Basavaraj Bommai on RSS ban: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಆರೆಸ್ಸೆಸ್ ಮೇಲಿನ ನಿರ್ಬಂಧದ ವಿರುದ್ಧ ರಾಜ್ಯ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದೊಂದು ರಾಷ್ಟ್ರ ವಿರೋಧಿ ಕೃತ್ಯ ಎಂದು ಆರೋಪಿಸಿದ ಅವರು, ಸರ್ಕಾರಿ ನೌಕರನ ಅಮಾನತನ್ನು ಪ್ರಶ್ನಿಸಿದ್ದಾರೆ. ಹಾವೇರಿ ಇಸ್ಪಿಟ್ ದಂಧೆ.

ಹಾವೇರಿ, (ಅ.17): ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಆಗಿದೆ. ನಾಗರಿಕರ ಹಕ್ಕು ಮೊಟಕುಗೊಳಿಸಲಾಗಿದೆ. ಆರೆಸ್ಸೆಸ್ಗೆ ನಿರ್ಬಂಧ ಹೇರಿರುವುದು ರಾಷ್ಟ್ರವಿರೋಧಿ ಕೃತ್ಯ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ನೌಕರರು ಭಾಗಿಯಾಗಬಾರದು ಅಂತಾ ಸಂವಿಧಾನ ಹೇಳಿದೆಯಾ?

ಆರೆಸ್ಸೆಸ್ ನಿರ್ಬಂಧ ಕುರಿತು ಇಂದು ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ಆರ್‌ಎಸ್‌ಎಸ್ ಸಾರ್ವಜನಿಕ ಸಾಮಾಜಿಕ ದೇಶಭಕ್ತಿ ಸಂಸ್ಥೆ. ಇದು ರಾಜಕೀಯ ಸಂಘಟನೆ ಅಲ್ಲ, ನೋಂದಣಿಯೂ ಆಗಿಲ್ಲ. ಪ್ರಧಾನಿಗಳೇ ಆರ್‌ಎಸ್‌ಎಸ್ ಸದಸ್ಯರು! ಗಣವೇಶಧಾರಿಯಾಗಿ ಸಂಘಟನೆಯಲ್ಲಿ ಸರ್ಕಾರಿ ನೌಕರ ಭಾಗಿಯಾಗಬಾರದು ಅಂತ ಯಾವ ಆದೇಶದಲ್ಲಿದೆ? ಯಾವ ಕೋರ್ಟ್ ಆದೇಶದಲ್ಲಿದೆ? ಸರ್ಕಾರಿ ನೌಕರರು ಭಾಗಿಯಾಗಬಾರದು ಎಂದು ಎಲ್ಲಿದೆ? ಪಿಡಿಓ ಅವರನ್ನ ಯಾಕೆ ಅಮಾನತು ಮಾಡಿದ್ದೀರಿ? ಕರ್ತವ್ಯಲೋಪ ಮಾಡಿದ್ದನಾ? ಭ್ರಷ್ಟಾಚಾರ ಮಾಡಿದ್ದನಾ? ಆರೆಸ್ಸೆಸ್ ಪಥಸಂಚಲನದಲ್ಲಿ ಭಾಗಿಯಾದರೆ ಅಮಾನತು ಮಾಡುವಂತೆ ಸಂವಿಧಾನದಲ್ಲಿ ಹೇಳಿದೆಯೇನು? ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದು ರಾಷ್ಟ್ರ ವಿರೋಧಿ ಸರ್ಕಾರ:

ಆರೆಸ್ಸೆಸ್‌ಗೆ ಈ ಸರ್ಕಾರ ಏನೂ ಮಾಡಲಾಗಲ್ಲ. ಆರೆಸ್ಸೆಸ್ ಸಿದ್ಧಾಂತಕ್ಕೂ ಏನೂ ಮಾಡಲಾಗೊಲ್ಲ. ಈ ದೇಶದ ಸಿದ್ಧಾಂತವೇ ಆರೆಸ್ಸೆಸ್ ಸಿದ್ಧಾಂತ. ಕಾಡಿನಲ್ಲಿ ಉಗ್ರರಿಗೆ ತರಬೇತಿ ನಡೆದಿದೆ. ಅದನ್ನ ನಿಲ್ಲಿಸೋಕೆ ನಿಮ್ಮಿಂದಾಗುತ್ತಾ? ಇದು ರಾಷ್ಟ್ರ ವಿರೋಧಿ ಸರ್ಕಾರ ಆಗ್ತಿದೆ. ಪಿಎಫ್‌ಐ ಆಗಲೇ ಬ್ಯಾನ್ ಆಗಿದೆ. ಅದಕ್ಕೆ ಮತ್ತೆ ಅನುಮತಿ ಕೊಡಲು ಆಗುತ್ತಾ? ಉತ್ತರ ಪ್ರದೇಶ, ಬಿಹಾರದಿಂದ ಧರ್ಮಗುರುಗಳು ಬಂದು ಪ್ರಚೋದನಕಾರಿ ಭಾಷಣ ಮಾಡ್ತಾರೆ ಅದಕ್ಕೆ ನಿರ್ಬಂಧ ಹೇರಿದ್ರ? ಇದೇ ದೇಶ ವಿರೋಧಿ ನಡೆ ಅನುಸರಿಸಿದರೆ ಮುಂದೆ ರಾಜ್ಯದಲ್ಲಿ ಜನ ಶಕ್ತಿ ಹಾಗೂ ರಾಜ್ಯ ಶಕ್ತಿ ನಡುವೆ ಸಂಘರ್ಷವಾಗಲಿದೆ ಎಚ್ಚರಿಸಿದರು

ಸ್ಥಳೀಯ ಸಮಸ್ಯೆಗಳ ಬಗ್ಗೆಯೂ ಮಾತನಾಡಿದ ಬೊಮ್ಮಾಯಿ, ಹಾದಿ ಬೀದಿಯಲ್ಲಿ 'ಇಸ್ಪೀಟ್ ಅಡ್ಡೆ' (ಇಸ್ಪೀಟ್ ಬಾರ್ ಅಡ್ಡೆ) ನಡೆಯುತ್ತಿವೆ. ಈ ಬಗ್ಗೆ ಎಸ್‌ಪಿ ಅವರಿಗೂ ಎಚ್ಚರಿಕೆ ಕೊಟ್ಟಿದ್ದೇನೆ. ಕ್ರಮಕೈಗೊಳ್ಳದಿದ್ದರೆ ಎಸ್‌ಪಿ ಕಚೇರಿ ಮುಂದೆ ಧರಣಿ ನಡೆಸುತ್ತೇನೆ. ಇದು ವ್ಯವಸ್ಥಿತವಾಗಿ ಪೊಲೀಸರ ಕುಮ್ಮಕ್ಕಿನಿಂದ ನಡೆಯುತ್ತಿದೆ. ಪೊಲೀಸ್ ಸ್ಟೇಷನ್‌ಗೆ ಇಷ್ಟು ಫಿಕ್ಸ್ ಆಗಿದೆ ಎಂದು ಆರೋಪಿಸಿದರು. ಇದೇ ವೇಳೆ ಕನ್ನೇರಿ ಸ್ವಾಮೀಜಿಗಳಿಗೆ ಪ್ರವೇಶ ನಿರ್ಬಂಧ ವಿಚಾರವಾಗಿ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ನಾನು ಈ ವಿಚಾರವಾಗಿ ಸ್ವಾಮೀಜಿ ಜೊತೆ ಮಾತನಾಡಿದೆ. ನಡೆದಿರೋ ಗೊಂದಲಕ್ಕೆ ವಿರೋಧ ಮಾಡಿ ಕೆಲವು ಪದ ಹಾಗೆ ಮಾತನಾಡಿದ್ದಾರೆ ಎಂದರು.