ಪ್ರಸಕ್ತ ವರ್ಷದಲ್ಲಿ ಮೂರನೇ ಬಾರಿಗೆ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯ ಭರ್ತಿಯಾಗಿ ದಾಖಲೆ ನಿರ್ಮಿಸಿದೆ. ಇದರಿಂದ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಹಾಗೂ ರೈತರ ಬೆಳೆಗಳಿಗೆ ನೀರಿನ ಕೊರತೆ ಉಂಟಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಅ.27): ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಪ್ರಸಕ್ತ ವರ್ಷದಲ್ಲಿ ಮೂರನೇ ಬಾರಿಗೆ ಕೃಷ್ಣರಾಜ ಸಾಗರ ಜಲಾಶಯ ಭರ್ತಿಯಾಗಿದ್ದು, ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಹಾಗೂ ರೈತರ ಬೆಳೆಗಳಿಗೆ ನೀರಿನ ಕೊರತೆ ಉಂಟಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
93 ವರ್ಷದ ಬಳಿಕ ಕೆಆರ್‌ಎಸ್ ಜೂನ್‌ನಲ್ಲೇ ಭರ್ತಿ
93 ವರ್ಷದ ಬಳಿಕ ಕೆಆರ್‌ಎಸ್ ಜೂನ್‌ನಲ್ಲೇ ಭರ್ತಿಯಾಗಿ ಇತಿಹಾಸ ಸೃಷ್ಟಿಸಿದೆ. ಅಕ್ಟೋಬರ್ 2ನೇ ವಾರದಲ್ಲಿ ಜಲಾಶಯ ಎರಡನೇ ಬಾರಿ ಭರ್ತಿಯಾಗಿತ್ತು. ಅ.18 ರಿಂದ 23ರವರೆಗೆ ಅಣೆಕಟ್ಟೆಯ ಗರಿಷ್ಠ ಸಾಮರ್ಥ್ಯ 124.80 ಅಡಿಗಳಷ್ಟು ನೀರು ಸಂಗ್ರಹವಾಗುವ ಮೂಲಕ ವರ್ಷದಲ್ಲಿ ಮೂರನೇ ಬಾರಿ ಜಲಾಶಯ ಭರ್ತಿಯಾಗಿ ದಾಖಲೆ ನಿರ್ಮಿಸಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
ಕೆಆರ್‌ಎಸ್ ಭರ್ತಿಗೆ ಹರ್ಷ ವ್ಯಕ್ತಪಡಿಸಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ತಮಿಳುನಾಡಿಗೆ ಈ ವರ್ಷ ಈವರೆಗೆ ಹರಿಸಬೇಕಾಗಿದ್ದ ನೀರಿನ ಪ್ರಮಾಣಕ್ಕಿಂತ ದುಪ್ಪಟ್ಟು ಹರಿಸಿದ್ದೇವೆ. ಹೀಗಾಗಿ ತಮಿಳುನಾಡಿಗೆ ನೀರು ಹರಿಸುವ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.
ಪ್ರಸ್ತುತ ಕಾವೇರಿ ಜಲಾನಯನ ಪ್ರದೇಶದ ಹಾರಂಗಿ, ಕೆಆರ್‌ಎಸ್, ಕಬಿನಿ, ಹೇಮಾವತಿ ಜಲಾಶಯಗಳು ಭರ್ತಿಯಾಗಿ 115 ಟಿಎಂಸಿ ನೀರು ಸಂಗ್ರಹವಿದೆ. ಜತೆಗೆ ಜಲಾನಯನ ಪ್ರದೇಶದಲ್ಲಿರುವ ಕಾವೇರಿ ನೀರಾವರಿ ನಿಗಮದ 6,576 ಕೆರೆಗಳು ಸಂಪೂರ್ಣ ಭರ್ತಿಯಾಗಿವೆ. ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಇಲಾಖೆ ಕೆರೆಗಳೂ ಭರ್ತಿಯಾಗಿದ್ದು, ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದಿಲ್ಲ.
ಬೆಂಗಳೂರಿಗೆ ವರ್ಷಕ್ಕೆ ಎಷ್ಟು ಟಿಎಂಸಿ ಕುಡಿಯುವ ನೀರು ಬೇಕು?
ಬೆಂಗಳೂರಿಗೆ ವರ್ಷಕ್ಕೆ 31 ಟಿಎಂಸಿ ಕುಡಿಯುವ ನೀರು ಅಗತ್ಯವಿದ್ದು, ಪ್ರತಿ ತಿಂಗಳು ಬೆಂಗಳೂರಿಗರಿಗೆ 2.60 ಟಿಎಂಸಿ ನೀರಿನ ಅವಶ್ಯಕತೆ ಇದೆ. ಕೆಆರ್‌ಎಸ್ ಜೊತೆ ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟು, ಕೆರೆ ಭರ್ತಿಯಾಗಿದೆ. ಇನ್ನು ಜಲಾಶಯ, ಕೆರೆಗಳ ಭರ್ತಿಯಿಂದ ಸ್ಥಳೀಯವಾಗಿ ರೈತರಿಗೂ ಬೆಳೆಗಳಿಗೆ ನೀರಿನ ಕೊರತೆಯಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಿಗದಿಗಿಂತ ಹೆಚ್ಚು ನೀರು:
ಸುಪ್ರೀಂ ಕೋರ್ಟ್, ನ್ಯಾಯಾಧಿಕರಣದ ತೀರ್ಪಿನಂತೆ ತಮಿಳುನಾಡಿಗೆ ವಾರ್ಷಿಕ 177.25 ಟಿಎಂಸಿ ನೀರು ಹರಿಸಬೇಕಿತ್ತು. 2025ರ ಜೂನ್‌ನಿಂದ ಈವರೆಗೆ ಬಿಳಿಗೊಂಡ್ಲು ಜಲಮಾಪನ ಕೇಂದ್ರದಿಂದ 138 ಟಿಎಂಸಿ ನೀರು ಬಿಳಿಗೊಂಡ್ಲು ಜಲಮಾಪನ ಕೇಂದ್ರದಿಂದ ತಮಿಳುನಾಡಿಗೆ ಬಿಡಬೇಕಿತ್ತು. ಈ ವರ್ಷ ಉತ್ತಮ ಮಳೆ ಹಿನ್ನೆಲೆಯಲ್ಲಿ 273.426 ಟಿಎಂಸಿ ನೀರು ಹರಿಯುವ ಮೂಲಕ 135.412 ಟಿಎಂಸಿ ಹೆಚ್ಚುವರಿಯಾಗಿ ಹರಿದಿದೆ. ಮುಂದಿನ ತಿಂಗಳಲ್ಲೂ ನೀರಿನ ಕೊರತೆ ಇರುವುದಿಲ್ಲ ಎಂಬ ವಿಶ್ವಾಸವಿದೆ. ಹೀಗಾಗಿ ಸಮಸ್ಯೆಯಿಲ್ಲ ಎಂದು ಶಿವಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
