ಸಾಕಷ್ಟು ಸೌಂದರ್ಯ ಹೊಂದಿರುವ ಈ ಜಿಲ್ಲೆಯಲ್ಲಿ ದೇಶದಲ್ಲೇ ಅತೀ ಹೆಚ್ಚು ಶುದ್ಧಗಾಳಿ ಇದೆ ಎಂದು ಕೇಂದ್ರ ಪರಿಸರ ಇಲಾಖೆಯೇ ಮಾಹಿತಿ ನೀಡಿದೆ. ಆದರೂ ಜನರು ಉಸಿರಾಟಕ್ಕೆ ಪರಿಶುದ್ಧ ಗಾಳಿ ಸಿಗದೆ ಉಸಿರುಗಟ್ಟಿ ಸಾವನ್ನಪ್ಪಬೇಕಾದ ಪರಿಸ್ಥಿತಿ ಎದುರಾಗಿದೆ.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಸೆ.28): ಪ್ರಾಕೃತಿಕವಾಗಿ ಸಾಕಷ್ಟು ಸೌಂದರ್ಯ ಹೊಂದಿರುವ ಈ ಜಿಲ್ಲೆಯಲ್ಲಿ ದೇಶದಲ್ಲೇ ಅತೀ ಹೆಚ್ಚು ಶುದ್ಧಗಾಳಿ ಇದೆ ಎಂದು ಕೇಂದ್ರ ಪರಿಸರ ಇಲಾಖೆಯೇ ಮಾಹಿತಿ ನೀಡಿದೆ. ಆದರೂ ಈ ಜಿಲ್ಲೆಯಲ್ಲಿ ಜನರು ಉಸಿರಾಟಕ್ಕೆ ಪರಿಶುದ್ಧ ಗಾಳಿ ಸಿಗದೆ ಉಸಿರುಗಟ್ಟಿ ಸಾವನ್ನಪ್ಪಬೇಕಾದ ಪರಿಸ್ಥಿತಿ ಎದುರಾಗಿದೆ. ಅದ್ಹೇಗೆ ಎಂದು ನೀವು ಅಚ್ಚರಿ ಪಡುತ್ತಿದ್ದೀರಾ. ಅದಕ್ಕೆ ಕಾರಣ ಏನು ಅಂತಾ ಗೊತ್ತಾಗಬೇಕಾದರೆ ನೀವು ಈ ಸ್ಟೋರಿ ಓದಬೇಕು. ಕೊಡಗು ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಪ್ರಾಕೃತಿಕ ಸಂಪತ್ತು ಇದೆ. ಅದರಲ್ಲಿ ಕಲ್ಲುಗಂಡೆಗಳು ಕೂಡ ಒಂದು. ಆದರೆ ಈ ಬೃಹಧಾಕಾರದ ಕಲ್ಲು ಬಂಡೆಗಳನ್ನು ಯದ್ವಾತದ್ವಾ ಹೊಡೆದು ಭೂಮಿಯೊಡಲನ್ನೇ ಬಗೆದು ಖಾಲಿ ಮಾಡಲಾಗುತ್ತಿದೆ.

ಇದರ ಪರಿಣಾಮ ಎರಡು ಹಳ್ಳಿಗಳ ನೂರಾರು ಜನರು ಈಗ ಉಸಿರಾಡುವುದಕ್ಕೂ ಸಮಸ್ಯೆ ಅನುಭವಿಸುವಂತೆ ಆಗುತ್ತಿದೆ. ಹೌದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲಕನೂರು ಹಾಗೂ ಹೊಸಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 19 ಕಲ್ಲುಗಣಿಗಾರಿಕೆಗಳು ನಡೆಯುತ್ತಿದೆ. ಬಹುತೇಕ ಕೋರೆಗಳು ಸರ್ಕಾರಿ ಭೂಮಿಯಲ್ಲೇ ನಡೆಯುತ್ತಿದ್ದು, ನಾಲ್ಕೈದು ಯಾವುದೇ ಪರವಾನಗಿ ಇಲ್ಲದೆ ನಡೆಯುತ್ತಿದೆ. ನಾಲ್ಕು ಕೋರೆಗಳು ಮಾತ್ರ ಖಾಸಗಿ ಪಟ್ಟಾ ಜಾಗದಲ್ಲಿ ನಡೆಯುತ್ತಿದೆ. ಈ ಕೋರೆಗಳನ್ನು ನಡೆಸಲು 10 ರಿಂದ 30 ವರ್ಷಗಳ ವರೆಗೆ ಗುತ್ತಿಗೆ ನೀಡಲಾಗಿದೆ.

ಎಲ್ಲಾ ಕೋರೆಗಳನ್ನು ಕಾರ್ಮಿಕರನ್ನು ಬಳಸಿಯೇ ಮೃದವಾಗಿ ಸ್ಫೋಟಿಸಿ ಕಲ್ಲುಗಳನ್ನು ಹೊಡೆಯಲು ಅವಕಾಶ ನೀಡಲಾಗಿದೆ. ಆ ಮೂಲಕ ವಾರ್ಷಿಕವಾಗಿ ಒಂದು ಕೋರೆಯಲ್ಲಿ ಕೇವಲ 35 ಸಾವಿರ ಟನ್ ಕಲ್ಲನ್ನು ಹೊರಗೆ ತೆಗೆದು ಸಾಗಿಸಲು ಅವಕಾಶ ನೀಡಲಾಗಿದೆ. ಆದರೆ ಇವರು ಒಂದು ತಿಂಗಳಲ್ಲಿಯೇ 35 ಸಾವಿರ ಟನ್ಗಿಂತಲೂ ಅಧಿಕ ಪ್ರಮಾಣದ ಕಲ್ಲುಗಳನ್ನು ಸಾಗಿಸುತ್ತಿದ್ದಾರೆ. ಅಂದರೆ ಇಡೀ ವರ್ಷ ಲಕ್ಷಾಂತರ ಟನ್ ಕಲ್ಲನ್ನು ತೆಗೆದು ಹೊರಗೆ ಸಾಗಿಸಲಾಗುತ್ತಿದೆ. ಇದಕ್ಕಾಗಿ ದೊಡ್ಡ ದೊಡ್ಡ ಡೈನಾಮೆಂಟ್ಗಳನ್ನು ಸಿಡಿಸಿ ಕಲ್ಲುಕೋರೆಗಳನ್ನು ನಡೆಸಲಾಗುತ್ತಿದೆ. ಇದರಿಂದಾಗಿ ಎರಡು ಗ್ರಾಮಗಳಲ್ಲಿ ಮಿತಿಮೀರಿದ ಧೂಳು ಇಡೀ ಜನರನ್ನು ಉಸಿರುಗಟ್ಟಿಸುತ್ತಿದೆ.

ಶ್ವಾಸಕೋಶ ಸಂಬಂಧಿ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದೇವೆ ಎನ್ನುತ್ತಾರೆ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ತಿಮ್ಮಯ್ಯ. ಕಲ್ಲುಗಣಿಗಾರಿಕೆಗೆ ಅವಕಾಶ ನೀಡಿರುವುದು ಜನರನ್ನು ಬಳಸಿ ಪರಿಸರಕ್ಕೆ ಯಾವುದೇ ತೊಂದರೆ ಆಗದಂತೆ ನಡೆಸಲು. ಆದರೆ ಇವರು ದೊಡ್ಡ ದೊಡ್ಡ ಇಟಾಚಿ ಬಳಸಿ, ಭಾರೀ ಪ್ರಮಾಣದ ಡೈನಾಮೆಂಟ್ ಸಿಡಿಸಿ ಬೃಹತ್ ಗಾತ್ರದ ಬಂಡೆಗಳನ್ನು ಹೊಡೆಯಲಾಗುತ್ತಿದೆ. ನಿಮಯ ಪ್ರಕಾರ ಕೇವಲ 6 ಮೀಟರ್ ಆಳದವರೆಗೆ ಮಾತ್ರ ಬಂಡೆಯನ್ನು ಹೊಡೆಯಲು ಅವಕಾಶವಿದೆ. ಅದಕ್ಕೆ ಮಾತ್ರವೇ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅವಕಾಶ ನೀಡಲಾಗಿದೆ. ಆದರೆ ಇವರು ಬರೋಬ್ಬರಿ 250 ರಿಂದ 300 ಅಡಿ ಆಳದವರೆಗೆ ಭೂಮಿಯನ್ನು ಬಗೆದಿದ್ದಾರೆ.

ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ

ಇವುಗಳ ಬಳಿ ನಿಂತು ಒಮ್ಮೆ ನೋಡಿದರೆ ಭಯವಾಗುವಂತಹ ಪರಿಸ್ಥಿತಿ ಈ ಕಲ್ಲುಕೋರೆಗಳ ಬಳಿ ಇದೆ. ಇದರಿಂದಾಗಿ ಗ್ರಾಮದಲ್ಲಿ ಯಾರೂ ಸರಿಯಾಗಿ ಕೃಷಿ ಮಾಡುವಂತಿಲ್ಲ. ಬಹುತೇಕ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಆದಿವಾಸಿ ಕುಟುಂಬಗಳು ಊರನ್ನೇ ಖಾಲಿ ಮಾಡಿವೆ. ಇದರ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ಕೊಟ್ಟರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮ ಸಮಿತಿ ಕಾರ್ಯದರ್ಶಿ ಭೋಜೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಸ್ಥಳೀಯ ಅಭಿವೃದ್ಧಿ ಕಾಮಗಾರಿಗಳಿಗೆ ಅನುಕೂಲವಾಗಲೆಂದು ಸಣ್ಣ ಪ್ರಮಾಣದ ಕಲ್ಲುಗಣಿಗಾರಿಕೆಗೆ ನೀಡಿರುವ ಅವಕಾಶವನ್ನು ದುರುಪಯೋಗ ಪಡಿಸಿಕೊಂಡಿರುವ ಗಣಿ ಮಾಲೀಕರು ಭೂಮಿಯ ಒಡಲನ್ನೇ ಬಗೆದು ದೋಚುತ್ತಾ ಸ್ಥಳೀಯರ ಜೀವಕ್ಕೂ ಕುತ್ತು ತರುತ್ತಿದ್ದಾರೆ.