KS Eshwarappa passport renewal case: ಕ್ರಿಮಿನಲ್ ಪ್ರಕರಣಗಳು ಬಾಕಿಯಿವೆ ಎಂಬ ಕಾರಣಕ್ಕೆ ತಮ್ಮ ಪಾಸ್‌ಪೋರ್ಟ್ ನವೀಕರಣ ನಿರಾಕರಿಸಿದ್ದನ್ನು ಪ್ರಶ್ನಿಸಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸಲ್ಲಿಸಿದ್ದ ಅರ್ಜಿಗೆ ಹೈಕೋರ್ಟ್ ಸ್ಪಂದಿಸಿದೆ. ಒಂದು ವರ್ಷದ ಅವಧಿಗೆ ಪಾಸ್‌ಪೋರ್ಟ್ ನವೀಕರಿಸುವಂತೆ ಆದೇಶ.
ಬೆಂಗಳೂರು (ಅ.16): ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಪಾಸ್ ಪೋರ್ಟ್ ಅನ್ನು ಒಂದು ವರ್ಷದ ಅವಧಿಯವರೆಗೆ ನವೀಕರಿಸುವಂತೆ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿಗೆ ಹೈಕೋರ್ಟ್ ಸೂಚಿಸಿದೆ.
ತಮ್ಮ ಪಾಸ್‌ಪೋರ್ಟ್ ನವೀಕರಿಸಲು ನಿರಾಕರಿಸಿದ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿಯ ಕ್ರಮ ಪ್ರಶ್ನಿಸಿ ಈಶ್ವರಪ್ಪ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ ಈ ಆದೇಶ ಮಾಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎಂ.ವಿನೋದ್ ಕುಮಾರ್ ವಾದ ಮಂಡಿಸಿ, ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಪ್ರಕರಣಗಳು ಬಾಕಿಯಿವೆ ಎಂಬ ಕಾರಣಕ್ಕೆ ಪಾಸ್‌ಪೋರ್ಟ್ ನವೀಕರಿಸಲು ನಿರಾಕರಿಸಲಾಗಿದೆ. ಅರ್ಜಿದಾರರ ವಿರುದ್ಧ ದಾಖಲಾಗಿದ್ದ ಏಳು ಕ್ರಿಮಿನಲ್ ಪ್ರಕರಣಗಳ ಪೈಕಿ, ಐದು ಪ್ರಕರಣಗಳು ವಿಚಾರಣೆಗೆ ಬಾಕಿಯಿವೆ. ಇದರಿಂದ ನವೀಕರಣಕ್ಕೆ ತಕರಾರು ತೆಗೆಯಲಾಗುತ್ತಿದೆ. ಪೊಲೀಸ್ ಪರಿಶೀಲನೆ ಸಹ ವಿಳಂಬವಾಗುತ್ತಿದೆ. ಆದ್ದರಿಂದ, ಪಾಸ್‌ಪೋರ್ಟ್ ನವೀಕರಿಸಲು ನಿರ್ದೇಶಿಸಬೇಕು ಎಂದು ಮನವಿ ಮಾಡಿದರು.
ಈ ಮನವಿಗೆ ಒಪ್ಪಿದ ನ್ಯಾಯಪೀಠ, ಒಂದು ವರ್ಷದವರೆಗೆ ಅರ್ಜಿದಾರರ ಪಾಸ್ ಪೋರ್ಟ್ ನವೀಕರಿಸಲು ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿಗೆ ಆದೇಶಿಸಿತು. ಅರ್ಜಿದಾರರು ದೇಶದಿಂದ ಹೊರಗೆ ಹೋಗುವಾಗ ಕೋರ್ಟ್‌ಗೆ ಪ್ರವಾಸದ ವಿವರವನ್ನು ಸ್ಥಳೀಯ ಸಕ್ಷಮ ಪ್ರಾಧಿಕಾರಕ್ಕೆ ಒದಗಿಸಬೇಕು. ವಿದೇಶದಿಂದ ಬಂದ ನಂತರವೂ ಕೋರ್ಟ್‌ಗೆ ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿದೆ.
