ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ವಾಯುಪಡೆಯ ಅಧಿಕಾರಿ ಶಿಲಾದಿತ್ಯ ಬೋಸ್ ಮತ್ತು ಬೈಕ್ ಸವಾರ ವಿಕಾಸ್ ಕುಮಾರ್ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹೈಕೋರ್ಟ್ ರದ್ದುಗೊಳಿಸಿದೆ. ಎರಡೂ ಕಡೆಯವರು ಪರಸ್ಪರ ದೂರುಗಳನ್ನು ಹಿಂಪಡೆದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು (ಸೆ.12): ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ ಘಟನೆಯನ್ನು ಕನ್ನಡ ಭಾಷಾ ವಿಚಾರಕ್ಕೆ ತಳಕು ಹಾಕಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಯಬಿಟ್ಟು,ದದೇಶದಾದ್ಯಂತ ಸುದ್ದಿಯಾಗಿದ್ದ ಪಶ್ಚಿಮ ಬಂಗಾಳ ಮೂಲದ ಭಾರತೀಯ ವಾಯುಪಡೆಯ (ಐಎಎಫ್) ಅಧಿಕಾರಿ ಶಿಲಾದಿತ್ಯ ಬೋಸ್ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಇದೇ ವೇಳೆ ಶಿಲಾದಿತ್ಯ ಬೋಸ್ ಪತ್ನಿ ಮಧುಮಿತಾ ದತ್ತಾ ನೀಡಿದ ದೂರು ಆಧರಿಸಿ ವಿಕಾಸ್ ಕುಮಾರ್ (ಬೈಕ್ ಸವಾರ) ಎಂಬಾತನ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಸಹ ಹೈಕೋರ್ಟ್ ರದ್ದುಪಡಿಸಿದೆ.
ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಹಾಗೂ ಪ್ರಕರಣಕ್ಕೆ ಸಂಬಂಧಿಸಿ 10ನೇ ಎಸಿಎಂಎಂ ನ್ಯಾಯಾಲಯದಲ್ಲಿನ ಪ್ರಕ್ರಿಯೆ ರದ್ದು ಕೋರಿ ಶಿಲಾದಿತ್ಯ ಬೋಸ್ ಹಾಗೂ ವಿಕಾಸ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರ ಪೀಠ ಈ ಆದೇಶ ಮಾಡಿದೆ.
ವಿಕಾಸ್ ಹಾಗೂ ಶಿಲಾದಿತ್ಯ ಪತ್ನಿ ಮಧುಮಿತಾ ದತ್ತಾ ನ್ಯಾಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿ, ರಸ್ತೆಯಲ್ಲಿ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಮಾತಿನ ಚಕಮಕಿ ಹೊರತುಪಡಿಸಿ ಯಾವುದೇ ರೀತಿ ದೈಹಿಕ ಹಲ್ಲೆ ನಡೆದಿಲ್ಲ. ಪ್ರಕರಣ ಸೌಹಾರ್ದಯುತವಾಗಿ ಮುಕ್ತಾಯಗೊಳಿಸಲು ಸಿದ್ಧರಿದ್ದೇವೆ. ದೂರಿನಲ್ಲಿರುವ ಎಲ್ಲ ಆರೋಪ ಹಿಂಪಡೆಯಲಾಗುವುದು ಎಂದು ತಿಳಿಸಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಶಿಲಾದಿತ್ಯ ಬೋಸ್ ಮತ್ತು ವಿಕಾಸ್ ವಿರುದ್ಧದ ಪ್ರಕರಣಗಳನ್ನು ರದ್ದುಪಡಿಸಿತು.
ಪ್ರಕರಣದ ಹಿನ್ನೆಲೆ:
ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ 2025ರ ಏಪ್ರಿಲ್ 21ರಂದು ಬೆಳಗ್ಗೆ 6.30ರ ಸುಮಾರಿಗೆ ಓಲ್ಡ್ ಮದ್ರಾಸ್ ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದರು. ಕಾಲ್ ಸೆಂಟರ್ ಉದ್ಯೋಗಿ ವಿಕಾಸ್ ಬೈಕ್‌ಗೆ ಕಾರು ಸ್ಪರ್ಶಿಸಿತ್ತು. ಇದೇ ವಿಚಾರವಾಗಿ ಶಿಲಾದಿತ್ಯ ಮತ್ತು ವಿಕಾಸ್ ನಡುವೆ ಜಗಳ ಉಂಟಾಗಿ, ಪರಸ್ಪರ ಕೈ ಮಿಲಾಯಿಸಿದ್ದರು.
ನಂತರ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಶಿಲಾದಿತ್ಯ ಪರ ಪತ್ನಿ ಮಧುಮಿತಾ ದೂರು ನೀಡಿ ವಿಕಾಸ್ ಕುಮಾರ್ ವಿರುದ್ಧ ಹಲ್ಲೆ, ಜೀವ ಬೆದರಿಕೆ ಆರೋಪ ಮಾಡಿದ್ದರು. ಅದೇ ರೀತಿ ಶಿಲಾದಿತ್ಯ ವಿರುದ್ಧ ವಿಕಾಸ್ ಕುಮಾರ್ ಕೊಲೆ ಯತ್ನ, ಜೀವ ಬೆದರಿಕೆ ಇನ್ನಿತರ ಆರೋಪ ಸಂಬಂಧ ದೂರು ನೀಡಿದ್ದರು. ಇದರಿಂದ ತಮ್ಮ ವಿರುದ್ಧದ ದೂರುಗಳನ್ನು ರದ್ದುಪಡಿಸಲು ಕೋರಿ ಶಿಲಾದಿತ್ಯ ಮತ್ತು ವಿಕಾಸ್ ಹೈಕೋರ್ಟ್‌ಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದರು.
ಘಟನೆ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದ ಶಿಲಾದಿತ್ಯ, ಕನ್ನಡ ಮಾತನಾಡದ ಕಾರಣಕ್ಕೆ ವಿಕಾಸ್ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆಂದು ಆರೋಪಿಸಿದ್ದರು. ಈ ವಿಡಿಯೋ ವೈರಲ್ ಆಗಿ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ನಂತರ ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಮೊದಲು ಶಿಲಾದಿತ್ಯ ಅವರೇ ವಿಕಾಸ್ ಮೇಲೆ ಮೊದಲು ಹಲ್ಲೆ ನಡೆಸಿದ್ದ ವಿಚಾರ ಬೆಳಕಿಗೆ ಬಂದಿತ್ತು.
