ಕೊಪ್ಪಳದಲ್ಲಿ ಅನ್ನಭಾಗ್ಯ ಅಕ್ಕಿಯನ್ನು ವಿದೇಶಕ್ಕೆ ರಫ್ತು ಮಾಡಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಸರ್ಕಾರಿ ಗೋದಾಮಿನ ಕಿರಿಯ ಸಹಾಯಕರನ್ನು ಅಮಾನತುಗೊಳಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.

ಕೊಪ್ಪಳ (ಆ.26): ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಜಂಟಿಯಾಗಿ ಪಡಿತರ ಕಾರ್ಡ್‌ದಾದರರಿಗೆ ನೀಡಲಾಗುವ ನೀಡಲಾಗುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ವಿದೇಶಕ್ಕೆ ರಫ್ತು ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸರ್ಕಾರಿ ಗೋದಾಮಿನ ಕಿರಿಯ ಸಹಾಯಕ ಸೋಮಶೇಖರ್ ಅವರನ್ನು ಅಮಾನತುಗೊಳಿಸಲಾಗಿದೆ. ಪ್ರಧಾನ ವ್ಯವಸ್ಥಾಪಕರು ಮತ್ತು ಶಿಸ್ತು ಪ್ರಾಧಿಕಾರದ ಅಧಿಕಾರಿ ಕೆ.ಎನ್. ಮಂಜುನಾಥ್ ಅವರು ಈ ಆದೇಶ ಹೊರಡಿಸಿದ್ದು, ಕರ್ತವ್ಯ ಲೋಪದಡಿ ಈ ಕ್ರಮ ಕೈಗೊಂಡಿದ್ದಾರೆ.

ನಿನ್ನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕನಕಗಿರಿ ರಸ್ತೆಯಲ್ಲಿರುವ ಸರ್ಕಾರಿ ಗೋದಾಮಿನಿಂದ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಈ ಅಕ್ಕಿಯನ್ನು 'ಲಾಲ್' ಹೆಸರಿನ ವಿದೇಶಿ ಪಾಕೇಟ್‌ಗಳಲ್ಲಿ ತುಂಬಿಸಲಾಗಿತ್ತು. ಜಿಲ್ಲಾಧಿಕಾರಿಗಳ ಆದೇಶದಂತೆ 168 ಕ್ವಿಂಟಾಲ್ ಅಕ್ಕಿ ಬಿಡುಗಡೆ ಮಾಡಲು ಅನುಮತಿ ಇತ್ತು. ಆದರೆ, ಗೋದಾಮಿನ ಅಧಿಕಾರಿಗಳು ಡಿಸಿ ಆದೇಶವನ್ನು ಮೀರಿ, 168 ಕ್ವಿಂಟಾಲ್ ಬದಲಿಗೆ 270ಕ್ಕೂ ಅಧಿಕ ಕ್ವಿಂಟಾಲ್ ಅಕ್ಕಿಯನ್ನು ಲೋಡ್ ಮಾಡಿದ್ದಾರೆ.

ಈ ಅಕ್ರಮವನ್ನು ಗಂಗಾವತಿ ಗ್ಯಾರಂಟಿ ಸಮಿತಿ ಅಧ್ಯಕ್ಷರು ಬಯಲಿಗೆಳೆದಿದ್ದು, ತಹಶೀಲ್ದಾರ್ ಅವರು ಗೋದಾಮನ್ನು ಸೀಜ್ ಮಾಡಿ, ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಿದ್ದರು. ಕರ್ತವ್ಯ ಲೋಪ ಎಸಗಿದ ಕಾರಣ ಕಿರಿಯ ಸಹಾಯಕ ಸೋಮಶೇಖರ್ ಅಮಾನತುಗೊಂಡಿದ್ದಾರೆ.

ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ: ಸಚಿವ ಶಿವರಾಜ್ ತಂಗಡಗಿ

ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, 'ಪಡಿತರ ಅಕ್ಕಿ ಅಕ್ರಮದ ವಿಚಾರ ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಈ ಸಂಬಂಧ ಪ್ರಕರಣ ದಾಖಲಾಗಿದೆ. ನಾನು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದಿದ್ದೇನೆ. ಯಾರು ಈ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದಾರೋ, ಅವರ ಮೇಲೆ ನೇರವಾಗಿ ಎಫ್‌ಐಆರ್ ದಾಖಲಿಸುವಂತೆ ಸೂಚಿಸಿದ್ದೇನೆ. ಈ ಅಕ್ರಮದಲ್ಲಿ ಸರ್ಕಾರಿ ಗೋದಾಮಿನ ಅಧಿಕಾರಿಗಳ ತಪ್ಪು ನಡೆದಿರುವ ಮಾಹಿತಿ ಇದೆ. ಆರಂಭದಲ್ಲಿ ಅಕ್ಕಿ ವಶಪಡಿಸಿಕೊಂಡರೂ, ನಂತರ ಅದನ್ನು ಬಿಡುಗಡೆ ಮಾಡಲಾಗಿತ್ತು. ಈ ಹಂತದಲ್ಲಿ ಗೋದಾಮಿನ ಅಧಿಕಾರಿಗಳು ನಿಯಮ ಉಲ್ಲಂಘಿಸಿದ್ದಾರೆ. ಸುಮಾರು 8 ಟನ್ ಅಕ್ಕಿಯಷ್ಟು ಅಕ್ರಮ ನಡೆದಿದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.