ಸಹಕಾರ ಸಚಿವ ಕೆ.ಎನ್. ರಾಜಣ್ಣ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಕಾರಣ ಸ್ಪಷ್ಟವಾಗಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಹೈಕಮಾಂಡ್ ನಿರ್ಧಾರವನ್ನು ಗೌರವಿಸಲಾಗುತ್ತದೆ ಎಂದಿದ್ದಾರೆ.

ಸದಾಶಿವನಗರ,(ಆ.12): ಕರ್ನಾಟಕ ಸಹಕಾರ ಸಚಿವ ಕೆಎನ್ ರಾಜಣ್ಣ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಈ ರಾಜೀನಾಮೆ ನೀಡಿರುವ ಕಾರಣ ಅಷ್ಟು ವಿವರವಾಗಿ ನನಗೆ ಗೊತ್ತಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.

ಕೆ ಎನ್ ರಾಜಣ್ಣರನ್ನ ಸಂಪುಟದಿಂದ ಕೈಬಿಟ್ಟ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತಾಡಿದ ಗೃಹ ಸಚಿವರು, ರಾಜಣ್ಣ ಅವರ ರಾಜೀನಾಮೆಯ ಕಾರಣದ ಬಗ್ಗೆ ನನಗೆ ಸ್ಪಷ್ಟ ಮಾಹಿತಿ ಇಲ್ಲ. ಕಾಂಗ್ರೆಸ್ ಹೈಕಮಾಂಡ್ ಈ ನಿರ್ಧಾರ ತೆಗೆದುಕೊಂಡಿದೆ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ನಿರ್ಧಾರವನ್ನು ಗೌರವಿಸಲಾಗುತ್ತದೆ. ರಾಜಣ್ಣ ಅವರ ರಾಜೀನಾಮೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ ಅಧ್ಯಕ್ಷರಿಗೆ ಮಾಹಿತಿ ಇರಬಹುದು ಎಂದರು. ಯಾವ ಕಾರಣಕ್ಕೆ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದಾರೆ ಎಂಬುದುನನಗೆ ಗೊತ್ತಿಲ್ಲ ಎಂದರು.

ಸ್ವಾಭಾವಿಕವಾಗಿ ರಾಜಣ್ಣ ಅವರಿಗೆ ಅಸಮಾಧಾನ ಇರಬಹುದು, ಆದರೆ ನಿಖರ ಕಾರಣ ತಿಳಿದಿಲ್ಲ. ರಾಜಣ್ಣ ಮತ್ತು ಅವರ ಪುತ್ರ ರಾಜೇಂದ್ರ ಅವರೊಂದಿಗೆ ನಡೆದ ಪ್ರತ್ಯೇಕ ಸಭೆಯ ಬಗ್ಗೆಯೂ ಪರಮೇಶ್ವರ್ ಆಶ್ಚರ್ಯ ವ್ಯಕ್ತಪಡಿಸಿದರು. ನನಗೆ ಏನೂ ಅರ್ಥವಾಗುತ್ತಿಲ್ಲ. ನೀವಾದರೂ ಹೈಕಮಾಂಡ್‌ನವರನ್ನು ಕೇಳಿ ಮಾಹಿತಿ ಪಡೆಯಿರಿ ಎಂದು ಮಾಧ್ಯಮದವರಿಗೆ ತಿಳಿಸಿದರು.

ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ಇಳಿಸುವಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಯತ್ನ ಇದೆ ಎಂಬ ಆರೋಪಕ್ಕೆ ಪರಮೇಶ್ವರ್, ಅದರ ಬಗ್ಗೆ ಗೊತ್ತಿಲ್ಲ. ಆ ರೀತಿ ಇರೋದಕ್ಕೆ ಸಾಧ್ಯವಿಲ್ಲ ಅನ್ನಿಸುತ್ತೆ. ಏಕೆಂದರೆ ನಮ್ಮ ಹೈಕಮಾಂಡ್ ಅವರು ನಾವು ಯಾರ ಮೇಲೆ ಚಾಡಿ ಹೇಳಿದರು ಹಾಗೆಯೇ ಕೇಳೋದಿಲ್ಲ. ಅವರದ್ದೇ ಆದಂತ ಅಸೆಸ್ಮೆಂಟ್ ಹಾಗೂ ಮಾಹಿತಿಯನ್ನು ಪಡೆದಿರುತ್ತಾರೆ. ಹೈಕಮಾಂಡ್ ಯಾರ ಚಾಡಿಯನ್ನೂ ಕೇಳದೆ, ತಮ್ಮದೇ ಆದ ಮಾಹಿತಿ ಮತ್ತು ಮೌಲ್ಯಮಾಪನದ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

ಇನ್ನು ಕಾಂಗ್ರೆಸ್‌ನಲ್ಲಿ ಸತ್ಯ ಮಾತನಾಡಿದರೆ ತೆಗೆದುಹಾಕುತ್ತಾರೆ ಎಂಬ ಮಾತು ಸರಿಯಲ್ಲ. ಪಕ್ಷದಲ್ಲಿ ಶಿಸ್ತು ಮತ್ತು ಹೈಕಮಾಂಡ್‌ಗೆ ಬದ್ಧತೆ ಇರಬೇಕು ಎಂದು ಸ್ಪಷ್ಟಪಡಿಸಿದರು.ರಾಜಣ್ಣ ಅವರ ರಾಜೀನಾಮೆಯ ಹಿಂದಿನ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲದಿದ್ದರೂ, ಈ ಬೆಳವಣಿಗೆ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ರಾಜಕೀಯ ಗತಿವಿಧಿಗಳ ಬಗ್ಗೆ ಚರ್ಚೆಗೆ ಕಾರಣವಾಗಿದೆ.