ಸ್ವಾತಂತ್ರ್ಯ ದಿನಾಚರಣೆ ಮತ್ತು ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಸತತ ಮೂರು ದಿನಗಳ ರಜೆ ಘೋಷಣೆಯಾಗಿದ್ದು, ಖಾಸಗಿ ಬಸ್ ಮಾಲಿಕರು ಟಿಕೆಟ್ ದರವನ್ನು ದುಪ್ಪಟ್ಟುಗೊಳಿಸಿ ಪ್ರಯಾಣಿಕರಿಗೆ ಆಘಾತ ನೀಡಿದ್ದಾರೆ.
ಬೆಂಗಳೂರು (ಆ.14): ನಾಳೆ ಸ್ವಾ ತಂತ್ರ್ಯ ದಿನಾಚರಣೆ ಮತ್ತು ಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಶುಕ್ರವಾರ ರಜೆಯೊಂದಿಗೆ ಸತತ ಮೂರು ದಿನಗಳ ಸಾಲು ಸಾಲು ರಜೆಗಳು ಜನರಿಗೆ ತಮ್ಮ ಊರುಗಳಿಗೆ ತೆರಳಲು ಲಕ್ಷಾಂತರ ಜನರು ತಮ್ಮ ತಮ್ಮ ಊರುಗಳಿಗೆ ಪ್ರಯಾಣಿಸುತ್ತಿದ್ದಾರೆ. ಈ ರಜೆಯ ಉತ್ಸಾಹದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಪ್ರಯಾಣಿಕರು ಮುಂಚಿತವಾಗಿಯೇ ಬಸ್ ಟಿಕೆಟ್‌ಗಳನ್ನು ಬುಕ್ ಮಾಡಿಕೊಂಡಿದ್ದಾರೆ. ಆದರೆ, ಈ ರಜಾದಿನದ ಜನದಟ್ಟಣೆಯನ್ನೇ ಬಂಡವಾಳವಾಗಿಸಿಕೊಂಡಿರುವ ಖಾಸಗಿ ಬಸ್ ಮಾಲಿಕರು ಟಿಕೆಟ್ ದರವನ್ನು ದುಪ್ಪಟ್ಟುಗೊಳಿಸಿ ಪ್ರಯಾಣಿಕರಿಗೆ ಆಘಾತ ನೀಡಿದ್ದಾರೆ.
ಬೆಂಗಳೂರಿನಿಂದ ಮಂಗಳೂರಿಗೆ ಸಾಮಾನ್ಯವಾಗಿ 700 ರೂ. ಇದ್ದ ಟಿಕೆಟ್ ದರ ಈಗ 1200 ರೂ.ಗೆ ಏರಿಕೆಯಾಗಿದೆ. ಬೆಳಗಾವಿಗೆ 750 ರೂ. ಇದ್ದ ದರ 1300 ರೂ., ಹುಬ್ಬಳ್ಳಿಗೆ 900 ರೂ. ಇದ್ದ ದರ 1500 ರೂ., ಬಳ್ಳಾರಿಗೆ 600 ರೂ. ಇದ್ದ ಟಿಕೆಟ್ ದರ 1000 ರೂ.ಗೆ ಏರಿಕೆಯಾಗಿದೆ. ಈ ದಿಢೀರ್ ದರ ಏರಿಕೆಯಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಜಾದಿನದ ಸಂದರ್ಭದಲ್ಲಿ ಊರಿಗೆ ತೆರಳುವ ಉತ್ಸಾಹದಲ್ಲಿದ್ದ ಜನರಿಗೆ ಈ ದರ ಏರಿಕೆ ಭಾರೀ ಬಿಸಿ ತಟ್ಟಿದೆ.
'ರಜೆಯ ಸಂತೋಷವನ್ನು ಖಾಸಗಿ ಬಸ್ ಮಾಲಿಕರು ದುಪ್ಪಟ್ಟು ದರದಿಂದ ಕಸಿದುಕೊಂಡಿದ್ದಾರೆ' ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಬಸ್‌ಗಳಲ್ಲಿ ಸ್ಥಳಾವಕಾಶ ಕಡಿಮೆ ಇರುವುದರಿಂದ ಖಾಸಗಿ ಬಸ್‌ಗಳಿಗೆ ಬೇಡಿಕೆ ಹೆಚ್ಚಿದ್ದು, ಈ ಸುಲಿಗೆಯಿಂದ ಪ್ರಯಾಣಿಕರು ಸುಸ್ತಾಗಿದ್ದಾರೆ. ಸರ್ಕಾರ ಈ ದರ ಏರಿಕೆಗೆ ಕಡಿವಾಣ ಹಾಕಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
