ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾದನಸರ ಗ್ರಾಮದ ಕವಲಗಿ ಹಳ್ಳದಲ್ಲಿ ಭಾರೀ ಮಳೆಯಿಂದಾಗಿ ಇಬ್ಬರು ಸಹೋದರರು ಕೊಚ್ಚಿ ಹೋಗಿದ್ದಾರೆ. ಮೀನು ಹಿಡಿಯಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಉತ್ತರಕನ್ನಡ (ಆ.10): ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾದನಸರ ಗ್ರಾಮದ ಕವಲಗಿ ಹಳ್ಳದಲ್ಲಿ ಭಾರೀ ಮಳೆಯಿಂದ ಉಂಟಾದ ನೀರಿನ ರಭಸಕ್ಕೆ ಇಬ್ಬರು ಸಹೋದರರು ಕೊಚ್ಚಿ ಹೋಗಿರುವ ದಾರುಣ ಘಟನೆ ಇಂದು ನಡೆದಿದೆ.
ರಫೀಕ್ ಇಬ್ರಾಹಿಂ ಸಾಬ್ ಸಯ್ಯದ್ (27) ಮತ್ತು ಹನೀಫ್ ಇಬ್ರಾಹಿಂ ಸಾಬ್ ಸಯ್ಯದ್ (25) ಕೊಚ್ಚಿಹೋದ ಸಹೋದರರು. ಈ ಇಬ್ಬರು ಗೌಂಡಿ ಕೆಲಸ ಮಾಡುತ್ತಿದ್ದು, ಇಂದು ಸ್ನೇಹಿತರ ಜತೆ ಬೇಡ್ತಿ ನದಿಗೆ ಮೀನು ಹಿಡಿಯಲು ತೆರಳಿದ್ದರು.
ಮೂಲಗಳ ಪ್ರಕಾರ ಎಂಟು ಜನರ ತಂಡ ಕವಲಗಿ ಹಳ್ಳವನ್ನು ದಾಟಿ ಮೀನುಗಾರಿಕೆಗೆ ಹೋಗಿತ್ತು. ಮೀನು ಹಿಡಿದು ಮರಳಿ ಬರುವಾಗ, ಒಮ್ಮಿಂದೊಮ್ಮೆಲೇ ಭಾರೀ ಮಳೆಯಿಂದಾಗಿ ಹಳ್ಳದ ನೀರಿನ ಮಟ್ಟ ಏರಿಕೆಯಾಗಿದೆ. ರಭಸದಿಂದ ಹರಿಯುತ್ತಿದ್ದ ನೀರಿಗೆ ಇಳಿದಿದ್ದ ಸಹೋದರರು. ಈ ವೇಳೆ ರಭಸವಾಗಿ ಹರಿಯುತ್ತಿದ್ದ ನೀರಿಗೆ ಸಿಲುಕಿ ರಫೀಕ್ ಮತ್ತು ಹನೀಫ್ ಕೊಚ್ಚಿ ಹೋಗಿದ್ದಾರೆ.
ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಶೋಧ ಕಾರ್ಯ ತೀವ್ರಗೊಂಡಿದೆ. ಸ್ಥಳೀಯರು ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
