ಆ.27 ರಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಳೆ ಮಾರುತಗಳು ಚುರುಕುಗೊಳ್ಳಲಿದ್ದು, ಹೆಚ್ಚಿನ ಪ್ರಮಾಣದ ಮಳೆಯಾಗುವ ಲಕ್ಷಣ ಇದೆ.

ಬೆಂಗಳೂರು (ಆ.24): ರಾಜ್ಯದಲ್ಲಿ ಆ.27 ರಿಂದ ಮತ್ತೆ ಚುರುಕುಗೊಳ್ಳುವ ಸಾಧ್ಯತೆ ಇದ್ದು, ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ. ಎರಡ್ಮೂರು ದಿನಗಳಿಂದ ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ಇನ್ನೂ ಒಂದೆರಡು ದಿನ ಬಹುತೇಕ ಸ್ಥಳದಲ್ಲಿ ಒಣ ಹವೆ ಇರಲಿದೆ. ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಆ.27 ರಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಳೆ ಮಾರುತಗಳು ಚುರುಕುಗೊಳ್ಳಲಿದ್ದು, ಹೆಚ್ಚಿನ ಪ್ರಮಾಣದ ಮಳೆಯಾಗುವ ಲಕ್ಷಣ ಇದೆ.

ಗಾಳಿಯು ಗಂಟೆಗೆ 40 ಕಿ.ಮೀ. ವೇಗದಲ್ಲಿ ಬೀಸುವುದರಿಂದ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆ.28 ರಿಂದ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆ ಶುರುವಾಗಲಿದೆ. ಹೀಗಾಗಿ, ಯೆಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ. ಉಳಿದಂತೆ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಮಳೆ ಬಿರುಸುಗೊಳ್ಳಲಿದೆ. ಆ.24ಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಹಾಗೂ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ವರದಿ ಪ್ರಕಾರ ಕಳೆದ 24 ಗಂಟೆಯಲ್ಲಿ ಚಾಮರಾಜನಗರದ ಮಲ್ಲೆಮಹದೇಶ್ವರ ಬೆಟ್ಟ, ಕ್ಯಾಸಲ್‌ ರಾಕ್‌ನಲ್ಲಿ ತಲಾ 3 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ಮಂಕಿ, ಲೋಂಡಾ, ಗೇರಸೊಪ್ಪ, ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣ, ಅಂಕೋಲಾದಲ್ಲಿ ತಲಾ 1 ಸೆಂ.ಮೀ. ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಳೆ ಕ್ಷೀಣಿಸಿದರೂ, ಪ್ರವಾಹ ಇನ್ನೂ ತಗ್ಗಿಲ್ಲ: ನೆರೆಯ ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶ ಹಾಗೂ ಜಿಲ್ಲೆಯಲ್ಲಿ ಮಳೆ ಅಬ್ಬರ ಕ್ಷೀಣಿಸಿದ್ದರೂ ಜಿಲ್ಲೆಯ ನದಿಗಳ ಪ್ರವಾಹ ಸ್ಥಿತಿ ಮಾತ್ರ ತಗ್ಗಿಲ್ಲ. ಕೃಷ್ಣಾ, ಮಲಪ್ರಭಾ, ಘಟಪ್ರಭಾ ಸೇರಿದಂತೆ ಜಿಲ್ಲೆಯ ಇತರೆ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಮಹಾರಾಷ್ಟ್ರದ ಕೊಯ್ನಾ ಸೇರಿದಂತೆ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ 2.20 ಲಕ್ಷ ಕ್ಯು. ನೀರು ಹರಿದುಬರುತ್ತಿದೆ. ಕೃಷ್ಣಾನದಿ ಉಕ್ಕಿ ಹರಿಯುತ್ತಿದೆ. ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ಮಾಂಗ ವಸತಿ ಪ್ರದೇಶಕ್ಕೆ ಕೃಷ್ಣಾನದಿ ನೀರು ಸುತ್ತುವರೆದಿದೆ.

ತುಂಬು ಗರ್ಭಿಣಿ ಜೊತೆಗೆ ಕೃಷ್ಣಾನದಿ ನಡುಗಡ್ಡೆಯಲ್ಲಿ 40 ಕುಟುಂಬಗಳು ಸಿಲುಕಿವೆ. ನೂರಕ್ಕೂ ಹೆಚ್ಚು ಗ್ರಾಮಸ್ಥರು ಮಕ್ಕಳು ಜಾನುವಾರುಗಳು ನಡುಗಡ್ಡೆಯಲ್ಲಿ ಸಿಲುಕಿದ್ದಾರೆ. ಎದೆಯ ಎತ್ತರ ನೀರಿನಲ್ಲಿ ದಾಟಿಕೊಂಡು ಗ್ರಾಮಸ್ಥರು ಹರಸಾಹಸ ಮಾಡಿ ಸಂಚಾರ ಮಾಡುತ್ತಿದ್ದಾರೆ. ಶಾಲಾ ಮಕ್ಕಳು ಜನರ ಸಂಚಾರಕ್ಕೆ ಇರುವ ಏಕೈಕ ರಸ್ತೆ ಮಾರ್ಗ ಬಂದ್ ಆಗಿದೆ. ಬೋಟ್‌ ವ್ಯವಸ್ಥೆ ಮಾಡಬೇಕಾದ ಜಿಲ್ಲಾಡಳಿತ ಯಾವುದೇ ವ್ಯವಸ್ಥೆ ಮಾಡದೇ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಚಿಕ್ಕೋಡಿ ತಾಲೂಕಿನ ಯಡೂರ, ಕಲ್ಲೋಳ, ಚಂದೂರ, ಇಂಗಳಿ ಸೇರಿದಂತೆ ಮತ್ತಿತರ ನದಿ ತೀರದ ಗ್ರಾಮಗಳಿಗೂ ಕೃಷ್ಣಾ ನದಿ ನೀರು ನುಗ್ಗಿದೆ. ಚಿಕ್ಕೋಡಿ ಉಪವಿಭಾಗದ ವ್ಯಾಪ್ತಿಯ 12 ಕೆಳಹಂತದ ಸೇತುವೆಗಳು ಮುಳುಗಡೆಯಾಗಿವೆ. ದಾನವಾಡ ದತ್ತವಾಡ, ಸದಲಗಾ ಬೋರಗಾಂವ್, ಸೇತುವೆಗಳು ಸೇರಿದಂತೆ ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಗಳು ಜಲಾವೃತವಾಗಿವೆ. ಕಳೆದೆರಡು ದಿನಗಳಿಂದ ಭಾರಿ ಮಳೆಯ ಹಿನ್ನೆಲೆಯಲ್ಲಿ ನದಿಗಳು ತುಂಬಿ ಹರಿಯುತ್ತಿವೆ. ನದಿಗಳ ಭೋರ್ಗರೆತದಿಂದ ನದಿತೀರದ ಗ್ರಾಮಸ್ಥರ ಜೀವನ ಅಸ್ತವ್ಯಸ್ತವಾಗಿದೆ. ಬೆಳಗಾವಿ ನಗರದ ಜೈ ಕಿಸಾನ್ ತರಕಾರಿ ಸಗಟು ಮಾರುಕಟ್ಟೆ ರಸ್ತೆ ಬಳಿ ತರಕಾರಿ ವಾಹನವೊಂದು ನಿಯಂತ್ರಣ ಪಲ್ಟಿಯಾಗಿ, ತರಕಾರಿ ಚೆಲ್ಲಾಪಿಲ್ಲಿಯಾಗಿದೆ.