ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪತ್ನಿ ಸಮೇತ ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು. ಭಾರತ್ ಜೋಡೋ ಯಾತ್ರೆ ವೇಳೆ ಮಾಡಿದ ಸಂಕಲ್ಪದಿಂದ ರಾಜ್ಯದಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದ ಅವರು, ರಾಜ್ಯದ ಒಳಿತಿಗಾಗಿ ಪ್ರಾರ್ಥಿಸಿದ್ದಾಗಿ ತಿಳಿಸಿದರು.
ರಾಯಚೂರು (ಅ.22): ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ತಮ್ಮ ಪತ್ನಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದರು. ಮಂಚಾಲಮ್ಮ ದೇವಿಯ ದರ್ಶನದ ಬಳಿಕ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದ ಡಿಕೆ ಶಿವಕುಮಾರ ಅವರು ಬಳಿಕ ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳನ್ನು ಭೇಟಿಯಾಗಿ ಶ್ರೀಮಠದ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಶ್ರೀಮಠದಿಂದ ಡಿಕೆಶಿ ದಂಪತಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಶ್ರೀಮಠದಿಂದ ಮಂತ್ರಾಲಯಕ್ಕೆ ಬರಲು ಆಹ್ವಾನವಿತ್ತು:
ಶ್ರೀಗಳ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು, ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ವೇಳೆ ನಾನು ಶ್ರೀಮಠಕ್ಕೆ ಆಗಮಿಸಿದ್ದೆ. ಶ್ರೀಮಠದಿಂದ ಮಂತ್ರಾಲಯಕ್ಕೆ ಬರಲು ಆಹ್ವಾನವಿತ್ತು. ರಾಯರ ಅನುಗ್ರಹಕ್ಕಾಗಿ ಬಹಳ ದಿನಗಳಿಂದ ಬರಬೇಕೆಂದು ಇದ್ದೆ. ಗುರುಗಳ ಅನುಗ್ರಹ ಎಲ್ಲಕ್ಕೂ ಅವಶ್ಯಕ. ಇಂದು ವಿಶೇಷ ದಿನವಾಗಿದ್ದು, ಶ್ರೀಮಠದ ಭೂಮಿ ಪೂಜೆ ಕಾರ್ಯಕ್ರಮದಲ್ಲೂ ಭಾಗಿಯಾದೆ" ಎಂದರು.
ನನ್ನೊಂದಿಗೆ ಅನೇಕ ಮಂತ್ರಿ,ಶಾಸಕರು ಬಂದಿದ್ದಾರೆ:
ತಮ್ಮೊಂದಿಗೆ ಹಲವಾರು ಮಂತ್ರಿಗಳು ಮತ್ತು ಶಾಸಕರು ಭೇಟಿಗೆ ಬಂದಿದ್ದಾರೆ ಎಂದು ತಿಳಿಸಿದ ಡಿಕೆಶಿ, "ಕರ್ನಾಟಕ ರಾಜ್ಯಕ್ಕೆ ಮತ್ತು ಎಲ್ಲರಿಗೂ ಒಳಿತಾಗಲಿ ಎಂದು ರಾಯರಲ್ಲಿ ಪ್ರಾರ್ಥಿಸಿದ್ದೇನೆ. ಭಾರತ್ ಜೋಡೋ ಯಾತ್ರೆ ವೇಳೆ ಮಾಡಿದ ಸಂಕಲ್ಪದಿಂದಾಗಿ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ" ಎಂದು ಹೇಳಿದರು. ಆದರೆ, ಸಂಕಲ್ಪದ ವಿವರ ಕೇಳಿದಾಗ ನಗುತ್ತಾ ತೆರಳಿದರು.
