವಾಗಿ ವೇದಿಕೆ ಮೇಲೆ ಆಸೀನರಾಗುವ ಅತಿಥಿಗಳಿಗೆ ರಾಜ್ಯ ಸರ್ಕಾರ ಕಡಿವಾಣ ವಿಧಿಸಲು ತೀರ್ಮಾನಿಸಿದ್ದು, ಸರ್ಕಾರಿ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳಲ್ಲಿನ ಅತಿಥಿಗಳ ಹೆಸರನ್ನು 9ಕ್ಕೆ ಸೀಮಿತಗೊಳಿಸಲು ಶಿಷ್ಟಾಚಾರ ನಿಯಮಗಳನ್ನು ರೂಪಿಸಿದೆ.

ಇದೇ ವೇಳೆ ತೀರಾ ಅನಿವಾರ್ಯವಾದರೆ ಮಾತ್ರ 13 ಮಂದಿ ಅತಿಥಿಗಳವರೆಗೆ ಅವಕಾಶ ನೀಡಬಹುದು. ಈ ಶಿಷ್ಟಾಚಾರ ನಿಯಮ ಪಾಲನೆ ಹಾಗೂ ಅತಿಥಿಗಳ ಸಂಖ್ಯೆ ನಿರ್ಧರಿಸುವ ಅಧಿಕಾರವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹೊಂದಿರತಕ್ಕದ್ದು ಎಂದು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಚಿವ ಎಚ್.ಕೆ. ಪಾಟೀಲ್‌, ಶಿಷ್ಟಾಚಾರ ಪಟ್ಟಿಯನ್ನು ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಅಂತಿಮಗೊಳಿಸಲು ಅವಕಾಶ ಕಲ್ಪಿಸಲಾಗುತ್ತದೆ. ವಾಸ್ತವಿಕ ಪರಿಸ್ಥಿತಿ ನೋಡಿಕೊಂಡು ಉಸ್ತುವಾರಿ ಸಚಿವರು ಈ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಿದ್ದಾರೆ. ಈ ನಿರ್ಧಾರಕ್ಕೂ ಆರ್‌ಸಿಬಿ ತಂಡದ ಸನ್ಮಾನ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.

ಆಹ್ವಾನ ಪತ್ರಿಕೆಯಲ್ಲಿ ಇಲ್ಲದವರೂ ಕಾರ್ಯಕ್ರಮದ ವೇದಿಕೆಯಲ್ಲಿ ಬಂದು ಆಸೀನರಾಗುತ್ತಾರಲ್ಲ ಎಂಬ ಪ್ರಶ್ನೆಗೆ, ‘ಅದು ಶಿಷ್ಟಾಚಾರದ ವ್ಯಾಪ್ತಿಗೆ ಬರುವುದಿಲ್ಲ; ಅದು ಅಶಿಸ್ತು ಆಗುತ್ತದೆ’ ಎಂದಷ್ಟೇ ಹೇಳಿದರು.

ಈ ಶಿಷ್ಟಾಚಾರ ತರುವ ಉದ್ದೇಶ ಯಾರನ್ನೂ ಕಡೆಗಣಿಸುವುದಲ್ಲ. ಸರ್ಕಾರಿ ಕಾರ್ಯಕ್ರಮಗಳನ್ನು ಶಿಸ್ತುಗೊಳಿಸುವ ಭಾಗವಾಗಿದೆ ಅಷ್ಟೇ. ಆಹ್ವಾನ ಪತ್ರಿಕೆಯಲ್ಲಿ ಸಾಕಷ್ಟು ಹೆಸರು ಮುದ್ರಿಸಲಾಗುತ್ತದೆ. ಅವರು ಯಾರೂ ಬರುವುದಿಲ್ಲ. ಹೀಗಾಗಿ ಈ ಶಿಷ್ಟಾಚಾರ ಎಂದರು.