ಸಾರ್ವಜನಿಕ ಗಣೇಶ ಹಬ್ಬ ಆಚರಿಸುವ ಆಯೋಜಕರಿಗೆ ಬೆಸ್ಕಾಂ ಶಾಕ್ ನೀಡಿದೆ. ಕಠಿಣ ನಿಯಮ ಜಾರಿಗೊಳಿಸಿದ್ದು, ಯಾರೇ ಉಲ್ಲಂಘಿಸಿದರೆ ಅಷ್ಟೇ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ಬೆಂಗಳೂರು (ಆ.25) ದೇಶಾದ್ಯಂತ ಗಣೇಶ ಹಬ್ಬದ ತಯಾರಿಗಳು ನಡೆಯುತ್ತಿದೆ. ಇನ್ನು ಅದ್ಧೂರಿಯಾಗಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ದೇವಸ್ಥಾನ, ಗುಡಿ, ಸಂಘ ಸಂಸ್ಥೆಗಳು, ಗೆಳೆಯರ ಬಳಗ ಸೇರಿದಂತೆ ಹಲವು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ ಗಣೇಶೋತ್ಸವ ಆಚರಿಸಲಾಗುತ್ತದೆ. ಇದರ ತಯಾರಿಗಳು ಭರದಿಂದ ನಡೆಯುತ್ತಿರುವ ಬೆನ್ನಲ್ಲೇ ಇಂಧನ ಇಲಾಖೆ ಕರೆಂಟ್ ಶಾಕ್ ನೀಡಿದೆ. ಸಾರ್ವಜನಿಕ ಗಣೇಶೋತ್ಸವ ಆಚರಿಸುವರು ಕೆಲ ಕಠಿಣ ನಿಯಮ ಪಾಲಿಸಬೇಕು ಎಂದು ಇಂಧನ ಇಲಾಖೆ ಸೂಚಿಸಿದೆ. ನಿಯಮ ಉಲ್ಲಂಘಿಸಿದರೆ ಕ್ರಮದ ಎಚ್ಚರಿಕೆಯ್ನು ಬೆಸ್ಕಾಂ ನೀಡಿದೆ
ಸಾರ್ವಜನಿಕ ಗಣೇಶೋತ್ಸವಕ್ಕೆ ವಿದ್ಯುತ್ ಪಡೆಯಲು ರೂಲ್ಸ್
ಸಾರ್ವಜನಿಕ ಗಣೇಶೋತ್ಸವ ಪ್ರತಿ ಭಾರಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ವಿದ್ಯುತ್ ದೀಪಾಲಂಕಾರ, ಝಗಮಗಿಸುವ ಅಲಂಕಾರಗಳ ಮೂಲಕ ಗಣೇಶೋತ್ಸವ ಆಚರಿಸಲಾಗುತ್ತದೆ. ಈ ಬಾರಿ ಗಣೇಶೋತ್ಸವ ವೇಳೆ ಅಕ್ರಮವಾಗಿ ವಿದ್ಯುತ್ ಪಡೆಯುವ ಹಾಗಿಲ್ಲ. ವಿದ್ಯುತ್ ಕಳ್ಳತನ ಮಾಡಿದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಇಂಧನ ಇಲಾಖೆ ಎಚ್ಚರಿಸಿದೆ. ಇಂಧನ ಇಲಾಖೆಯಿಂದ ಎಲ್ಲಾ ಎಸ್ಕಾಂಗಳಿಗೆ ಸೂಚನೆ ನೀಡಲಾಗಿದೆ. ಬೆಸ್ಕಾಂ,ಮೆಸ್ಕಾಂ,ಹೆಸ್ಕಾಂ,ಜೆಸ್ಕಾಂ,ಚೆಸ್ಕಾಂ ವಿದ್ಯುತ್ ಸರಬರಾಜು ಕಂಪನಿ ವ್ಯವಸ್ಥಾಪಕ ನಿರ್ದೇಶಕರು ಸೂಚನೆ ನೀಡಿದ್ದಾರೆ.
3 ವರ್ಷ ಜೈಲು, ದಂಡದ ಶಿಕ್ಷೆ
ಸಾರ್ವಜನಿಕ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆ ವೇಳೆ ಅಕ್ರಮ ವಿದ್ಯುತ್ ಸಂಪರ್ಕ ಪಡೆಯುವ ಕುರಿತು ವರದಿಯಾಗಿದೆ. ಬೀದಿ ವಿದ್ಯುತ್ ಕಂಬಗಳಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯುಲು ಪ್ರಯತ್ನ ನಡೆಯುತ್ತದೆ. ಅಕ್ರಮ ವಿದ್ಯುತ್ ಸಂಪರ್ಕ ಪಡೆದಲ್ಲಿ ಜಾಗೃತ ದಳಕ್ಕೆ ಸೂಚನೆ ನೀಡಿ ಎಂದು ಇಂಧನ ಇಲಾಖೆ ಸೂಚಿಸಿದೆ. ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದ್ರೆ 2003ರ ಕಾನೂನು ಅನ್ವಯ 3 ವರ್ಷ ಜೈಲು ಹಾಗೂ ದಂಡ ಶಿಕ್ಷೆ ಇದೆ. ಹೀಗಾಗಿ ಯಾರೂ ನಿಯಮ ಉಲ್ಲಂಘಿಸದಂತೆ ಎಚ್ಚರಿಕೆ ನೀಡಲಾಗಿದೆ.
ಅನುಮತಿ ಪಡೆದು ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ ಅವಕಾಶ
ಸಾರ್ವಜನಿಕ ಗಣೇಶೋತ್ಸವಕ್ಕೆ ಅಕ್ರಮವಾಗಿ ಯಾರು ವಿದ್ಯುತ್ ಪಡೆಯುವಂತಿಲ್ಲ. ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕಕ್ಕೆ ಅವಕಾಶವಿದೆ. ಈ ಕುರಿತು ವ್ಯವಸ್ಥಾಪಕ ನಿರ್ದೇಶಕರು ಎಲ್ಲಾ ಎಸ್ಕಾಂಗಳಿಗೆ ಸೂಚನೆ ನೀಡಿದ್ದಾರೆ. ಆಯಾ ಉಪವಿಭಾಗ ಕಚೇರಿಗಳಲ್ಲಿ ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ ಅವಕಾಶ ನೀಡುವಂತೆ ಸೂಚಿಸಿದ್ದಾರೆ. ನಿಯಮ ಮೀರಿ ವಿದ್ಯುತ್ ಸಂಪರ್ಕ ಪಡೆಯದಂತೆ ನಿಗಾ ಇಡಲು ನಿರ್ದೇಶಿಸಲಾಗಗಿದೆ.
ಆಗಸ್ಟ್ 27ಕ್ಕೆ ಗಣೇಶ ಹಬ್ಬ
ಆಗಸ್ಟ್ 27ರಂದು ಗಣೇಶ ಹಬ್ಬ ಆಚರಿಸಲಾಗುತ್ತದೆ. ಅತ್ಯಂತ ಅದ್ಧೂರಿಯಾಗಿ, ಸಡಗರಿಂದ ಗಣೇಶ ಹಬ್ಬ ಆಚರಿಸಲಾಗುತ್ತದೆ. ಹಬ್ಬದ ಆಚರಣೆಗಾಗಿ ದೂರದ ಊರುಗಳಿಗೆ ತೆರಳುವ ಮಂದಿಗೆ ವಿಶೇಷ ಬಸ್ ಸೌಲಭ್ಯ, ವಿಶೇಷ ರೈಲು ವ್ಯವಸ್ಥೆಗಳನ್ನು ಮಾಡಲಾಗಿದೆ. ಜನಸಂದಣಿ ಹೆಚ್ಚಾಗುವ ಕಾರಣ ಈ ವ್ಯವಸ್ಥೆ ಮಾಡಲಾಗಿದೆ.
